Saturday, March 5, 2011

ಆದಿಮ ಮಿಂಚು

ಬಹಳ ಹಳೆಯ ಕಥೆ ಅದು. ಈಗ ಹೇಳುತ್ತೇನೆ.
...............
ಅವನ ಅವ್ವೆ ಅವನಿಗೆ ಚಿಕ್ಕಂದಿನಲ್ಲಿ ಹೇಳುತ್ತಿದ್ದಳು, 'ಸುತ್ತಣ ಜನರ ಬಾಳ ಬೆಳಗ ಬೇಕು ನೀನು' ಎಂದು. ಅವನು ಅದಕ್ಕಾಗಿಯೇ ತುಡಿದ. ಚಂದಿರನಾದ. ಜ್ಞಾನವನ್ನು ಎರವಲು ತಂದು ಬೆಳಕ ಚೆಲ್ಲತೊಡಗಿದ. ಹಾಲಿನಂಥ ಬೆಳಕು ಎಂದರು ಎಲ್ಲ. ಹಾಡಿ ಹೊಗಳಿದವರೇ ಸುತ್ತಲೂ. ಆದರೆ, ಕಡೆಗೊಂದು ದಿನ ಎರವಲು ಜ್ಞಾನವೇಕೆ ನೀನೇ ಬೆಳಕಾಗು ಎಂದರು. ಅವ್ವೆಯೂ ಕೂಡಾ.

ಸರಿ, ಜ್ಞಾನದ ತಲಾಶಿನಲ್ಲಿ ಅವ ದೂರ ಹೋದ. ಜ್ಞಾನವೆಂದರೇನು ಸುಲಭದ್ದೇ! ಬಲು ದೂರ, ದೂರ, ದೂರ...

ಕಡೆಗೆ ಚಂದಿರನಿದ್ದವನು ಬಿಂದುವಾದ. ಜ್ಞಾನ ದಕ್ಕಿತು. ಆದರೆ ಬಲುದೂರ ಹೋಗಿ ಬಿಟ್ಟಿದ್ದ. ನಕ್ಷತ್ರವಾಗಿದ್ದ. ಹಾಲಿನ ಬೆಳಕು ಈಗ ಮಿಣುಕು ಮಿಣುಕಾಗಿತ್ತು.

ಬೆಳಕು ಮಿಣುಕು ಮಿಣುಕಾಯಿತು ಎಂದರು ಎಲ್ಲ. 'ಜ್ಞಾನ ನಿನಗೆ ಮಾತ್ರ ದಕ್ಕಿದರೆ ಸಾಕೆ? ನಮಗೂ ಹರಿಸು ಭರಪೂರ' ಇದು ಹೊಸ ಬೇಡಿಕೆ. ಅವ್ವೆಯ ಆಸೆಯೂ ಅದೇ.

ಹತ್ತಿರ ಬಂದರೆ ಸುಟ್ಟು ಹೋದೀರಿ, ದೂರವೇ ಇದ್ದರೆ ಬರಿದೇ ಹಲಬುವಿರಿ.. ಏನು ಮಾಡುವುದು? ಎಂದು ಯೋಚಿಸಿಯೇ ಯೋಚಿಸಿದ. ಕಡೆಗೆ ಸಿಡಿದ.

ಬೆಳಕು, ಬೆಳಕೆಂದು ಹಪಹಪಿಸುತ್ತಿದ್ದವರ ಕಂಗಳು ಆ ಅಸೀಮ ಬೆಳಕ ಕಂಡು ಕತ್ತಲಾದವು.

ಇತ್ತ ಬೆಳಕಿನ ಪೊರೆಯ ಕಳಚಿದವನು ತನ್ನೊಳಗೇ ಕುಸಿದ. ಘನವಾದ. ಘನವೆಂದರೆ ಘನ. ಎಷ್ಟೆಂದರೆ ಅಂತರಂಗದ ಬೆಳಕು ಎಂದೂ ಸೋರದಷ್ಟು.

ಕೆಲ ಕಣ್ಣಿದ್ದವರು ಹೇಳಿದರು, 'ಬೆಳಕನ್ನು ಅಂಧಕಾರ ತಿಂದಿತು'. ಒಳಗಣ್ಣಿದ್ದವರು ಹೇಳಿದರು, 'ಅಂಧಕಾರದೊಳಗಿದೆ ಬೆಳಕು'.
...............

ಇದೆಲ್ಲವನ್ನೂ ಮೊದಲಿಂದ ತುದಿಯವರೆಗೆ ನೋಡಿದ ಅಲ್ಲಮ ನಕ್ಕ.

ಅತ್ತ ಮೇಲೆ ಶಿವಶಕ್ತಿಯರು ಒಬ್ಬರೊಳಗೊಬ್ಬರು ಮೈಚಾಚಿದ್ದರು. ಆದಿಮ ಬಿಂದುವಾಗಿದ್ದರು. ಆ ಪರಮಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಂಡ ಅಲ್ಲಮ ಮೆಲ್ಲನೆ ಉಸುರಿಕೊಂಡ, 'ನನಗೆ ಜ್ಞಾನ, ಅಂಧಕಾರ ಎರಡೂ ಒಂದೇ...'.

ಶಿವಶಕ್ತಿಯರ ಸಮರಸದಲ್ಲಿ ಮೂಡಿದ ಆದಿಮ ಮಿಂಚು ಅದು.

ಎರಡು ಕವನ

1

ಅದೊಂದು ದಿನ ಆಗಸದಲ್ಲಿ ನಕ್ಷತ್ರವೊಂದು ಮೂಡಲಿಲ್ಲ ;
ಮೂಡಲಿಲ್ಲ ಎಂದರೆ
ಮತ್ತೆಂದೂ ಮೂಡಲೇ ಇಲ್ಲ

ಆದರೆ ಯಾರ ಗಮನಕ್ಕೂ ಅದು ಬಾರಲಿಲ್ಲ
ಚಂದಿರನಿಗೂ...

ನಕ್ಷತ್ರಗಳೂ ಬೇವರ್ಸಿ ಸಾವು ಸಾಯುತ್ತವೆ
ಮನುಷ್ಯರೇನು...2

ಅವನೊಬ್ಬ ಬರಹಗಾರ
ಹೊಸ ಚಪ್ಪಲಿಯ ಒಮ್ಮೆ ಕೊಂಡು ತಂದ

ಚಪ್ಪಲಿ ಕಾಲು ಕಚ್ಚುವುದ ನಿಲ್ಲಿಸಿರಲಿಲ್ಲ
ಆಗಲೇ ಬ್ಲಾಗಿನಲ್ಲಿ ಅದರ ಕುರಿತು ಬರಹವೊಂದ ಹೆತ್ತಿದ್ದ

ಚಪ್ಪಲಿಗೋ ಗಲಿಬಿಲಿ

ಇವನ ಪಾದಕ್ಕೇ ನಾನು ಇನ್ನೂ ಒಗ್ಗಿಲ್ಲ
ಆಗಲೇ ಅಕ್ಷರದ ಮಾರುಕಟ್ಟೆಯಲ್ಲಿ ತಂದು....

ಅವನೊಬ್ಬ ಬರಹಗಾರ!!

Wednesday, February 23, 2011

ಆ ಮರ

ಆ ಮನೆಯಂಗಳದಲ್ಲಿ ಒಂದು ಮರವಿತ್ತು. ಅದು ಹಣ್ಣು ಬಿಡುತ್ತಿತ್ತಾದರೂ ಅದರ ಹಣ್ಣನ್ನು ಪಕ್ಷಿಗಳಷ್ಟೇ ತಿನ್ನುತ್ತಿದ್ದವು. ಮನುಷ್ಯರು ಬಾಯಿ ಚಪ್ಪರಿಸುವ ಮಾವು, ಹಲಸನ್ನಾಗಲಿ, ದಿನನಿತ್ಯದ ಬಳಕೆಯ ತೆಂಗಿನಕಾಯನ್ನಾಗಲಿ ನೀಡುವ ಭಾಗ್ಯ ಅದರದಾಗಿರಲಿಲ್ಲ. ಅದು ನೆರಳನ್ನು ನೀಡುತ್ತಿತ್ತಾದರೂ ಅದರ ನೆರಳಿನಡಿ ಹೋಗಿ ನಿಂತವರನ್ನು ಯಾರೂ ಕಂಡಿರಲಿಲ್ಲ. ಹೀಗಿರುವಾಗ ಅದಕ್ಕೊಂದು ಹೆಸರು ಇದ್ದೀತು ಎನ್ನುವ ಬಗ್ಗೆ ಯಾರಾದರೂ, ಯಾವತ್ತಾದರೂ ಯಾಕೆ ಯೋಚಿಸುತ್ತಾರೆ ಹೇಳಿ? ಯಾವುದೋ ಹಕ್ಕಿ ಹೀಗೆ ಹಾರುತ್ತಾ, ಅರೆಬರೆ ಕುಕ್ಕಿ ತಿಂದಿದ್ದ ಕಾಯಿಯೊಂದನ್ನು ಬಾಯಲ್ಲಿಡುದು ಹೋಗುವಾಗ ಹಿಕ್ಕೆ ಹಾಕುವ ಒತ್ತಡದಲ್ಲಿ ಬಾಯಲ್ಲಿನ ಬೀಜವನ್ನೂ ಉದುರಿಸಿ ಹೋಗಿತ್ತು. ಮೊದಲು ಹಿಕ್ಕೆ ಬಿತ್ತೋ, ಬೀಜ ಬಿತ್ತೋ ಅಥವಾ ಬೀಜ ಹಿಕ್ಕೆ ಒಟ್ಟಿಗೇ ಬಿದ್ದವೋ ಎನ್ನುವಂಥ ಬೀಜವೃಕ್ಷ ನ್ಯಾಯ ಅಥವಾ ಜಿಜ್ಞಾಸೆಯಲ್ಲಿ ತೊಡಗಲು ಅಲ್ಲಾರಿಗೂ ಪುರಸೊತ್ತು ಇರಲಿಲ್ಲ. ಒಂದು ವೇಳೆ ಇದ್ದರೂ ಅಂಥ ಜಿಜ್ಞಾಸೆಗೆ ಕಾರಣವಾಗುವ ಘನತೆ ಆ ಬೀಜಕ್ಕೆ ಇಲ್ಲ ಎಂದು ತಳ್ಳಿ ಹಾಕಿ ಬಿಡುತ್ತಿದ್ದರೇನೋ...
ಇರಲಿ, ವಿಷಯ ಇಷ್ಟೇ, ಪ್ರಪಂಚವೆಲ್ಲಾ ಸದ್ದಿನಲ್ಲಿ-ಸುದ್ದಿಯಲ್ಲಿ ಮುಳುಗಿದ್ದಾಗ ಅದ್ಯಾವುದೋ ಒಂದು ದಿನ ಈ ಬೀಜ ಆ ಮನೆಯ ಆವರಣದಲ್ಲಿ ಬಿತ್ತು. ಅದರ ಜೈವಿಕ ಪುಣ್ಯ ಮಳೆ, ಇಳೆ ಎರಡೂ ಅನುಕೂಲವಾಗಿದ್ದರಿಂದ ಅದರೊಳಗಿದ್ದ ದ್ರವ್ಯ ಹೊರನುಗ್ಗಿ ಮೊಳಕೆಯೂ ಮೂಡಿತು. ದಿನಗಳೆರಡು ಉರುಳಿತ್ತು, ಎರಡು ಪುಟಾಣಿ ಎಲೆ ಹೊತ್ತು ಹಸಿ ಹಸಿ ಸಸಿಯೊಂದು ತಲೆ ಎತ್ತಿ ನಿಂತಿತ್ತು. ಆದರೆ ಅದ್ಯಾವುದನ್ನೂ ಗಮನಿಸುವಷ್ಟು ಪುರುಸೊತ್ತು ಆ ಮನೆಯವರಾರಿಗೂ ಇರಲಿಲ್ಲ. ಗಡಿಬಿಡಿ, ಪಿಟಿಪಿಟಿ ಮಾಡಿಕೊಂಡು ಬಲೇ ಧಾವಂತದಲ್ಲಿ ಬದುಕುತ್ತಿದ್ದ ಅಲ್ಲಿನ ಜನಕ್ಕೆ ಗಿಡ ಸೊಂಟದೆತ್ತರ ಬೆಳೆದಾಗ ಕಣ್ಣಿಗೆ ಬಿದ್ದಿತ್ತು. ಕಾಂಪೌಂಡು ವಿಶಾಲ ಇದ್ದರಿಂದಲೋ ಅಥವಾ ಎಂದೂ ಮುಗಿಯದ ಧಾವಂತದಲ್ಲಿ ಅವರೆಲ್ಲಾ ತಮ್ಮ ಬದುಕನ್ನು ಸಿಕ್ಕಿಸಿಕೊಂಡಿದ್ದರಿಂದಲೋ ಅಂತೂ ಆ ಗಿಡ ಉಳಿದು ಬಿಟ್ಟಿತು. ಮೂರ್ನಾಲ್ಕು ವರ್ಷಕ್ಕೆ ಎಂಟ್ಹತ್ತು ಅಡಿ ಮೀರಿ ತನ್ನ ಇರುವಿಕೆಯನ್ನು ರಸ್ತೆ ಬದಿಯಲ್ಲಿ ಸಾಗುವವರಿಗೆಲ್ಲಾ ಸಾರತೊಡಗಿತು. ಸಣ್ಣ ಸಣ್ಣ ಹೂ ಬಿಡುತ್ತಾ, ಕಾಯಿ ಕಟ್ಟುತ್ತಾ ಜೀವ ಬದುಕಿನ ಅನನ್ಯತೆಗೆ ಅಚ್ಚರಿಯಿಂದ ಹಿತವಾಗಿ ತೆರೆದುಕೊಂಡಿತು.
...........

ಹೀಗಿರುವಾಗ ಆ ಮನೆಯಲ್ಲಿ ಕೂಸೊಂದು ಹುಟ್ಟಿತು. ಅಳು, ಲಾಲಿ, ಪುಟ್ಟ ಗಂಟಲಿನಿಂದ ಉಬ್ಬುವ ಚಿತ್ರ, ವಿಚಿತ್ರ ಸದ್ದುಗಳು, ಜೋಗುಳ ಇವೆಲ್ಲವನ್ನು ಮರ ಕೇಳಿಸಿಕೊಳ್ಳತೊಡಗಿತು. ಸಪ್ಪೆ ಆಹಾರ ತಿನ್ನುವ ಆ ಪುಟಾಣಿ ಕಂದಮ್ಮನ ಹಸಿ ಮೈಯ ವಾಸನೆ, ಸ್ನಾನದ ನಂತರ ಆ ಕಂದಮ್ಮನ ತಲೆಗೆ ನೀಡುವ ಸಾಮ್ರಾಣಿ ಹೊಗೆ, ಜೋಕಾಲಿಯ ಜೀಕು, ಮಗುವಿರುವ ಮನೆಯಲ್ಲಿನ ಗಡಿಬಿಡಿ ಇವೆಲ್ಲ ಆಗಷ್ಟೇ ಮರವಾಗಿದ್ದ ಆ ಗಿಡದಲ್ಲಿ (ಹಾಗೆನ್ನಬಹುದೇ!) ವಿಚಿತ್ರ ಕುತೂಹಲ ಹುಟ್ಟಿಸಿತ್ತು.
ಅದೊಂದು ದಿನ ಮನೆಯಾಚೆಗೆ ಕೂಸನ್ನು ತಂದಾಗ ಮರದಲ್ಲೂ ಎಂಥದೋ ಪುಳಕ! ದಿನ ಕಳೆದಂತೆ ಆ ಹೆಣ್ಣು ಕೂಸು ಮತ್ತೊಬ್ಬರ ಆಸರೆಯಿಂದ ನಿಂತು ಗೆಜ್ಜೆ ಕಟ್ಟಿದ ಪುಟ್ಟ, ಪುಟ್ಟ ಕಾಲನ್ನು ನೆಲಕ್ಕೆ ಕುಟ್ಟುತ್ತಾ ಥೈ ಥೈ ಎನ್ನಿಸುವುದೂ ನಡೆದಿತ್ತು. ಮತ್ತಷ್ಟು ದಿನ ಮೂಡಿದಂತೆ ಅತ್ತಿತ್ತ ದೇಕುವುದೂ ಸಾವಕಾಶವಾಯಿತು. ಆಮೇಲೊಂದು ದಿನ ಅಂಬೆಗಾಲು ಹಾಕುವುದನ್ನು ಕಲಿತು ಕಡೆಗೊಮ್ಮೆ ತಾನೇ ಹೊಸಲು ದಾಟಿತು. ಆ ಮೂಲಕ ಎಲ್ಲರ ಬಾಯಿಯಲ್ಲೂ ಸಕ್ಕರೆ ಕರಗಿತು.
ಮಗುವಿನ ಈ ಎಲ್ಲ ಪುಟಿಪುಟಿಯುವ ಚಟುವಟಿಕೆ ನೋಡುವುದು ಮರದ ಪಾಲಿಗಂತೂ ಹಬ್ಬವೇ ಆಗಿ ಹೋಯಿತು. ಆದರೆ ಅದೇಕೋ, ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಅಂತೂ ಆ ಮಗು ಒಂದು ದಿನಕ್ಕೂ ಆ ಮರದತ್ತ ಸುಳಿಯಲೇ ಇಲ್ಲ. ಇತ್ತ ತಾನು ಒಂದಿಂಚೂ ಕದಲುವುದು ಸಾಧ್ಯವೇ ಇಲ್ಲ ಎನ್ನುವುದು ಗೊತ್ತಿದ್ದರೂ ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಆ ಮರ ಆ ಪುಟ್ಟ ಕಂದಮ್ಮನೆಡೆಗೆ ತುಡಿಯುವುದ ಬಿಡಲಿಲ್ಲ...
.............

ಅಂತೂ ಮರ ಈಗ ಭರ್ಜರಿಯಾಗಿ ಹಬ್ಬಿ ನಿಂತಿತ್ತು. ತನಗೆ ಜಾಗ ನೀಡಿದ ಆ ಮನೆಗೆ ಒಂದಿಷ್ಟೂ ತೊಂದರೆಯಾಗದಂತೆ ರಸ್ತೆಯ ಕಡೆಗೆ ಬಲಿಷ್ಠ ರೆಂಬೆಗಳನ್ನು ಹಬ್ಬಿಸಿ, ಮನೆಯ ಆಯದ ಬಗ್ಗೆ ಜಾಗ್ರತೆವಹಿಸಿ ಬೆಳೆದುಕೊಂಡಿತ್ತು. ತನ್ನ ಕದಲದ ದೇಹವನ್ನಲ್ಲದೆ ಅದರೊಳಗೆ ಅದೆಂಥದೋ ತೀವ್ರ ಭಾವನೆಯನ್ನೂ ಹಬ್ಬಿಸಿಕೊಂಡಿತ್ತು. ಆಕಾಶದಗಲಕ್ಕೂ ಹಾಸುವಂಥ ಭಾವನೆ ಅದು. ಹೌದು, ಆ ಮರ ಆ ಮನೆಯಲ್ಲಿ ಜೀವವುಕ್ಕಿಸಿದ ಆ ಪುಟ್ಟ ಕಂದಮ್ಮನನ್ನು ಎಳೆವೆಯಿಂದಲೇ ಹಚ್ಚಿಕೊಂಡು ಬಿಟ್ಟಿತ್ತು. ಮನುಷ್ಯ ಭಾಷೆಯಲ್ಲಿ ಅದನ್ನು ಪ್ರೇಮವೆನ್ನಬಹುದೇನೋ ಆದರೆ ಮರದ ಭಾಷೆಯಲ್ಲಿ ಏನೆನ್ನಬಹುದು? ಗೊತ್ತಿಲ್ಲ...

ಇಂಥ ಮರ ತಾನು ಹೂಬಿಟ್ಟು ನಿಂತಾಗ ಆ ಹುಡುಗಿ ಏನಾದರೂ ಹೊರ ಬಂದರೆ ಸಾಧ್ಯವಾದಷ್ಟೂ ಹೆಚ್ಚು ಹೂವುಗಳ ಉದುರಿಸುತ್ತಿತ್ತು. ಗಾಳಿ ತೀಡಿದಾಗ ತನ್ನೊಡಲಿನ ಕಂಪನ್ನೆಲ್ಲಾ ಆಕೆಯ ರೂಮಿನತ್ತ ಹರಡುವಂತೆ ತೂರುತ್ತಿತ್ತು. ಆದರೆ ಆ ಹುಡುಗಿಗೆ ಮಾತ್ರ ಇದ್ಯಾವುದರ ಪರಿವೆಯೂ ಇರಲಿಲ್ಲ. ಮೂರುವರೆ ವರ್ಷದಿಂದಲೇ ಅದರ ಧಾವಂತದ ದಿನಚರಿ ಶುರುವಾಗಿ ಹೋಯಿತು. ವಿಶಾಲ ಕಾಂಪೌಂಡಿನಲ್ಲಿ ಹಿಂದಕ್ಕೆ ಆತುಕೊಂಡಂತೆ ಇದ್ದ ಆ ಮರವನ್ನು ಆಕೆ ಒಮ್ಮೆಯಾದರೂ ದಿಟ್ಟಿಸಿದ್ದಳೋ ಗೊತ್ತಿಲ್ಲ. ಚಿಕ್ಕಂದಿನಲ್ಲಿ ತನ್ನ ಮನೆಯ ಚಿತ್ರ ಬರೆದಿದ್ದಾಗ ಅದರಲ್ಲಿ ಆ ದೊಡ್ಡ ಮರವನ್ನೆನಾದರೂ ಕಾಣಿಸಿದ್ದಳೇ! ಬಹುಶಃ ಇರಲಿಕ್ಕಿಲ್ಲ. ಇನ್ನು ಹದಿಹರೆಯ, ಕಾಲೇಜು, ಡಿಗ್ರಿ, ಕೆಲಸ ಎಂದೆಲ್ಲಾ ಭರಪೂರ ಯೌವ್ವನದಲ್ಲಿ ಜೀಕುವಾಗ ಆ ಮರದ ಇರುವಿಕೆಯ ಬಗ್ಗೆಯೇನಾದರೂ ಆಕೆಗೆ ಅಕ್ಕರೆ ಮೂಡಿತ್ತೇ? ಅದೂ ಗೊತ್ತಿಲ್ಲ...

ಅದೊಂದು ಬಾರಿ ಯಾವಾಗಲೋ ಮೊಬೈಲು ಹಿಡಿದು ಹಾಗೇ ಕಾಂಪೌಡಿನಲ್ಲಿ ಸುತ್ತುತ್ತಾ ಮಾತನಾಡುವಾಗ ಆ ಮರವಿದ್ದೆಡೆಗೆ ಹೆಜ್ಜೆ ಹಾಕುತ್ತಾ ಏಳೆಂಟು ಅಡಿ ಹತ್ತಿರದವರೆಗೂ ಹೋಗಿದ್ದಳು. ಅಷ್ಟೇ.
ಬಂಗಲೆ ಅಲ್ಲವಾದರೂ ಬಂಗಲೆಯಂಥ ಮನೆ ಅದಾಗಿದ್ದ ಕಾರಣ ಆಕೆ ಮನೆಯಲ್ಲಿ ಇರುವ ಹೊತ್ತಲ್ಲಿ ಹೊರಗೆ ಬರುತ್ತಿದ್ದುದೇ ಕಡಿಮೆ. ಬಂದರೂ ಕಾಂಪೌಂಡಿನ ಮಧ್ಯದಲ್ಲಿದ್ದ ಲಾನ್ ದಾಟಿ ಕೈತೋಟದ ಕಡೆಗೆ ಸಾಗುತ್ತಿದ್ದುದು ಬಹಳ ಕಡಿಮೆ. ಹಾಗೊಮ್ಮೆ ಕೈದೋಟಕ್ಕೆ ಹೆಜ್ಜೆ ಇಟ್ಟರೂ ಹಿಂದಿನ ಸಾಲಿನವರೆಗೆ ಹೋಗಿದ್ದೇ ಇಲ್ಲ. ಅವಳಿಗೆ ಅದೇಕೋ, ಆ ಮರ, ಗಿಡ, ಲಾನ್ ಎಲ್ಲವೂ ಆ ಮನೆಯ ಗೋಡೆಯಷ್ಟೇ ಜೀವಂತ!
.............

ಹೀಗಿರುವಾಗ ಆ ಮರ ಮೈಯೆಲ್ಲಾ ಕಿವಿಯಾಗಿಸಿಕೊಂಡು ಹಗಲು ಇರುಳು ಮನೆಯ ಗೋಡೆಗಳಿಂದ ಹೊಮ್ಮುವ ತರಂಗಗಳ ಸೋಸುತ್ತಿತ್ತು. ಎಂದಾದರೂ ಆ ಹುಡುಗಿ ತನ್ನ ಬಗ್ಗೆ ಒಂದಾದರೂ ಮಾತು ಆಡಬಹುದೇನೋ ಎಂದು ಎಲೆಗಳ ಅರಳಿಸಿ ಕೇಳುತ್ತಿತ್ತು. ಆದರೆ ಅಂತಹ ಒಂದು ಶಬ್ಧವೂ ಅದರ ಕಿವಿಗೆ ಬೀಳಲಿಲ್ಲ. ಮರದ ಪಾಡಿಗೆ ಮರ ಆ ಹುಡುಗಿಯನ್ನು ಪ್ರೇಮಿಸುತ್ತಿತ್ತು. ಅತ್ತ ಆ ಹುಡುಗಿ ತನ್ನ ಪಾಡಿಗೆ ತಾನು ಬದುಕ ಸಂಭ್ರಮಿಸಿದ್ದಳು. ವಯೋಸಹಜವಾಗಿ ಆಕೆಯೂ ಪ್ರೀತಿ, ಪ್ರೇಮದಲ್ಲಿ ತುಯ್ಯುತ್ತಾ, ಗೆಳೆಯ, ಗೆಳತಿಯರ ಗುಂಪಿನಲ್ಲಿ ಹಿಗ್ಗುತ್ತಾ ಸಾಗಿದ್ದಳು. ಅವಳ ಬಾಳಿನ ಯಾವ ಪುಟದಲ್ಲೂ "ಆ ಮರದ' ಪ್ರಸ್ತಾಪವೇ ಇರಲಿಲ್ಲ.
.............

ಮುಂದೊಂದು ದಿನ ಹುಡುಗಿಯ ಬಾಳಲ್ಲಿ ಹುಡುಗ ಬಂದ. ಮನೆಯವರೆಲ್ಲಾ ಸೇರಿ ಅವರಿಗೆ ಮದುವೆ ಮಾಡಿದರು. ಮದುವೆ ಮಾಡುವ ವೇಳೆ ಶಾಮಿಯಾನ ಹಾಕಲು ಹಗ್ಗ ಕಟ್ಟುವ ಸಲುವಾಗಿ ಬಲಿಷ್ಠವಾಗಿದ್ದ ಆ ಮರದ ಕಾಂಡಕ್ಕೆ ಬರೋಬ್ಬರಿ ಏಳಿಂಚಿನ ಮೊಳೆಯನ್ನೂ ಹೊಡೆದರು. ಮೈಯೆಲ್ಲಾ ಸಿಗಿದು ಹಾಕುವಂಥ ನೋವಾದರೂ ಮರ ಮಾತ್ರ ಶಾಮಿಯಾನ ಒಂದಿನಿತೂ ಅಲುಗಾಡದಂತೆ ಬಿಗಿಪಟ್ಟಿನಲ್ಲಿ ಮೊಳೆಯನ್ನು ಹಿಡಿದುಕೊಂಡಿತ್ತು. ಮದುವೆ ಮುಗಿದು ಶಾಮಿಯಾನ ಕಳಚಿದರು. ಯಾವುದಾದರೂ ಸಭೆ, ಸಮಾರಂಭ ಇದ್ದೇ ಇರುತ್ತದೆ, ಆಗೆಲ್ಲಾ ಶಾಮಿಯಾನ ಹಾಕಲೇ ಬೇಕಾಗುತ್ತದೆ ಎನ್ನುವ ಕಾರಣದಿಂದ ಮೊಳೆಯನ್ನು ಮರದಲ್ಲೇ ಬಿಟ್ಟರು. ಮರವಾದರೂ ಅಷ್ಟೇ ಆ ಮೊಳೆಯನ್ನು ಅಷ್ಟೇ ಜತನದಿಂದ ಬಿಗಿಯಾಗಿ ಹಿಡಿದುಕೊಂಡಿತು.
.............

ಮದುವೆ ನಂತರ ಹುಡುಗಿ ಅಷ್ಟಾಗಿ ಆ ಮನೆಯಲ್ಲಿ ಕಾಣುತ್ತಿರಲಿಲ್ಲ. ಆಗೊಮ್ಮೆ, ಈಗೊಮ್ಮೆ ಬರುತ್ತಿದ್ದಳು. ಹಾಗೆ ಬಂದಾಗಲೂ ಎನೋ ಧಾವಂತ, ಗಡಿಬಿಡಿ. ರಸ್ತೆ, ಗೇಟು, ಮನೆ ಇದಿಷ್ಟೇ ಆಕೆ ಹೋಗಿಬರುವ ಹಾದಿ. ಆರು ತಿಂಗಳಿಗೋ, ವರ್ಷಕ್ಕೋ ಏನಾದರೂ ವಿಶೇಷ ಇದ್ದಾಗ ಬಂದು ಹೋಗುತ್ತಿದ್ದಳು. ಹಾಗೆ ಬಂದಾಗ ಕೆಲ ಬಾರಿ ಲಾನ್ನತ್ತ ಸುಳಿಯುತ್ತಿದ್ದಳು. ಅಷ್ಟೇ. ಅದರಾಚೆಗೆ ಅವಳ ಒಂದು ಹೆಜ್ಜೆಯೂ ಮೂಡಲಿಲ್ಲ.
.............

ತನ್ನದೇ ಓಘದಲ್ಲಿ ಬದುಕ ಹೀರುತ್ತಾ, ಸಮಾಗಮದ ಸುಖದಿ ಹದವಾಗಿ ಈಸುತ್ತಾ, ಬಿಸಿಯುಕ್ಕುವ ತೋಳಿನಲಿ ತೊನೆಯುತ್ತಾ, ಕಡೆಗೊಮ್ಮೆ ಸ್ವರ್ಗದಲ್ಲಿ ತೇಲುವಾಗ ತನ್ನೊಳಗೆ ಜೀವವೊಂದನ್ನೂ ಅಂಕುರಿಸಿಕೊಂಡಳು ಹುಡುಗಿ. ತವರಿಗೆ ಬಂದು, ಮುದ್ದಾದ ಮಗುವನ್ನು ಪ್ರಪಂಚಕ್ಕೆ ಕರೆದು ಮತ್ತೊಂದು ದಿನ ಮಗುವಿನೊಂದಿಗೆ ಹೊರಟೂ ಬಿಟ್ಟಳು.
............

ಅದೊಂದು ದಿನ ದೂರದ ಮನೆಯ ಟೆರೇಸಿನಲ್ಲಿ, ಮಿನುಗುವ ರಾತ್ರಿ ಹೊತ್ತಲ್ಲಿ, ಯಾರೋ ಇಬ್ಬರು ಗೆಳೆಯರು ಕೂತು ಗುಂಡು ಹಾಕುತ್ತಿದ್ದರು. ಅವರ ಮಾತುಗಳು ಗಾಳಿಯಲ್ಲಿ ಕರಗಿ ಹಾಗೇ ಹರಿದು ಬರುತ್ತಿದ್ದವು. ಒಬ್ಬ ಹೇಳುತ್ತಿದ್ದ, ನನ್ನದು ನಿಸ್ವಾರ್ಥ ಪ್ರೀತಿ. ಅವಳು ನನ್ನನ್ನು ಪ್ರೀತಿಸುತ್ತಾಳೋ, ಇಲ್ಲವೋ ಗೊತ್ತಿಲ್ಲ ಆದರೆ ನಾನು ಮಾತ್ರ ಯಾವುದೇ ನಿರೀಕ್ಷೆ ಇಲ್ಲದೆ ಅವಳನ್ನು ಪ್ರೀತಿಸುತ್ತೇನೆ ಎಂದು. ಇದನ್ನು ಕೇಳಿಸಿಕೊಂಡ ಮರ ಅದೇ ಮೊದಲ ಬಾರಿಗೆ ಹಾಗೂ ಕಡೆಯ ಬಾರಿಗೆ ಯೋಚಿಸತೊಡಗಿತು. ಒಂದು ವೇಳೆ ಪ್ರೀತಿ ಎನ್ನುವುದು ಮನದ ಒಳಗೆ ಮಧುರ ಭಾವನೆ ಹುಟ್ಟಿಸದೆ ಕೋಪವನ್ನೋ, ದ್ವೇಷವನ್ನೋ ಹುಟ್ಟಿಸುವಂತಿದ್ದರೆ ಆಗ ಯಾರಾದರೂ ಪ್ರೀತಿಸುತ್ತಿದ್ದರೇ? ಮಧುರ ಭಾವನೆ ಮೂಡದೆ ಪ್ರೀತಿ ಹುಟ್ಟಬಲ್ಲದೇ? ಪ್ರೀತಿಯಲ್ಲಿ ತಿರಸ್ಕಾರದ ಅಸಹನೀಯ ನೋವು ಉಂಡಾಗಲೂ ಆ ನೋವಿನ ಮೇಲೆ 'ಅದು ನನ್ನದೇ ನೋವು' ಎನ್ನುವ ಅತೀವ ಭಾವ ಇರುವುದಿಲ್ಲವೇ? ಇಷ್ಟೆಲ್ಲಾ ಇದ್ದಮೇಲೆ ಅಲ್ಲಿ ಸ್ವಾರ್ಥ ಇದೆ ಎಂದಾಯಿತಲ್ಲವೇ? ಎಂದುಕೊಂಡಿತು.
ಸ್ವಾರ್ಥ ಎನ್ನುವುದು ಈ ಮನುಷ್ಯರು ತಿಳಿದುಕೊಂಡಿರುವಂತೆ ನಿಜಕ್ಕೂ ಅಷ್ಟು ಕೆಟ್ಟ, ಕಟು ಪದ ಅಲ್ಲವೇನೋ ಎಂದುಕೊಂಡು ನಿಟ್ಟುಸಿರು ಬಿಟ್ಟಿತು.
............

ಅದೊಮ್ಮೆ ಆ ಮನೆಯ ಯಜಮಾನ ಯಾರೋ ನಾಲ್ಕಾರು ಮಂದಿಯನ್ನು ಕರೆದು ಏನೋ ಮಾತನಾಡಿ ಕಳುಹಿಸಿದ. ಮಾರನೆಯ ದಿನ ಗರಗಸ ಹೊತ್ತು ತಂದ ಅವರು ಆ ಮರದ ಬುಡಕ್ಕೆ ಅಲಗು ತಾಕಿಸಿ ಲಯಬದ್ಧವಾಗಿ 'ಸರ್ ಬರ್' ಎಂದು ಕೊಯ್ಯ ತೊಡಗಿದರು. ಇಬ್ಬನಿ ಹೊದ್ದು ಹಸಿ ಮೈಯಲ್ಲಿ ಇದ್ದ ಮರ ಒಮ್ಮೆಲೇ ತಡಬಡಾಯಿಸಿತು. ಇನ್ನೇನು ಒಂದೆರಡು ಗಂಟೆಗಳಲ್ಲಿ ತನ್ನನ್ನು ಕತ್ತರಿಸಿ ಬಿಸಾಕುತ್ತಾರೆ ಎನ್ನುವುದು ಖಾತ್ರಿಯಾಗುವ ಹೊತ್ತಿಗೆ ಕಾಂಡದ ಕಾಲುಭಾಗ ಸಡಿಲವಾಗಿತ್ತು. ಅಸಹನೀಯ ನೋವು ಪ್ರತಿಜೀವಕೋಶದಲ್ಲೂ ಹಬ್ಬಿತ್ತು. ಅದರ ನಡುವೆಯೂ ತಾನು ಪ್ರೀತಿಸಿದ ಹುಡುಗಿ ಮುಂದಿನ ಬಾರಿ ಬಂದಾಗ ನಾನು ಇಲ್ಲದೆ ಇರುವುದನ್ನು ಗುರುತಿಸಬಹುದೇ? ಆ ಬಗ್ಗೆ ಮನೆಯವರನ್ನು ಕೇಳಬಹುದೇ? ಎನ್ನುವ ಪ್ರಶ್ನೆಗಳು ಸುಳಿದವು. ಜೀವನದಲ್ಲಿ ತನ್ನ ಬಗ್ಗೆ ಅರೆಕ್ಷಣವೂ ಯೋಚಿಸಿರದ, ಒಂದಕ್ಷರವೂ ಮಾತನಾಡಿರದ ಹುಡುಗಿಯಿಂದ ಅದನ್ನೆಲ್ಲಾ ನಿರೀಕ್ಷಿಸಲು ಸಾಧ್ಯವಿಲ್ಲವೇನೋ ಎಂದುಕೊಂಡಿತು.

ಅಷ್ಟರಲ್ಲಿ ಗರಗಸ ಕಾಂಡದ ಅರ್ಧಕ್ಕೆ ಬಂದು ನಿಂತಿತ್ತು. ಕೆಲಸಗಾರರು ಕೆಲಹೊತ್ತು ಕತ್ತರಿಸುವುದ ನಿಲ್ಲಿಸಿದರು. ಮರದ ಮತ್ತೊಂದು ಬದಿಗೆ ಕಟ್ಟಿರುವ ಹಗ್ಗಗಳ ಬಿಗಿಯನ್ನು ಖಾತ್ರಿ ಪಡಿಸಿಕೊಂಡು ಒಂದೆರಡು ನಿಮಿಷ ಬೀಡಿ ಸೇದಲು ಅನುವು ಮಾಡಿಕೊಂಡರು.

ಇತ್ತ ಸಾವು, ಬದುಕಿನ ಮಧ್ಯೆ ಸರಿಯಾಗಿ ಅರ್ಧದಲ್ಲಿ ನಿಂತಿದ್ದ ಮರ ಒಂದು ವೇಳೆ ನಾನೇನಾದರೂ ಇದೇ ಆವರಣದಲ್ಲಿ ಮತ್ತೊಮ್ಮೆ ಹುಟ್ಟಿದರೆ ಹೀಗೆ ಕಡೆಯ ಸಾಲಿನಲ್ಲಿ ಹುಟ್ಟಬಾರದು ಎಂದು ಆಶಿಸುತ್ತಾ ಕಡೆಯ ಪ್ರಯತ್ನವೆನ್ನುವಂತೆ ಒಂದು ಬೀಜವನ್ನು ಮನೆಗೆ ಹತ್ತಿರವಾಗಿ ಬೀಳುವಂತೆ ಸಿಡಿಸಿತು. ಆದರೆ ಅಸಹನೀಯ ನೋವಿನಲ್ಲಿ ಅರೆಬರೆ ಜೀವದಲ್ಲಿದ್ದ ಆ ಮರದ ಕೊಂಬೆಗೆ ಅದು ಸಾಧ್ಯವಾಗದೆ ಬೀಜ ಎತ್ತಲೋ ಸಿಡಿದು ಚರಂಡಿ ಪಾಲಾಯಿತು.

ಕೆಲಸಗಾರರು ಮತ್ತೆ ಶುರುವಿಟ್ಟರು. ಅಷ್ಟರಲ್ಲಿ ಸಣ್ಣದೊಂದು ಆಸೆ ಸಾಯುವ ಮರದಲ್ಲಿ ಮೂಡಿತು. ಅಲ್ಲ, ನನ್ನ ಈ ಕೊಂಬೆ, ಕಾಂಡಗಳನ್ನು ಕತ್ತರಿಸಿ ಅವನ್ನೆಲ್ಲಾ ಆ ನನ್ನ ಹುಡುಗಿ ತನ್ನ ಗಂಡನೊಡಗೂಡಿ ಕಟ್ಟಿಸುವ ಮನೆಗೆ ಕಿಟಕಿ, ಬಾಗಿಲು, ಚೌಕಟ್ಟಾಗಿ ಬಳಸಬಹುದೇನೋ ಎಂದು! ಇಂಥ ಒಂದು ನಿರೀಕ್ಷೆ ಹುಟ್ಟಿದ್ದೇ ತಡ ಮರ ತಾನೇ ಮುಂದಾಗಿ ನೆಲದ ಮೇಲೆ ದಭಾರ್ ಎಂದು ಒರಗಿತು.
............

ಆ ಹುಡುಗಿ ಮನೆಯನ್ನೇ ಕಟ್ಟಿಸಲಿಲ್ಲ. ಬದಲಿಗೆ ದುಬಾರಿ ಏರಿಯಾದಲ್ಲಿ ಲಕ್ಷುರಿ ಅಪಾರ್ಟ್ ಮೆಂಟ್ ಒಂದ ಕೊಂಡಳು. ಆ ಮನೆಯಲ್ಲಿ ತೇಗ, ಬೀಟೆಯ ಕಿಟಕಿ, ಬಾಗಿಲುಗಳು ಇದ್ದವು.
.............

ಅಂದಹಾಗೆ, ಮರಗಳಿಗೇನಾದರೂ ಆತ್ಮವಿರುತ್ತದೆಯೇ?
ಈ ಕಥೆಯ ಮಟ್ಟಿಗೆ ಹೇಳುವುದಾದರೆ ಇರುವುದಿಲ್ಲ ಎಂದುಕೊಳ್ಳುವುದೇ ವಾಸಿ. ಕಡೆಯ ಪಕ್ಷ ಆ ಮರದ ನಿರೀಕ್ಷೆಗಳಾದರೂ ಹಾಗೇ ಹಸಿರಾಗಿರಲಿ...

Sunday, October 3, 2010

ಉಸಿರೊಳಗಣ ಬಣ್ಣ

And the line goes:
multitude are there n 'l be,
but honour yourself with the humbleness of accepting commoners commonness
but not really being one...


ಕಳೆದುಕೊಳ್ಳುವ ಕೊನೆಯ ಹಂತದಲ್ಲಿದ್ದ ಅವನು ಕಡೆಯ ಬಾರಿಗೆಂದು ಹುಡುಕಲು ಆರಂಭಿಸಿದ.
ಕಟ್ಟಕಡೆಯ ಬಾರಿಯಾದರೂ ತನ್ನದೊಂದು ಕನಸಿನ ಸೌಧ ಕಟ್ಟಲು ಸಾಧ್ಯವೇ? ಮಹತ್ವಾಕಾಂಕ್ಷೆಗಳ ಮೂಟೆಯನನ್ನು ಪಕ್ಕಕ್ಕಿಟ್ಟು ಅದರಲ್ಲಿದ್ದ ಒಂದಾದರೂ ಬೀಜವನ್ನು ನಿಜಕ್ಕೂ ವಾಸ್ತವದಲ್ಲಿ ಮೊಳಕೆ ಒಡೆಯಿಸಲು ಸಾಧ್ಯವೇ ಎನ್ನುವಲ್ಲಿಗೆ ಬಂದು ನಿಂತಿತ್ತು ಜೀವನ..

ಅಲ್ಲಿಗೆ ಅಂತಿಮ ಹೋರಾಟಕ್ಕೆ ರಣಾಂಗಣ ಸನ್ನದ್ಧವಾಗಿತ್ತು. ಅಲ್ಲಿ ಶತೃವೂ ಅವನೇ ಮಿತ್ರನೂ ಅವನೇ, ಹೆದೆಯೇರಿಸುವ ಧನುರ್ಧಾರಿಯೂ ಅವನೇ, ತೋಪು ಹಾರಿಸುವ ಫೌಜುದಾರನೂ ಅವನೇ. ತನ್ನೊಡನೆ ತನಗೇ ಹೋರಾಟ. ಜೀವನ ಪಾತ್ರೆಯಲ್ಲಿನ ಬಣ್ಣಗಳೆಲ್ಲಾ ಅದಾಗಲೇ ಸೂಕ್ತ ಆರೈಕೆ ಇಲ್ಲದೆ ಗಟ್ಟಿಯಾಗಿದ್ದವು. ಬದುಕಿನ ಕ್ಯಾನ್ವಾಸ್ ಮೇಲೆ ಮೂಡಿಸಲೆಂದು ಏನೆಲ್ಲಾ ಜತನ ಮಾಡಿದ್ದರೂ ಕಾಲನ ಉರಿಬೇಗೆಗೆ ಹೆಕ್ಕಳಿಕೆ ಎದ್ದಿದ್ದವು. ಇದ್ದ ಬದ್ದ ಆಸೆಗಳನ್ನೆಲ್ಲಾ ಕಕ್ಕಿದ್ದ ಮನಸಂತೂ ಎಂದೋ ಖಾಲಿಯಾಗಿತ್ತು. ಎದುರಿಗಿದ್ದ ರಸ್ತೆಯೂ ಸೊರಗಿದ ಹಾಗೆ ಕಾಣುತ್ತಿತ್ತು. ಹಾಗೆ ಸಾಗುವಾಗ ಶತಮಾನದ ಹಳೆಯ ಲೇಖನಿಯೊಂದು ದಾರಿ ಬದಿಯಲ್ಲಿ ಸಿಕ್ಕಿತು. ಮುಂದೊಂದು ತಗ್ಗಿನಲ್ಲಿ ಗತಕಾಲದ ಶಾಯಿ ಕುಡಿಕೆ ಬಿದ್ದಿತ್ತು.

ಬೋರಲು ಬಿದ್ದಿದೆ
ಶಾಯಿ ಇಲ್ಲದ ಕುಡಿಕೆ;
ಶಾಯಿ ಮುಗಿದರೂ ಪರವಾಗಿಲ್ಲ
ಬರೆಸಿಕೊಳ್ಳುವ
ಪದಗಳೇ ಮುಗಿದರೆ ಕಷ್ಟ


ಹಾಗೆಂದುಕೊಂಡು ಹೆಜ್ಜೆ ಹಾಕಿದ. ಅಲ್ಲೊಂದು ಹೂವು ಬಾಡಿ ಬಿದ್ದಿತ್ತು. ಅದರ ಬಣ್ಣ ಕರಗಿ ನೆಲದೊಳಗೆ ಇಳಿಯುತ್ತಿತ್ತು. ಹಾಗೆ ಅದನೆತ್ತಿಕೊಂಡ. ಅದರೊಳಗೆ ಮೊನ್ನೆ ಇದ್ದಿರಬಹುದಾದ ಸುಗಂಧವ ಇಂದು ಆಘ್ರಾಣಿಸಿದ. ಮೆಲ್ಲನೆ ನೇವರಿಸಿ ಹೇಳಿದ, 'ಚಿಂತೆಯಿಲ್ಲ ಬಿಡು, ನಿನ್ನದೊಂದು ಸುಂದರ ಕಾವ್ಯ ಮೊನ್ನೆಯ ಗಾಳಿಯಲ್ಲಿ ಇದೆ. ಕಣ್ಣಾಚೆಗಿನ, ಕಿವಿಯಾಚೆಗಿನ ಅಷ್ಟೇ ಅಲ್ಲ, ಕವಿಯ ಆಚೆಗಿನ ಕಾವ್ಯ ಅದು. ಮೊನ್ನಿನ ಗಾಳಿಯಲ್ಲಿ ನೀನು ಬರೆದಿರುವ ಸುಗಂಧೀ ಸಾಲುಗಳು ಯಾವತ್ತೂ ನನ್ನ ಉಸಿರಾಗಲಿ' ಎಂದ. ಬಾಡಿದ್ದ ಹೂವು ಬಣ್ಣ ಮಾಸುವ ಮುನ್ನ ಮನಸಾರೆ ನಕ್ಕಿತು, ಸಂತೃಪ್ತಿಯಿಂದ. ಭಗವಂತನೇ ಕೈಯಲ್ಲಿ ಎತ್ತಿಕೊಂಡು ರಮಿಸಿ, ಮುದ್ದಿಸಿದ ಹಾಗೆ ಮುದಗೊಂಡು ನೇರ ಸ್ವರ್ಗಕ್ಕೆ ಜಿಗಿಯಿತು.

ಬೆಟ್ಟದಾಚೆಗಿನ ಕೊರಕಲು ಕಣಿವೆಯಲ್ಲಿ ತನ್ನವೇನಾದರೂ ಕನಸುಗಳು ತೇಲುತ್ತಿವೆಯೇನೋ ಎಂದು ಕೊರಗುತ್ತಲೇ ನೋಡಲು ಹೊರಟಿದ್ದವನ ಮನಸು ಈಗ ಬದಲಾಗಿತ್ತು. ತನ್ನೊಳಗಿನ ಯುದ್ದವ ಆರಂಭಕ್ಕೂ ಮುನ್ನವೇ ಅಂತ್ಯಗೊಳಿಸಿದ. ಹಳೆ ಬಣ್ಣಗಳಿಗೆ ತರ್ಪಣ ಬಿಟ್ಟ. ಸೀದಾ ಹೊರಟವನು ಸಂತೆಯಲ್ಲಿ ಕುಂತ, ಮಾಲ್ ಗಳಲಿ ಮಿಂದ. ಗದ್ದಲದಲ್ಲಿನ ಮೌನ ಆಲಿಸಿದ, ಮೌನದಲ್ಲಿನ ಗದ್ದಲ ಹುಡುಕಿದ. ಬಣ್ಣವೇ ಇಲ್ಲದ ಕನಸುಗಳ ಕಂಡ, ಶೂನ್ಯದೊಳಗಿನ ಬಣ್ಣಗಳ ಅಂಗೈ ಮೇಲೆ ಸುರುವಿಕೊಂಡ.
ಮೌನದಲ್ಲಿ ಕುದಿಯುವುದನ್ನೂ, ಕುಲುಮೆಯ ತಿದಿಯಲ್ಲಿ ಧ್ಯಾನಿಸುವುದನ್ನೂ ಕಂಡುಕೊಂಡ. ಕಡೆಗೆ ಗಂಭೀರವಾಗಿದ್ದೂ ಭೋರ್ಗರೆಯುತ್ತಾ, ತಣ್ಣನೆಯ ಕಣ್ಣುಗಳಲ್ಲೇ ಅಬ್ಬರಿಸುತ್ತಾ ಮತ್ತೊಮ್ಮೆ ಮುಗಿಬಿದ್ದ - ಜೀವನದ ಮೇಲಲ್ಲಾ, ಕಾಲನ ಮೇಲೆ...

ಯಾರೋ ಮಾತಾಡಿಕೊಂಡರು ಇಷ್ಟಕ್ಕೆಲ್ಲಾ ಕಾರಣ ಅವನು ಸೌಗಂಧೀ ಕಾವ್ಯವನ್ನು ಉಸಿರನಲ್ಲಿಯೇ ಓದಿದ್ದು ಎಂದು...
ಇರಬಹುದೇನೋ!!!

Monday, August 16, 2010

ಶಿವಶಕ್ತಿಯರ ನಶೆ

ಮಾತುಗಳಲ್ಲಿ ನಕ್ಷತ್ರ ಸುರಿವ ಹೊತ್ತು ಅದು...

ಅಲ್ಲೊಬ್ಬ ಬೈರಾಗಿ ಬೀದಿ ಬದಿಯಲ್ಲಿ ಅಪರಾತ್ರಿ ಸಾಗುತ್ತಾ ಕಾಲಿಗೆ ತೊಡರಿದ ಅಕ್ಷರಗಳನೆಲ್ಲಾ ಹೆಕ್ಕಿ, ಹೆಕ್ಕಿ ತೆಗೆದು ಜೋಳಿಗೆಯಲ್ಲಿ ಜತನದಿಂದ ತುಂಬುತ್ತಾ ಹೆಜ್ಜೆ ಹಾಕಿದ್ದ. ಅವ ಹಾಗೆ ಅಲೆಯುವಾಗ ಆ ಮೆಟ್ರೋ ಸಿಟಿಯ ಪಬ್ ಗಳಲ್ಲಿ ನಿಶೆ ಎನ್ನುವುದು ತುರೀಯ ತಲುಪಿತ್ತು. ಬೀದಿಬದಿಗಳಲ್ಲಿ ರಾತ್ರಿಕೋವಿದರಿಗೆಂದು ತೆಗೆದಿದ್ದ ಟೀ ಅಂಗಡಿಗಳ ಬಿಸಿನೆಸ್ ಜೋರಿತ್ತು. ಇದ್ಯಾವುದರ ಪರಿವೆಯೂ ಇಲ್ಲದೆ ಪಬ್ಬು, ಡ್ಯಾನ್ಸ್ ಬಾರ್, ಡಿಸ್ಕೋಥೆಕ್, ಲೈವ್ ಬ್ಯಾಂಡ್ ಗಳ ಸುತ್ತಮುತ್ತ ನೆಲವನ್ನೇ ಬಗೆಯುವನಂತೆ ನೋಡುತ್ತಾ ನಡೆದಿದ್ದ ಬೈರಾಗಿ. ಹಾಗೆ ಅವನ ಪಾದ ಬೆಳೆಯುತ್ತಾ ಎಲೀಟ್ ಪಬ್ ಬಳಿ ಬಂದು ಗಕ್ಕನೆ ನಿಂತು ಬಿಟ್ಟಿತು. ಅವನ ಕಣ್ಣಲ್ಲಿ ನಿಹಾರಿಕೆಗಳೇ ಬೆಳಗಿದವು. ಹುಡುಕುವದನ್ನೇ ಕಾಯಕ ಮಾಡಿಕೊಂಡಿದ್ದವನಿಗೆ ಹುಡುಕಾಟ ಮುಗಿದಾಗ ಆಗುವ ತೊಳಲಾಟವೂ ಅವುಗಳಲ್ಲಿ ಇತ್ತು ಎನ್ನುವುದನ್ನೂ ಅಲ್ಲಗೆಳೆಯುವಂತಿಲ್ಲ. ತಾನು ಶತಶತಮಾನದಿಂದ ನಿರೀಕ್ಷಿಸಿದ್ದ ಆ ಒಂದು ಕ್ಷಣ ಸಿಕ್ಕೇ ಬಿಟ್ಟಿತ್ತಲ್ಲಾ, ಇದು ನಿಜವೇ ಎಂದು ಮತ್ತೆ ಮತ್ತೆ ಕೇಳಿಕೊಂಡ. ಇಷ್ಟು ವರ್ಷ ನೆಲ ದಿಟ್ಟಿಸಿ ಬದುಕಿದ್ದು ಸಾರ್ಥಕವಾಯಿತು ಎಂದುಕೊಂಡವನೇ ತನ್ನ ಭಾವನೆಗಳ ಓಘಕ್ಕೆ ಕಡಿವಾಣ ಹಾಕಿ ತಾನು ಕಂಡ, ನೆಲದಲ್ಲಿ ಬಿದ್ದಿದ್ದ ಆ ಅಮೂಲ್ಯ 'ಪದ'ವನ್ನು ಕಣ್ರೆಪ್ಪೆ ಕದಲುವುದರೊಳಗೆ ಗಕ್ಕನೆ ಎತ್ತಿ ಜೋಳಿಗೆಯೊಳಗೆ ಹಾಕಿ ದಡಬಡನೆ ನಡೆದು ಬಿಟ್ಟ.

ರಸ್ತೆಯಿಂದ ಪಕ್ಕದ ಬೀದಿಗೆ ಬಿದ್ದು, ಯಾವ್ಯಾವುದೋ ಗಲ್ಲಿ ಅಲೆದು ಲಗುಬಗೆಯಿಂದ ಸಿಟಿಯ ಅಂಚಿನತ್ತ ಬೀಸತೊಡಗಿದ. ಸಿಟಿಯೊಳಗಿನ ಬೆಳಕಿನ ಗದ್ದಲ ಕಡಿಮೆಯಾಗಿ ಊರಂಚಿನ ನಿಯಾನ್ ಬಲ್ಬ್ ಗಳು ಗತಕಾಲದ ತಮ್ಮ ಐತಿಹ್ಯ ನೆನೆಯುತ್ತಾ ಗೊಣಗಿಕೊಳ್ಳುತ್ತಿದ್ದ ದಾರಿಗುಂಟ ಸಾಗಿದ. ಅವ ಹಾಗೆ ಊರ ಕೊನೆ ದಾಟುವ ಹೊತ್ತಿಗೆ ಗೂಬೆಗಳು ದಣಿದಿದ್ದವು, ನಾಯಿಗಳು ಬೊಗಳಿ, ಬೊಗಳಿ ಬೇಸತ್ತು ಇಬ್ಬನಿ ಮೂಡಲು ಇನ್ನೂ ಒಂದುವರೆ ಜಾವ ಇರುವಾಗಲೇ ಬಾಲ ಮುದುರಿ ಅಲ್ಲಲ್ಲೇ ಬೆಚ್ಚಗೆ ಬಿದ್ದುಕೊಂಡಿದ್ದವು. ಇದಾವುದನ್ನೂ ಗಮನಿಸುವ ವ್ಯವಧಾನವಿಲ್ಲದಂತೆ ಬಿರಬಿರನೆ ಹೆಜ್ಜೆ ಹಾಕಿದ ಬೈರಾಗಿ ಎಂದಿಗಿಂತ ಅರೆ ತಾಸು ಮುಂಚಿತವಾಗಿಯೇ ಊರಾಚೆಯ ಮಂಟಪ ತಲುಪಿದ.

ಹಾಗೆ ಬಂದವನೇ ಎಣ್ಣೆಯಿಲ್ಲದ ಹಣತೆಯಲ್ಲಿ ನೀರು ತುಂಬಿ, ಬತ್ತಿ ಇಲ್ಲದ ದೀಪ ಹಚ್ಚಿದ. ಅದೇ ದೀಪದಲ್ಲೇ ಚಿಲುಮೆ ಹಚ್ಚಿ ಉಲ್ಟಾ ತಿರುಗಿಸಿ ಬೆಂಕಿ ತುದಿಯ ಬಾಯಿಗಿಟ್ಟು ಹೊಗೆಯ ಬಸಿದುಕೊಂಡ. ಚಂದಿರನ ತಲೆದಿಂಬಾಗಿಸಿ ಕಣ್ಣು ಬಿಟ್ಟುಕೊಂಡೇ ನಿದ್ದೆಗೆ ಜಾರಿದ. ಒಂದರೆ ತಾಸು ಹಿಂದಕ್ಕೆ ಜಾರಿರಬಹುದು ಯಾರೋ ಆಕಳಿಸುತ್ತಾ ಅತ್ತಿತ್ತ ಮಗ್ಗಲು ಬದಲಿಸುವ ಸದ್ದಾಯಿತು. ಬಿಟ್ಟ ಕಣ್ಣು ಮುಚ್ಚದೇ ಕೇಳಿದ,"ಯಾಕೆ, ನಿದ್ದೆ ಬರಲಿಲ್ಲವಾ?'

ಅತ್ತಿಂದ ಸಣ್ಣ ದನಿ ಉಸುರಿತು, 'ಅಲ್ಲೋ ಬೈರಾಗಿ, ನಾನು ಅಲ್ಲೆಲ್ಲೋ ಮಣ್ಣಲ್ಲಿ ಗಡದ್ದಾಗಿ ಮಾಸಿಕೊಂಡು ಬಿದ್ದಿದ್ದೆ. ಇನ್ನೇನು ಮುಂಜಾನೆಯ ಇಬ್ಬನಿಯಲ್ಲಿ ಕರಗಿ ಭೂಮಿಯೊಳಗೆ ಇಳಿದು ಬಿಡುವ ಅಂತ ಲೆಕ್ಕ ಹಾಕಿದ್ದೆ. ಅದ್ಯಾಕೋ ಹೊತ್ತು ತಂದೆ ನನ್ನ ಇಲ್ಲಿಗೆ' ಎಂದಿತು ಆ 'ಪದ'.

'ಓಹೋ, ನೀನಾ, ಅದೇ ಆ ಎಲೀಟ್ ಪಬ್ ಪಕ್ಕ ಬಿದ್ದಿದ್ದವನು ತಾನೇ...' ಎಂದ ಬೈರಾಗಿ. ತನ್ನ ಮನದೊಳಗೆ ಹಕ್ಕಿಗಳ ಹಾಗೆ ಹಾರುತ್ತಿದ್ದ ಭಾವನೆಗಳ ಕಲರವ ಒಂದಿನತು ಹೊರಗೆ ಬರಗೊಡದೆ ನಿರ್ಭಾವುಕ ದನಿಯಲ್ಲಿ ಆ ಮಾತು ಉದುರಿಸಿದ್ದ. 'ಅಲ್ಲ, ನೀನು ಮಣ್ಣಲ್ಲಿ ಕರಗಿ ಹೋಗೋನೇ ಆಗಿದ್ದರೆ ನನ್ನ ಕಾಲಿಗೆ ಯಾಕೆ ತೊಡರಿಕೊಂಡೆಯೋ' ಎಂದು ಅದೇ ಉಸಿರಿನಲ್ಲಿಯೇ ಉಲ್ಟಾ ದಬಾಯಿಸಿಯೂ ಬಿಟ್ಟ.

ಇವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನೇಸರ ಮೂಡುವ ಮುಂಚೆ ಪಶ್ಚಿಮದಲ್ಲಿ ಜಾರಿಕೊಳ್ಳ ಬೇಕಿದ್ದ ಮೌನವೊಂದು ಹಾಗೇ ಅಲ್ಲಿಯೇ ನಿಂತುಬಿಟ್ಟಿತು. ಅದನ್ನು ನೋಡಿದವನೇ "ಹಚಾ'' ಎಂದು ಓಡಿಸಿದ ಬೈರಾಗಿ ಅಸಲಿ ಹಕೀಕತ್ತು ಶುರುವಿಟ್ಟ..

'ನೋಡು ವಿಷಯ ಇಷ್ಟೇ, ನನ್ನದೊಂದು ಕಾವ್ಯ ಇದೆ. ಅದು ನನ್ನ ಬದುಕಿಗಿಂತ ದೊಡ್ಡದು. ನಿಜ ಹೇಳಬೇಕೆಂದರೆ ಅದೊಂದು ಕಾವ್ಯವ ಅಂತರ್ಗತಗೊಳಿಸಿಕೊಳ್ಳಲು ನೂರಾರು ಜನುಮ ಕಾದಿದ್ದೇನೆ. ಈಗ ಎಲ್ಲವೂ ಒಂದು ಹಂತಕ್ಕೆ ಬಂದದ್ದಾಗಿದೆ ಆದರೆ ನನ್ನನ್ನು ಮೀರಿ ನಿಂತಿರುವ ಆ ಕಾವ್ಯಕ್ಕೆ ಕಡೆಯದಾಗಿ ನಶೆಯ ಲಹರಿ ಬೇಕು. ಎಂಥ ನಶೆ ಬೇಕು ಎಂದರೆ ಅಲ್ಲಿ ಪ್ರಜ್ಞೆ ಕರಗಿ ಹೋಗಬೇಕು, ಚಿಂತನೆ ಚಿಲುಮೆಯಾಚೆಗೆ ನಿಲ್ಲಬೇಕು. ಅಲ್ಲಿ ಏನಿದ್ದರೂ ಅಲ್ಲಮನ ಬಯಲೂ, ಬುದ್ಧನ ಭಾವವೂ, ಶಕ್ತಿಶಿವರ ಕದಲದ, ಕದಡದ ಅಖಂಡ ಏಕಭಾವ ಬಿಂದುವೂ ಇರಬೇಕು' ಅಂದ.

ಪಕ್ಕದಲ್ಲಿ ಹೊರಳಾಡುತ್ತಿದ್ದ ಆ ಮಾಸಿದ್ದ ಪದ ಏನೂ ಮಾತನಾಡಲಿಲ್ಲ. ಇದನ್ನು ನೋಡಿ, ಮನದಲ್ಲೇ ಶಿವಶಕ್ತಿಯರ ಬಿಂದುವಿನ ಚಕ್ರ ಬಿಡಿಸುತ್ತಾ ಹೇಳಿದ, "ನೋಡು, ನಶೆ ಎಂದರೆ ಅದು ಅಂತಿಂಥ ನಶೆಯಲ್ಲ. ಆ ನಿನ್ನೊಡತಿ ತನ್ನೊಳಗೆ ತುಂಬಿಕೊಳ್ಳುತ್ತಿದ್ದಳಲ್ಲ ಅಂಥ ನಶೆ. ಅಂಥದ್ದೊಂದು ನಶೆಯಲ್ಲೇ ಮಿಂದ ನಂತರವೇ ತಾನೇ ಆಕೆ ನಿನ್ನ ತುಳುಕಿಸಿ ಹೋದದ್ದು. ಅದಕ್ಕೆ ತಾನೇ ನೀನು ಮೈತುಂಬಾ ಮತ್ತು ಹೊದ್ದುಕೊಂಡು ಬಿದ್ದಿರುವುದು. ನಿನ್ನೊಳಗೆ ಭೂತ, ಭವಿಷ್ಯ, ವರ್ತಮಾನ ತಟಸ್ಥವಾಗಿದೆ. ಎಲ್ಲವೂ ನಿನ್ನೊಳಗೆ ಕುಸಿದು, ಕುಸಿದು ಕೃಷ್ಣನಾಗಿದೆ. ಕೃಷ್ಣ, ಮಹಾ ಕೃಷ್ಣ ಎಲ್ಲವನ್ನೂ ಕರಗಿಸಿಕೊಳ್ಳುವ, ಕರಗಿಸಿ ಅರಗಿಸಿಕೊಳ್ಳುವ ಮಹಾಕಾಲ. ಆ ಮಹಾಕೃಷ್ಣವೇ ವೇದಿಕೆ ಶಿವಶಕ್ತಿಯರು ಬಿಂದುವಾಗಲು. ಅಂಥದ್ದೊಂದು ಲೋಕೋತ್ತರ ನಶೆ ನಿನ್ನೊಳಗೆ ಇದೆ. ಅದಕ್ಕೆ ನಿನ್ನ ಹೊತ್ತು ತಂದೆ' ಅಂದ.

ಪಕ್ಕದಲ್ಲಿನ ಪದ ತೊದಲುತ್ತಾ ತುಸು ಗಟ್ಟಿಯಾಗಿ ಒದರಿತು, "ಲೇ ಬೈರಾಗಿ, ಚಿಲುಮೆ ಸೇದಿ ಗಡದ್ದಾಗಿ ಏಳೆಂಟು ಲೋಕ ಸುತ್ತಿ ಬರೋ ನಿನಗೆ ಅದ್ಯಾಕೋ ಬೇಕು ನಶೆ. ನೋಡು, ನಶೆ ನನ್ನೊಳಗಿಲ್ಲ. ನಾನು ನಶೆಯೊಳಗಿದ್ದೇನೆ. ನಶೆಯೊಳಗೆ ಇದ್ದವರಿಗೆ 'ನಾನು' ಎಂಬುದು ಇಲ್ಲ. ಹಾಗಾಗಿ ನಿಜ ಹೇಳಬೇಕೆಂದರೆ ಇಲ್ಲಿ ನಾನಿಲ್ಲ. ಇರುವುದೆಲ್ಲವೂ ನಶೆ ಮಾತ್ರ. ಅದು ನನ್ನೊಡತಿಯ ಅನುಗ್ರಹದ ಫಲ. ಅವಳ ಲಹರಿ'.

ಇಷ್ಟು ಹೇಳಿ ಮತ್ತೆ ಮಗ್ಗಲು ಬದಲಿಸುತ್ತಾ, ಮೈ ತುಂಬಾ ಮೆತ್ತಿಕೊಂಡಿದ್ದ ಧೂಳಿನ ಪರಿವೇ ಇಲ್ಲದೆ ಉಸುರಿತು, "ಮಧುಶಾಲೆಯಲ್ಲಿ ಮೀಯುತ್ತಾ ಕಣ್ಣಲ್ಲೇ ಕಾವ್ಯ ತುಳುಕಿಸುವ ರಸಿಕಳು ನನ್ನೊಡತಿ. ಅವಳದೊಂದು ಸಾಲಿಗೆ ಮತ್ತೆ, ಮತ್ತೆ ಹೊತ್ತಿ ಉರಿಯುವ ಹೃದಯಗಳೆಷ್ಟೋ... ಪ್ರತಿ ಬಾರಿ ಹೃದಯವೊಂದು ಹೊತ್ತಿ ಉರಿವಾಗಲೂ ಅದರಳೊಗಿನ ಪರಿಶುದ್ಧ ಭಾವವ ದಿಟ್ಟಿಸುತ್ತಾಳೆ. ತನ್ನ ರತಿ ದೇಹದೊಳಗಿನ ತಿದಿಯೊತ್ತಿ ಆತ್ಮದ ಕುಲುಮೆಯಿಂದ ಭಾವಗಳ ಸಾಚಾತನ ನೋಡುತ್ತಾಳೆ. ಅವಳ ಆತ್ಮದ ತಹತಹಕ್ಕೆ ಪರಿಶುದ್ಧ ಭಾವದ ಹವಿಸ್ಸೇ ಬೇಕು. ಅವಳ ಮನೋಯಜ್ಞದಲ್ಲಿ ಅವು ಅಂತಿಮವಾಗಿ ಹೊಳೆಯಬೇಕು' ಎಂದಿತು.

ಬೈರಾಗಿ ತನ್ನ ಆತ್ಮವನ್ನೂ ಕಿವಿಯಾಗಿಸಿಕೊಂಡು ಕೇಳುತ್ತಿದ್ದ. ಆ ಪದ ಮುಂದುವರೆಯಿತು, "ಜೀವ ಕನ್ನಿಕೆ ಸೃಷ್ಟಿ ಕಟ್ಟುವುದು ಇಟ್ಟಿಗೆಯಿಂದ ಅಲ್ಲ ಕಣೋ ಬೈರಾಗಿ, ಶೂನ್ಯದೊಳಗೆ ದಹಿಸಿ ಹೊರಬಿದ್ದ ಶುದ್ಧ ಭಾವದಿಂದ' ಅಂದಿತು.

ಇಂಥದ್ದೊಂದು ಮಾತಿಗಾಗಿ ಅದೆಷ್ಟು ಸಾವಿರ ವರುಷದಿಂದ ತಹತಹಿಸಿದ್ದನೋ ಬೈರಾಗಿ. ಮೆತ್ತಗೆ ತನ್ನ ಎದೆಯ ತಿದಿ ಒತ್ತಿ ಮಾತೆಂಬೋ ಮಾತುಗಳ ಮೂಡಿಸತೊಡಗಿದ, " ಅದೆಲ್ಲ ನನಗೆ ಗೊತ್ತು ಅದಕ್ಕೇ ನಿನ್ನ ಹೊತ್ತು ತಂದಿರೋದು... ನಿನ್ನೊಡತಿಯ ಮುಂದೆ ನಾನು ಯಾವತ್ತೂ ಮಂಡಿಯೂರಿ ಕುಳಿತಿರುತ್ತಿದ್ದೆ' ಎಂದು ಕಾಲಚಕ್ರದಲ್ಲಿ ಹಿಂದೆ ಸರಿದ. ಬೈರಾಗಿಯ ಮಾತಿನಿಂದ ಕಕ್ಕಾಬಿಕ್ಕಿಯಾಯಿತು ಪದ. ಎಲ್ಲಿಯ ನನ್ನೊಡತಿ, ಎಲ್ಲಿಯ ಬೈರಾಗಿ ಎಂದು ಲೆಕ್ಕ ಶುರುವಿಟ್ಟುಕೊಂಡಿತು.

ಇದರ ಪರಿವೆ ಇಲ್ಲದೆ ಬೈರಾಗಿ ಮುಂದುವರೆಸಿದ, ಅದೊಂದು ದಿನ ಅವಳ ಮುಂದೆ ಎಂದಿನಂತೆ ಮಂಡಿಯೂರಿ ಕುಳಿತಿದ್ದೆ. ಮಧುವಿನ ಹನಿಯೊಂದರ ಸಂಗಡ ಲಾಸ್ಯವಾಡುತ್ತಾ, ತೆಳುವಾಗಿ ಅದರಳೊಗಿನ ಮರ್ಮವ ಆತ್ಮಕ್ಕೆ ಹನಿಸಿಕೊಂಡಳು. ನಂತರ ಮಧುವಿನ ಬಟ್ಟಲು ಪಕ್ಕಕ್ಕಿಟ್ಟು ತಾನು ಈ ಲೋಕಕ್ಕೆ ಸೇರಿದವಳೇ ಅಲ್ಲವೇನೋ ಎನ್ನುವಂತೆ ನಿರ್ಲಿಪ್ತವಾಗಿ ಕೇಳಿದಳು,.. 'ಅದೆಷ್ಟು ಪ್ರೇಮಿಸಬೇಕು ಅಂತಾ ಇದ್ದೀಯ ನನ್ನನ್ನು' ಎಂದು.

'ನಾನೇ ನೀನಾಗುವಷ್ಟು' ಎಂದೆ,

'ಆಮೇಲೆ' ಎಂದಳು.

ಅವಳ ಮೊಗವನ್ನೇ ದಿಟ್ಟಿಸುತ್ತಿದ್ದೆ..

ಅವಳೇ ಮುಂದುವರೆದು ಕೇಳಿದಳು 'ನೀನು ನಾನಾದ ಮೇಲೆ ಮುಂದೇನು?',

'ನಿನ್ನೊಳಗಿನ ನೀನು ಕರಗಿ ಕಡೆಗೆ ಶೂನ್ಯವಾಗುವುದು' ಅಂದೆ.

"ಆಯಿತು' ಎಂದಳು.

ನನ್ನ ಕಣ್ಣನ್ನೇ ದಿಟ್ಟಿಸಿದಳು. ನಾನು ಹಾಗೇ ಅವಳ ಕಣ್ಣೊಳಗೆ ಇಳಿಯುತ್ತಾ ಹೋದೆ. ಕೈ ಹಿಡಿದು ಅಂತರಂಗಕ್ಕೆ ಕರೆದೊಯ್ದಳು, ಆತ್ಮದೊಳಗೆ ಬೆರೆಸಿಕೊಳ್ಳುತ್ತಾ ಕೇಳಿದಳು, 'ನನ್ನೊಳಗೆ ನೀನು ಕರಗಿ, ಆಮೇಲೆ ನಾನೂ ಕರಗಿ ಕಡೆಗೆ ಶೂನ್ಯವಾಗಿ ಹೋದ ಮೇಲೆ ಉಳಿಯುವುದೇನೋ ಹುಡುಗ?'

'ನಿನ್ನಾಣೆಗೂ ಗೊತ್ತಿಲ್ಲ, ಅದನ್ನೆಲ್ಲಾ ನೀನೇ ಹೇಳಬೇಕು, ಆ ಪ್ರಶ್ನೆಗಳನ್ನು ಕೇಳುವುದಿರಲಿ ಅದನ್ನು ಯೋಚಿಸಿದರೂ ನನಗೆ ಗೊಂದಲವಾಗುತ್ತೆ' ಎಂದೆ.

ತನ್ನ ಆತ್ಮದ ಆಳಕ್ಕೆ ಕರೆದುಕೊಳ್ಳುತ್ತಾ ಹೇಳಿದಳು, 'ದಡ್ಡ, ಶೂನ್ಯದಲ್ಲಿ ಗೊಂದಲವೆಲ್ಲೋ ಇರುತ್ತೆ, ಅಲ್ಲಿ ಎಲ್ಲವೂ ತುಂಬಿರುತ್ತೆ'. ನನಗೆ ಅರ್ಥವಾಗದು ಎಂದು ಅರಿತು, ತನ್ನ ಆತ್ಮದೊಳಗೆ ಪರಿಪೂರ್ಣವಾಗಿ ನಾನು ಹರವಿಕೊಳ್ಳಲು ಬಿಟ್ಟು ಬೆಚ್ಚಗೆ ಹೇಳಿದಳು, 'ನೋಡು ಎಲ್ಲವೂ ತುಂಬಿರುತ್ತೆ ಅಂದರೆ ಅದರ ಅರ್ಥ ಅಲ್ಲಿ ಏನೂ ಇಲ್ಲ ಎಂತಲೇ. ಏನೂ ಇಲ್ಲ ಎಂದರೆ ಅದು ಪರಿಪೂರ್ಣವೆಂದೇ... ಹಾಗಾಗಿ ಅಂಥ ಪರಿಪೂರ್ಣತೆ ಏಕಕಾಲಕ್ಕೆ ನಿಶ್ಚಲವೂ, ಚೈತನ್ಯಶೀಲವೂ ಆಗಿರುತ್ತೆ. ಸಂಭವ, ಅಸಂಭವ ಎರಡೂ ಅಲ್ಲಿ ಒಟ್ಟಿಗೇ ಇರುತ್ತವೆ' ಎಂದಳು.

ನಾನು ಪೆದ್ದಾಗಿ ನೋಡುತ್ತಿದ್ದೆ. 'ಹೋಗಲಿ ಬಿಡು... ಅನುಭವಕ್ಕೆ ವಿವರಣೆಯ ಅಗತ್ಯವಿಲ್ಲ. ಅನುಭವಿಸಿದ ಮೇಲೆ ವಿವರಣೆ ಬೇಕಿಲ್ಲ. ಮುಂದೆ ನಿನಗೇ ತಿಳಿಯುತ್ತದೆ' ಎಂದಳು.
ಹಾಗೆ ಅವಳ ಅತ್ಮದೊಳಗೆ ನನ್ನ ಬೆರೆಸಿಕೊಂಡ ಮೇಲೆ ಕಾಲ ನಿಂತು ಹೋಯಿತು. ಯುಗಯುಗಳೇ ಗತವಾದವು. ಹೀಗೆ ಅದೆಷ್ಟು ಕಾಲ ಸಂದಿತ್ತೋ... ಒಂದು ದಿನ ಇದ್ದಕ್ಕಿದ್ದಂತೆ ಹೇಳಿದಳು, 'ಸಾಕು, ಹೊರಡು, ಕೆಲಸ ಮಾಡುವುದಿಲ್ಲವೇನು?' ಎಂದು.

'ಯಾಕೆ' ಅಂದೆ,

'ಅಯ್ಯೋ, ಅರಸಿಕ, ಹೋಗಿ ಮತ್ತೊಂದಿಷ್ಟು ನಶೆ ತೆಗೆದುಕೊಂಡು ಬಾ... ಭಾವದ ನಶೆ, ಅನುಭಾವದ ನಶೆ, ಅದ ಕರಗಿಸಿ ಮತ್ತೆ ಶೂನ್ಯವಾಗೋಣ' ಎಂದಳು.

'ಹೇಗೆ?' ಅಂದೆ.

'ಅಕ್ಷರದಾಚೆಗೆ ನಿಂತ, ಕಿವಿಗಳಿಗೆ ದಕ್ಕದ, ಸದಾ ಮನದೊಳಗೆ ಜಿನುಗುವ ಕಾವ್ಯ ತಾ' ಅಂದಳು. ಸರಿ ಎಂದು ಹೊರಟೆ. ಅವಳ ಆತ್ಮದಿಂದ ನನ್ನನ್ನು ಕಡ ಪಡೆದು ಹೊರಬಿದ್ದೆ. ಅಲೆದೆ, ಅಲೆದೆ... ಅಂಥದ್ದೊಂದು ಕಾವ್ಯ ಎಲ್ಲಿಂದ ತರಲಿ, ಅದ್ಹೇಗೆ ಸೃಷ್ಟಿಸಲಿ ಎಂದು. ಕಡೆಗೊಂದು ದಿನ ಅರಿವಾಯಿತು, 'ನಾನು ಅವಳಾದ ಮೇಲೆ ಕಾವ್ಯ ಹೊರಗೆ ಎಲ್ಲಿ ತಾನೇ ಇರುತ್ತೆ? ಅದು ಇರುವುದು ನಮ್ಮೊಳಗೆ... ಆ ನಮ್ಮೊಳಗಿನ ಕಾವ್ಯ ಪದವಾಗಿ ಅಕ್ಷರದಲ್ಲಿ ಸ್ಥಾಯಿ ಆಗುವ ಮುನ್ನ ಬರಿದೆ ಭಾವದ ಕಾವ್ಯ ಕಟ್ಟಬೇಕು. ಅದುವೇ ಅಕ್ಷರದಾಚೆಗೆ ನಿಂತ, ಪದಗಳಾಗದ, ಕಿವಿಗಳಿಗೆ ದಕ್ಕದ ಶುದ್ಧ ಭಾವದ ನಿಶ್ಶಬ್ಧ ಕಾವ್ಯ... ಭಾವನೆಗಳು ಪದವಾಗಿ ಶಬ್ಧವಾಗುವ ಮುನ್ನವೇ ಕಾವ್ಯ ಕಟ್ಟಿದೆ... ಅವಳ ಎದೆಯೊಳಗೆ....'' ಎಂದು ಹೇಳಿ ಬೈರಾಗಿ ಮಾತು ನಿಲ್ಲಿಸಿದ.

'ಅಲ್ಲಾ ಬೈರಾಗಿ, ಹಾಗಾದರೆ ಆ ಶಬ್ದವಲ್ಲದ ಕಾವ್ಯಕ್ಕೆ ಶಬ್ದವಾಗಿ ಹೊಮ್ಮಿ, ಪದವಾಗಿ ಬಿದ್ದು ಮಣ್ಣಲ್ಲಿ ಹೊರಳಿರುವ ನಾನು ಮೈಲಿಗೆಯಲ್ಲವೇ? ನನ್ನನ್ನೇಕೆ ತಂದೆ?' ಎಂದಿತು ಆ ಪದ.

ಬೈರಾಗಿ ನಿಧಾನವಾಗಿ ಹೇಳಿದ, 'ಶಬ್ಧವಾಗದ ಕಾವ್ಯಕ್ಕೆ ನಶೆ ಬರುವುದು ನಿನ್ನಿಂದಲೇ.. ಅವಳ ಅಧರದಿಂದ ಮತ್ತಾಗಿ ಇಳಿದ ನಿನಗೆ ಯಾವುದೇ ಅರ್ಥದ ದಾಸ್ಯ ಇಲ್ಲ.... ನೀನೇ ಹೇಳಿದಂತೆ ನಶೆ ನಿನ್ನೊಳಗಿಲ್ಲ, ನೀನು ನಶೆಯೊಳಗೆ ಇರುವೆ. ಹಾಗಾಗೇ ಅರ್ಥ ಮೀರಿದ ಅವಿರತ ಕಾವ್ಯಕ್ಕೆ ನೀನೇ ಶೀರ್ಷಿಕೆ'

ಒಂದಷ್ಟು ಹೊತ್ತು ಅಲ್ಲಿ ಮೌನವೇ ಮೌನ ತುಂಬಿತ್ತು.

ಬೈರಾಗಿ ಮೆಲ್ಲನೆ ಮತ್ತೊಂದು ಮಾತು ಹೇಳಿದ್ದು ಪಕ್ಕದಲ್ಲಿನ ಪದಕ್ಕೆ ಕೇಳಿಸಲೇ ಇಲ್ಲ.

'ನಾನೇ ಅವಳಾದ ಮೇಲೆ ಅವಳಿಗೆ ಅರ್ಪಿಸಲು ಉಳಿವುದಾದರೂ ಏನು? ಅವಳಿಗೆ, ಅವಳೇ ಅರ್ಪಣೆ' ಎಂದಿದ್ದ ಅವ.

ಅಲ್ಲಿಗೆ ಯುಗಯುಗಾಂತರದ ನಂತರ ಮತ್ತೊಂದು ನಿಹಾರಿಕಾ ವಸಂತ ಮೈದಳೆವ ಕ್ಷಣ ಸನ್ನಿಹಿತವಾಗಿತ್ತು. ಶಿವಶಕ್ತಿಯರ ಸಮ್ಮಿಳನಕ್ಕೆ ಕಾತರಿಸಿ ಆಗಸದ ತುಂಬಾ ಹರಡಿಕೊಂಡಿದ್ದ ಚುಕ್ಕಿಗಳು ಮೈ ನೆರೆದವು.....

ಚಿತ್ರಕೃಪೆ: ಕಿರಣ್ ಮಾಡಾಳ್

Thursday, August 12, 2010

ನನ್ನೊಳಗಿನ ನೀನು ಮತ್ತು ನಾನು

1

ನನ್ನೊಳಗೆ ನೀನು ಯಾವತ್ತೂ ಉಳಿದಿರುವೆ,

ನಾ ಕರಗಿ ಹೋದ ಮೇಲೂ...

ಏಕೆಂದರೆ

ನೀ ನನ್ನ ನಿಜ ಅಸ್ತಿತ್ವ2

ನಿನ್ನೊಳಗೆ ನಾನು ಇರಲೇಬೇಕೆಂಬ

ಹಂಬಲ ಇಲ್ಲ, ಹಠವೂ ಇಲ್ಲ...

ಉಳಿಸಿಕೊಂಡರೆ ಉಸಿರಾಗುವೆ

ಉಳಿಸದೆ ಹೋದರೆ

ಮರೆವೆಂಬ ಊರಲ್ಲಿ ಮರೆಯಾಗುವೆ

ಹಾಗೇ ಒಂದು ಕಥೆ

ಬ್ರಹ್ಮಾಂಡವೆಂಬೋ ಬ್ರಹ್ಮಾಂಡದಲ್ಲಿ ಭುವಿಯೆಂಬ ಸಣ್ಣದೊಂದು ಬಿಂದು. ಅಲ್ಲೋ ಪಿತಗುಟ್ಟುವಷ್ಟು ಜನ, ಮನುಕುಲವೆಂದು ಕರೆದುಕೊಂಬರು ತಮ್ಮನ್ನು ಅವರು. ಆ ಮನುಕುಲಕ್ಕೆ ಇತಿಹಾಸವೆಂಬೋ ಇತಿಹಾಸವೂ, ಭವಿಷ್ಯವೆಂಬೋ ಭವಿಷ್ಯವೂ ಉಂಟು. ಆದರೆ ಅವರೆಲ್ಲಾ ವರ್ತಮಾನದಲ್ಲೇ ಫುಲ್ ಬಿಜಿ... ಇತಿಹಾಸವನ್ನು ಕಾಣುವ ಒಳಗಣ್ಣಾಗಲಿ, ಭವಿತವ್ಯವ ದಿಟ್ಟಿಸುವ ದೃಷ್ಟಿಯಾಗಲಿ ಬಹುತೇಕ ನಶಿಸಿದೆ.

ಇಂತಿಪ್ಪ ಮನುಕುಲದ ಇತಿಹಾಸ, ವರ್ತಮಾನವನ್ನು ಯಾವನೋ ಪರದೇಶಿ ಕೆದಕಲಾಗಿ ಕಂಡದ್ದಾದರೂ ಇಷ್ಟು:
ಪ್ರೀತಿಸುವವರಿಗೆ ಹತ್ತಿರವಾಗದ, ಕಾತರಿಸಿದವರೊಡನೆ ಕೂಡಲಾಗದ, ಬಯಸಿದವರನ್ನು ಪಡೆಯಲಾಗದ ಅಸಹಾಯಕವೂ, ಗೊಂದಲಮಯವೂ ಆದ ಜೀವನ ಅಲ್ಲಿ ಬಹುಪಾಲು ಜನರದ್ದು. ಪ್ರೀತಿಸಿ, ಕಾತರಿಸಿ, ಬಯಸಿ ಪಡೆದವರು ಕೆಲ ಮಂದಿ, ಅವರದೋ ಧನ್ಯತಾಭಾವ... ಉಳಿದಂತೆ ಅಲ್ಲೊಬ್ಬರು, ಇಲ್ಲೊಬ್ಬರು ಅನುಭವಿಗಳು, ಅನುಭಾವಿಗಳು, ಅವರಂತು ಅವನ್ಯಾರೋ 'ಭಗವಂತನೆಂಬ ಭಗವಂತನು' ಕೊಟ್ಟದ್ದ ಪಡೆದು ಗೊಂದಲಗಳಿಂದ ದೂರವೇ ಉಳಿದವರು... ಹೀಗಾಗಿ ಈ ಎಲ್ಲ ಮಂದಿಗೆ ಅವರವರದೇ ಆದ ಸತ್ಯಗಳು...

ಫ್ಲ್ಯಾಶ್ ಬ್ಯಾಕ್ ನಲ್ಲೂ ಫಾಸ್ಟ್ ಫಾರ್ವರ್ಡ್ ನಲ್ಲೂ, ಸ್ಲೋ ಮೋಷನ್ನಲ್ಲೂ, ನಾರ್ಮಲ್ ಮೋಡ್ನಲ್ಲೂ ಅಲ್ಲಿ ಯಾವಾಗಲೂ ಇದೇ ಕಥೆ..

ಇದರಿಂದಾಗಿ ಅಲ್ಲಿ ಒಟ್ಟೊಟ್ಟಿಗೇ ತಾಳ್ಮೆಯೂ, ಅಸಹನೆಯೂ, ಗೊಂದಲ, ಧ್ಯಾನ, ಹಿಂಸೆ, ಶಾಂತಿ, ಕೊಲೆ, ಸುಲಿಗೆ, ವಂಚನೆ, ಕ್ರೌರ್ಯ, ಮದ, ಮತ್ಸರ, ಪ್ರೀತಿ, ಮೋಹ, ಪ್ರೇಮ, ಕಾಮ, ಲಾಂಗು, ಮಚ್ಚು, ಕಾರತೂಸಿನ ಹೊಗೆ, ಕೆಂಪು ಗುಲಾಬಿ, ಬಿಳಿ ಪಾರಿವಾಳ ಮತ್ತೆ ಕೆಲ ದೇವತೆಯರು ಅವರ ಆರಾಧಕರೂ ಇದ್ದರು....

ಇದೆಲ್ಲ ಕಾರಣದಿಂದ ಮನುಕುಲವೆಂಬ ಕುಲದ ಕಥೆಯು ಏಕಕಾಲಕ್ಕೆ ಅಸಹನೀಯವೂ, ಆದರಣೀಯವೂ, ದಾರುಣವೂ, ಪ್ರೀತಿಪೂರ್ವಕವೂ ಆಗಿತ್ತೆಂಬುದು ಕಂಡು ಬಂದಿತೆಂಬಲ್ಲಿಗೆ ಪರಿಸಮಾಪ್ತಿ.

-------ಓಂ ಜನಗಣ ಮನ ಢಣಢಣ ಭಣಭಣ....-----------