Wednesday, February 24, 2010

ನೆನಪೆಂಬ ಶಿವನ ಎಕ್ಕದ ಹೂ....

ಕಾಲ ಸರಿದಂತೆ ಒಂದಷ್ಟು ವ್ಯಕ್ತಿಗಳು ಕೇವಲ ನೆನಪುಗಳಾಗಿ ಮಾತ್ರವೇ ಮನೋಭಿತ್ತಿಯಲ್ಲಿ ಉಳಿದುಬಿಡುತ್ತಾರೆ. ಆ ಕೆಲ ಮುಖಗಳನ್ನು ನಾವು ಮತ್ತೆಂದೂ ನೊಡುವ, ಹುಡುಕುವ ಗೋಜಿಗೇ ಹೋಗುವುದಿಲ್ಲ. ಬದುಕ ಭಿತ್ತಿಯಲ್ಲಿ ಅವರು, ನಾವು ಅಲ್ಲಲ್ಲೇ ಇದ್ದರೂ ಮತ್ತಿನ್ನೆಂದೂ ಒಬ್ಬರನ್ನೊಬ್ಬರು ಕಾಣುವ ಪ್ರಯತ್ನ ಮಾಡುವುದಿಲ್ಲ. ಹುಡುಕಿದರೆ ಅವರು ಕೈಗೆ ಸಿಗುತ್ತಾರೆ, ಆದರೆ ಅದೇಕೋ ದಿಕ್ಕು ಬದಲಿಸಿದ ಬದುಕು ಮಾತ್ರ ನೆನಪುಗಳು ನೆನಪುಗಳಾಗೇ ಇರಲಿ ಬಿಡು ಎಂದು ನಮ್ಮನ್ನು ಕರೆದೊಯ್ದು ಬಿಡುತ್ತದೆ. ಒಂಥರಾ ಹೊಟ್ಟೆ ತುಂಬಿದ ಮೇಲೆ ಎಲೆಯಲ್ಲಿ ಉಳಿದ ಕಡೆಯ ತುತ್ತಿನಂತೆ... ಅದರ ಬಗ್ಗೆ ತಿರಸ್ಕಾರವಿರುವುದಿಲ್ಲ ಆದರೆ ನಾ ಹೊರಲಾರೆ ಅಂತಾ ಹೊಟ್ಟೆ ಹೇಳಿರುತ್ತದೆ. ಬಹುಶಃ ಕಾಲನ 'ಋಣ' ತೀರಿಸಲು ಬದುಕು ಅಲ್ಲಲ್ಲೇ ಬಿಟ್ಟ 'ಭಾರ' ಇದು ಇರಬಹುದು... ಹೀಗೆ ಮಗ್ಗಲು ಬದಲಿಸಿದ ಬದುಕಿನ ತಟ್ಟೆಯಲ್ಲಿ ಉಳಿದ ಅವರು, ಆ ವ್ಯಕ್ತಿಗಳು ದೂರದವರೇನೂ ಆಗಿರುವುದಿಲ್ಲ. ಜೀವನದ ಒಂದು ಘಟ್ಟದಲ್ಲಿ ಜೊತೆಗಾರರಾಗಿ ಸಂಭ್ರಮಿಸಿದ್ದವರೇ ಆಗಿರುತ್ತಾರೆ... ಆದರೆ ತನ್ನನ್ನೇ ತಾನು ಕಟ್ಟಿಕೊಳ್ಳುತ್ತಾ, ಹುತ್ತಗಟ್ಟುತ್ತಾ ಸಾಗುವ ಬದುಕು ಮತ್ತೆಲ್ಲೋ ಮುಖ ಮಾಡಿರುತ್ತದೆ. ಆ ಪಯಣದಲ್ಲಿ ಒಂದೊಂದೇ ಹೆಜ್ಜೆ ಸರಿದಂತೆ ಜೊತೆಗಾರರಾಗಿದ್ದವರು ವ್ಯಕ್ತಿಗಳಾಗಿ ಕಾಣಿಸತೊಡಗುತ್ತಾರೆ, ವ್ಯಕ್ತಿಗಳು ನಿಧಾನವಾಗಿ ಕೆಲ ಘಟನೆಗಳಾಗಿ ಸಾಂದ್ರಗೊಳ್ಳುತ್ತಾರೆ, ಆಮೇಲೆ ಘಟನೆಗಳೂ ಕರಗಿ ನೆನಪುಗಳು ಉಳಿಯುತ್ತವೆ. ಬದುಕು ಒಂದು ಹಂತ ಮುಟ್ಟಿ ಮಗ್ಗಲು ಬದಲಾಯಿಸಲು ಹೊರಟಾಗ ಆ ನೆನಪುಗಳು ಸಹ ಹತ್ತಿಯ ಎಳೆಯಂತೆ, ಎಕ್ಕದ ಗಿಡ ಗಾಳಿಗೆ ಹಾರಿಸಿದ ಬಿಳಿ ಪುಕ್ಕದಂತೆ ಹಗುರಾಗಿ ಅಲ್ಲಲೇ ಮನದ ಆಗಸದಲ್ಲಿ ಹಾರಿಕೊಂಡಿರುತ್ತವೆ.... ಅದರರ್ಥ ಆ ನೆನಪುಗಳು ಇನ್ನೇನು ಮನದ ಚಿಪ್ಪಿನಾಚೆ ಸಿಡಿದು ಅನಂತದಲ್ಲಿ ಲೀನವಾಗಲು ಸಜ್ಜು ಎಂದು.. ಅಟ್ಲೀಸ್ಟ್ ಆಗ ನಾವು ಕೊಂಚ ಅಲಟರ್್ ಆದರೆ ಅಂತಹ ನೆನಪುಗಳನ್ನು ಒಂದಿಷ್ಟು ದಾಖಲಿಸುವ ಪ್ರಯತ್ನ ಮಾಡಬಹುದೇನೋ... ಹೀಗೆ ಮಗ್ಗಲು ಬದಲಿಸಿದ ಬದುಕಿನ ಬೇಡದ ಕಾವು ಅಲ್ಲಲ್ಲೇ ಉಳಿದು ಆರಿ ಮರೆಯಾಗುವ ಮುನ್ನ ಆ ನೆನಪುಗಳಿಗೊಂದಿಷ್ಟು ಸೌಜನ್ಯ ವಿದಾಯ ಹೇಳಬೇಕಿದೆ.... ಹಾಗೆ ಮಾಡುವುದನ್ನು ನಾನು ಬದುಕಿನ ಋಣ ಅಂದುಕೊಂಡಿದ್ದೇನೆ.... ಎಂದೋ ಜೊತೆಗಾರರಾಗಿದ್ದು, ವ್ಯಕ್ತಿಗಳಾಗಿ, ನೆನಪುಗಳಾಗಿ ಕುಸಿದು ಇದೀಗ ಅಸ್ತಂಗತ ಕನಸಿನಂತೆ ಕಾಣುತ್ತಿರುವ ಆ ಒಂದು ಕಾಲದ ಕೆಲ ಗೆಳೆಯರ ನೆನಪಿನಲ್ಲಿ.....

No comments:

Post a Comment