Monday, August 16, 2010

ಶಿವಶಕ್ತಿಯರ ನಶೆ

ಮಾತುಗಳಲ್ಲಿ ನಕ್ಷತ್ರ ಸುರಿವ ಹೊತ್ತು ಅದು...

ಅಲ್ಲೊಬ್ಬ ಬೈರಾಗಿ ಬೀದಿ ಬದಿಯಲ್ಲಿ ಅಪರಾತ್ರಿ ಸಾಗುತ್ತಾ ಕಾಲಿಗೆ ತೊಡರಿದ ಅಕ್ಷರಗಳನೆಲ್ಲಾ ಹೆಕ್ಕಿ, ಹೆಕ್ಕಿ ತೆಗೆದು ಜೋಳಿಗೆಯಲ್ಲಿ ಜತನದಿಂದ ತುಂಬುತ್ತಾ ಹೆಜ್ಜೆ ಹಾಕಿದ್ದ. ಅವ ಹಾಗೆ ಅಲೆಯುವಾಗ ಆ ಮೆಟ್ರೋ ಸಿಟಿಯ ಪಬ್ ಗಳಲ್ಲಿ ನಿಶೆ ಎನ್ನುವುದು ತುರೀಯ ತಲುಪಿತ್ತು. ಬೀದಿಬದಿಗಳಲ್ಲಿ ರಾತ್ರಿಕೋವಿದರಿಗೆಂದು ತೆಗೆದಿದ್ದ ಟೀ ಅಂಗಡಿಗಳ ಬಿಸಿನೆಸ್ ಜೋರಿತ್ತು. ಇದ್ಯಾವುದರ ಪರಿವೆಯೂ ಇಲ್ಲದೆ ಪಬ್ಬು, ಡ್ಯಾನ್ಸ್ ಬಾರ್, ಡಿಸ್ಕೋಥೆಕ್, ಲೈವ್ ಬ್ಯಾಂಡ್ ಗಳ ಸುತ್ತಮುತ್ತ ನೆಲವನ್ನೇ ಬಗೆಯುವನಂತೆ ನೋಡುತ್ತಾ ನಡೆದಿದ್ದ ಬೈರಾಗಿ. ಹಾಗೆ ಅವನ ಪಾದ ಬೆಳೆಯುತ್ತಾ ಎಲೀಟ್ ಪಬ್ ಬಳಿ ಬಂದು ಗಕ್ಕನೆ ನಿಂತು ಬಿಟ್ಟಿತು. ಅವನ ಕಣ್ಣಲ್ಲಿ ನಿಹಾರಿಕೆಗಳೇ ಬೆಳಗಿದವು. ಹುಡುಕುವದನ್ನೇ ಕಾಯಕ ಮಾಡಿಕೊಂಡಿದ್ದವನಿಗೆ ಹುಡುಕಾಟ ಮುಗಿದಾಗ ಆಗುವ ತೊಳಲಾಟವೂ ಅವುಗಳಲ್ಲಿ ಇತ್ತು ಎನ್ನುವುದನ್ನೂ ಅಲ್ಲಗೆಳೆಯುವಂತಿಲ್ಲ. ತಾನು ಶತಶತಮಾನದಿಂದ ನಿರೀಕ್ಷಿಸಿದ್ದ ಆ ಒಂದು ಕ್ಷಣ ಸಿಕ್ಕೇ ಬಿಟ್ಟಿತ್ತಲ್ಲಾ, ಇದು ನಿಜವೇ ಎಂದು ಮತ್ತೆ ಮತ್ತೆ ಕೇಳಿಕೊಂಡ. ಇಷ್ಟು ವರ್ಷ ನೆಲ ದಿಟ್ಟಿಸಿ ಬದುಕಿದ್ದು ಸಾರ್ಥಕವಾಯಿತು ಎಂದುಕೊಂಡವನೇ ತನ್ನ ಭಾವನೆಗಳ ಓಘಕ್ಕೆ ಕಡಿವಾಣ ಹಾಕಿ ತಾನು ಕಂಡ, ನೆಲದಲ್ಲಿ ಬಿದ್ದಿದ್ದ ಆ ಅಮೂಲ್ಯ 'ಪದ'ವನ್ನು ಕಣ್ರೆಪ್ಪೆ ಕದಲುವುದರೊಳಗೆ ಗಕ್ಕನೆ ಎತ್ತಿ ಜೋಳಿಗೆಯೊಳಗೆ ಹಾಕಿ ದಡಬಡನೆ ನಡೆದು ಬಿಟ್ಟ.

ರಸ್ತೆಯಿಂದ ಪಕ್ಕದ ಬೀದಿಗೆ ಬಿದ್ದು, ಯಾವ್ಯಾವುದೋ ಗಲ್ಲಿ ಅಲೆದು ಲಗುಬಗೆಯಿಂದ ಸಿಟಿಯ ಅಂಚಿನತ್ತ ಬೀಸತೊಡಗಿದ. ಸಿಟಿಯೊಳಗಿನ ಬೆಳಕಿನ ಗದ್ದಲ ಕಡಿಮೆಯಾಗಿ ಊರಂಚಿನ ನಿಯಾನ್ ಬಲ್ಬ್ ಗಳು ಗತಕಾಲದ ತಮ್ಮ ಐತಿಹ್ಯ ನೆನೆಯುತ್ತಾ ಗೊಣಗಿಕೊಳ್ಳುತ್ತಿದ್ದ ದಾರಿಗುಂಟ ಸಾಗಿದ. ಅವ ಹಾಗೆ ಊರ ಕೊನೆ ದಾಟುವ ಹೊತ್ತಿಗೆ ಗೂಬೆಗಳು ದಣಿದಿದ್ದವು, ನಾಯಿಗಳು ಬೊಗಳಿ, ಬೊಗಳಿ ಬೇಸತ್ತು ಇಬ್ಬನಿ ಮೂಡಲು ಇನ್ನೂ ಒಂದುವರೆ ಜಾವ ಇರುವಾಗಲೇ ಬಾಲ ಮುದುರಿ ಅಲ್ಲಲ್ಲೇ ಬೆಚ್ಚಗೆ ಬಿದ್ದುಕೊಂಡಿದ್ದವು. ಇದಾವುದನ್ನೂ ಗಮನಿಸುವ ವ್ಯವಧಾನವಿಲ್ಲದಂತೆ ಬಿರಬಿರನೆ ಹೆಜ್ಜೆ ಹಾಕಿದ ಬೈರಾಗಿ ಎಂದಿಗಿಂತ ಅರೆ ತಾಸು ಮುಂಚಿತವಾಗಿಯೇ ಊರಾಚೆಯ ಮಂಟಪ ತಲುಪಿದ.

ಹಾಗೆ ಬಂದವನೇ ಎಣ್ಣೆಯಿಲ್ಲದ ಹಣತೆಯಲ್ಲಿ ನೀರು ತುಂಬಿ, ಬತ್ತಿ ಇಲ್ಲದ ದೀಪ ಹಚ್ಚಿದ. ಅದೇ ದೀಪದಲ್ಲೇ ಚಿಲುಮೆ ಹಚ್ಚಿ ಉಲ್ಟಾ ತಿರುಗಿಸಿ ಬೆಂಕಿ ತುದಿಯ ಬಾಯಿಗಿಟ್ಟು ಹೊಗೆಯ ಬಸಿದುಕೊಂಡ. ಚಂದಿರನ ತಲೆದಿಂಬಾಗಿಸಿ ಕಣ್ಣು ಬಿಟ್ಟುಕೊಂಡೇ ನಿದ್ದೆಗೆ ಜಾರಿದ. ಒಂದರೆ ತಾಸು ಹಿಂದಕ್ಕೆ ಜಾರಿರಬಹುದು ಯಾರೋ ಆಕಳಿಸುತ್ತಾ ಅತ್ತಿತ್ತ ಮಗ್ಗಲು ಬದಲಿಸುವ ಸದ್ದಾಯಿತು. ಬಿಟ್ಟ ಕಣ್ಣು ಮುಚ್ಚದೇ ಕೇಳಿದ,"ಯಾಕೆ, ನಿದ್ದೆ ಬರಲಿಲ್ಲವಾ?'

ಅತ್ತಿಂದ ಸಣ್ಣ ದನಿ ಉಸುರಿತು, 'ಅಲ್ಲೋ ಬೈರಾಗಿ, ನಾನು ಅಲ್ಲೆಲ್ಲೋ ಮಣ್ಣಲ್ಲಿ ಗಡದ್ದಾಗಿ ಮಾಸಿಕೊಂಡು ಬಿದ್ದಿದ್ದೆ. ಇನ್ನೇನು ಮುಂಜಾನೆಯ ಇಬ್ಬನಿಯಲ್ಲಿ ಕರಗಿ ಭೂಮಿಯೊಳಗೆ ಇಳಿದು ಬಿಡುವ ಅಂತ ಲೆಕ್ಕ ಹಾಕಿದ್ದೆ. ಅದ್ಯಾಕೋ ಹೊತ್ತು ತಂದೆ ನನ್ನ ಇಲ್ಲಿಗೆ' ಎಂದಿತು ಆ 'ಪದ'.

'ಓಹೋ, ನೀನಾ, ಅದೇ ಆ ಎಲೀಟ್ ಪಬ್ ಪಕ್ಕ ಬಿದ್ದಿದ್ದವನು ತಾನೇ...' ಎಂದ ಬೈರಾಗಿ. ತನ್ನ ಮನದೊಳಗೆ ಹಕ್ಕಿಗಳ ಹಾಗೆ ಹಾರುತ್ತಿದ್ದ ಭಾವನೆಗಳ ಕಲರವ ಒಂದಿನತು ಹೊರಗೆ ಬರಗೊಡದೆ ನಿರ್ಭಾವುಕ ದನಿಯಲ್ಲಿ ಆ ಮಾತು ಉದುರಿಸಿದ್ದ. 'ಅಲ್ಲ, ನೀನು ಮಣ್ಣಲ್ಲಿ ಕರಗಿ ಹೋಗೋನೇ ಆಗಿದ್ದರೆ ನನ್ನ ಕಾಲಿಗೆ ಯಾಕೆ ತೊಡರಿಕೊಂಡೆಯೋ' ಎಂದು ಅದೇ ಉಸಿರಿನಲ್ಲಿಯೇ ಉಲ್ಟಾ ದಬಾಯಿಸಿಯೂ ಬಿಟ್ಟ.

ಇವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನೇಸರ ಮೂಡುವ ಮುಂಚೆ ಪಶ್ಚಿಮದಲ್ಲಿ ಜಾರಿಕೊಳ್ಳ ಬೇಕಿದ್ದ ಮೌನವೊಂದು ಹಾಗೇ ಅಲ್ಲಿಯೇ ನಿಂತುಬಿಟ್ಟಿತು. ಅದನ್ನು ನೋಡಿದವನೇ "ಹಚಾ'' ಎಂದು ಓಡಿಸಿದ ಬೈರಾಗಿ ಅಸಲಿ ಹಕೀಕತ್ತು ಶುರುವಿಟ್ಟ..

'ನೋಡು ವಿಷಯ ಇಷ್ಟೇ, ನನ್ನದೊಂದು ಕಾವ್ಯ ಇದೆ. ಅದು ನನ್ನ ಬದುಕಿಗಿಂತ ದೊಡ್ಡದು. ನಿಜ ಹೇಳಬೇಕೆಂದರೆ ಅದೊಂದು ಕಾವ್ಯವ ಅಂತರ್ಗತಗೊಳಿಸಿಕೊಳ್ಳಲು ನೂರಾರು ಜನುಮ ಕಾದಿದ್ದೇನೆ. ಈಗ ಎಲ್ಲವೂ ಒಂದು ಹಂತಕ್ಕೆ ಬಂದದ್ದಾಗಿದೆ ಆದರೆ ನನ್ನನ್ನು ಮೀರಿ ನಿಂತಿರುವ ಆ ಕಾವ್ಯಕ್ಕೆ ಕಡೆಯದಾಗಿ ನಶೆಯ ಲಹರಿ ಬೇಕು. ಎಂಥ ನಶೆ ಬೇಕು ಎಂದರೆ ಅಲ್ಲಿ ಪ್ರಜ್ಞೆ ಕರಗಿ ಹೋಗಬೇಕು, ಚಿಂತನೆ ಚಿಲುಮೆಯಾಚೆಗೆ ನಿಲ್ಲಬೇಕು. ಅಲ್ಲಿ ಏನಿದ್ದರೂ ಅಲ್ಲಮನ ಬಯಲೂ, ಬುದ್ಧನ ಭಾವವೂ, ಶಕ್ತಿಶಿವರ ಕದಲದ, ಕದಡದ ಅಖಂಡ ಏಕಭಾವ ಬಿಂದುವೂ ಇರಬೇಕು' ಅಂದ.

ಪಕ್ಕದಲ್ಲಿ ಹೊರಳಾಡುತ್ತಿದ್ದ ಆ ಮಾಸಿದ್ದ ಪದ ಏನೂ ಮಾತನಾಡಲಿಲ್ಲ. ಇದನ್ನು ನೋಡಿ, ಮನದಲ್ಲೇ ಶಿವಶಕ್ತಿಯರ ಬಿಂದುವಿನ ಚಕ್ರ ಬಿಡಿಸುತ್ತಾ ಹೇಳಿದ, "ನೋಡು, ನಶೆ ಎಂದರೆ ಅದು ಅಂತಿಂಥ ನಶೆಯಲ್ಲ. ಆ ನಿನ್ನೊಡತಿ ತನ್ನೊಳಗೆ ತುಂಬಿಕೊಳ್ಳುತ್ತಿದ್ದಳಲ್ಲ ಅಂಥ ನಶೆ. ಅಂಥದ್ದೊಂದು ನಶೆಯಲ್ಲೇ ಮಿಂದ ನಂತರವೇ ತಾನೇ ಆಕೆ ನಿನ್ನ ತುಳುಕಿಸಿ ಹೋದದ್ದು. ಅದಕ್ಕೆ ತಾನೇ ನೀನು ಮೈತುಂಬಾ ಮತ್ತು ಹೊದ್ದುಕೊಂಡು ಬಿದ್ದಿರುವುದು. ನಿನ್ನೊಳಗೆ ಭೂತ, ಭವಿಷ್ಯ, ವರ್ತಮಾನ ತಟಸ್ಥವಾಗಿದೆ. ಎಲ್ಲವೂ ನಿನ್ನೊಳಗೆ ಕುಸಿದು, ಕುಸಿದು ಕೃಷ್ಣನಾಗಿದೆ. ಕೃಷ್ಣ, ಮಹಾ ಕೃಷ್ಣ ಎಲ್ಲವನ್ನೂ ಕರಗಿಸಿಕೊಳ್ಳುವ, ಕರಗಿಸಿ ಅರಗಿಸಿಕೊಳ್ಳುವ ಮಹಾಕಾಲ. ಆ ಮಹಾಕೃಷ್ಣವೇ ವೇದಿಕೆ ಶಿವಶಕ್ತಿಯರು ಬಿಂದುವಾಗಲು. ಅಂಥದ್ದೊಂದು ಲೋಕೋತ್ತರ ನಶೆ ನಿನ್ನೊಳಗೆ ಇದೆ. ಅದಕ್ಕೆ ನಿನ್ನ ಹೊತ್ತು ತಂದೆ' ಅಂದ.

ಪಕ್ಕದಲ್ಲಿನ ಪದ ತೊದಲುತ್ತಾ ತುಸು ಗಟ್ಟಿಯಾಗಿ ಒದರಿತು, "ಲೇ ಬೈರಾಗಿ, ಚಿಲುಮೆ ಸೇದಿ ಗಡದ್ದಾಗಿ ಏಳೆಂಟು ಲೋಕ ಸುತ್ತಿ ಬರೋ ನಿನಗೆ ಅದ್ಯಾಕೋ ಬೇಕು ನಶೆ. ನೋಡು, ನಶೆ ನನ್ನೊಳಗಿಲ್ಲ. ನಾನು ನಶೆಯೊಳಗಿದ್ದೇನೆ. ನಶೆಯೊಳಗೆ ಇದ್ದವರಿಗೆ 'ನಾನು' ಎಂಬುದು ಇಲ್ಲ. ಹಾಗಾಗಿ ನಿಜ ಹೇಳಬೇಕೆಂದರೆ ಇಲ್ಲಿ ನಾನಿಲ್ಲ. ಇರುವುದೆಲ್ಲವೂ ನಶೆ ಮಾತ್ರ. ಅದು ನನ್ನೊಡತಿಯ ಅನುಗ್ರಹದ ಫಲ. ಅವಳ ಲಹರಿ'.

ಇಷ್ಟು ಹೇಳಿ ಮತ್ತೆ ಮಗ್ಗಲು ಬದಲಿಸುತ್ತಾ, ಮೈ ತುಂಬಾ ಮೆತ್ತಿಕೊಂಡಿದ್ದ ಧೂಳಿನ ಪರಿವೇ ಇಲ್ಲದೆ ಉಸುರಿತು, "ಮಧುಶಾಲೆಯಲ್ಲಿ ಮೀಯುತ್ತಾ ಕಣ್ಣಲ್ಲೇ ಕಾವ್ಯ ತುಳುಕಿಸುವ ರಸಿಕಳು ನನ್ನೊಡತಿ. ಅವಳದೊಂದು ಸಾಲಿಗೆ ಮತ್ತೆ, ಮತ್ತೆ ಹೊತ್ತಿ ಉರಿಯುವ ಹೃದಯಗಳೆಷ್ಟೋ... ಪ್ರತಿ ಬಾರಿ ಹೃದಯವೊಂದು ಹೊತ್ತಿ ಉರಿವಾಗಲೂ ಅದರಳೊಗಿನ ಪರಿಶುದ್ಧ ಭಾವವ ದಿಟ್ಟಿಸುತ್ತಾಳೆ. ತನ್ನ ರತಿ ದೇಹದೊಳಗಿನ ತಿದಿಯೊತ್ತಿ ಆತ್ಮದ ಕುಲುಮೆಯಿಂದ ಭಾವಗಳ ಸಾಚಾತನ ನೋಡುತ್ತಾಳೆ. ಅವಳ ಆತ್ಮದ ತಹತಹಕ್ಕೆ ಪರಿಶುದ್ಧ ಭಾವದ ಹವಿಸ್ಸೇ ಬೇಕು. ಅವಳ ಮನೋಯಜ್ಞದಲ್ಲಿ ಅವು ಅಂತಿಮವಾಗಿ ಹೊಳೆಯಬೇಕು' ಎಂದಿತು.

ಬೈರಾಗಿ ತನ್ನ ಆತ್ಮವನ್ನೂ ಕಿವಿಯಾಗಿಸಿಕೊಂಡು ಕೇಳುತ್ತಿದ್ದ. ಆ ಪದ ಮುಂದುವರೆಯಿತು, "ಜೀವ ಕನ್ನಿಕೆ ಸೃಷ್ಟಿ ಕಟ್ಟುವುದು ಇಟ್ಟಿಗೆಯಿಂದ ಅಲ್ಲ ಕಣೋ ಬೈರಾಗಿ, ಶೂನ್ಯದೊಳಗೆ ದಹಿಸಿ ಹೊರಬಿದ್ದ ಶುದ್ಧ ಭಾವದಿಂದ' ಅಂದಿತು.

ಇಂಥದ್ದೊಂದು ಮಾತಿಗಾಗಿ ಅದೆಷ್ಟು ಸಾವಿರ ವರುಷದಿಂದ ತಹತಹಿಸಿದ್ದನೋ ಬೈರಾಗಿ. ಮೆತ್ತಗೆ ತನ್ನ ಎದೆಯ ತಿದಿ ಒತ್ತಿ ಮಾತೆಂಬೋ ಮಾತುಗಳ ಮೂಡಿಸತೊಡಗಿದ, " ಅದೆಲ್ಲ ನನಗೆ ಗೊತ್ತು ಅದಕ್ಕೇ ನಿನ್ನ ಹೊತ್ತು ತಂದಿರೋದು... ನಿನ್ನೊಡತಿಯ ಮುಂದೆ ನಾನು ಯಾವತ್ತೂ ಮಂಡಿಯೂರಿ ಕುಳಿತಿರುತ್ತಿದ್ದೆ' ಎಂದು ಕಾಲಚಕ್ರದಲ್ಲಿ ಹಿಂದೆ ಸರಿದ. ಬೈರಾಗಿಯ ಮಾತಿನಿಂದ ಕಕ್ಕಾಬಿಕ್ಕಿಯಾಯಿತು ಪದ. ಎಲ್ಲಿಯ ನನ್ನೊಡತಿ, ಎಲ್ಲಿಯ ಬೈರಾಗಿ ಎಂದು ಲೆಕ್ಕ ಶುರುವಿಟ್ಟುಕೊಂಡಿತು.

ಇದರ ಪರಿವೆ ಇಲ್ಲದೆ ಬೈರಾಗಿ ಮುಂದುವರೆಸಿದ, ಅದೊಂದು ದಿನ ಅವಳ ಮುಂದೆ ಎಂದಿನಂತೆ ಮಂಡಿಯೂರಿ ಕುಳಿತಿದ್ದೆ. ಮಧುವಿನ ಹನಿಯೊಂದರ ಸಂಗಡ ಲಾಸ್ಯವಾಡುತ್ತಾ, ತೆಳುವಾಗಿ ಅದರಳೊಗಿನ ಮರ್ಮವ ಆತ್ಮಕ್ಕೆ ಹನಿಸಿಕೊಂಡಳು. ನಂತರ ಮಧುವಿನ ಬಟ್ಟಲು ಪಕ್ಕಕ್ಕಿಟ್ಟು ತಾನು ಈ ಲೋಕಕ್ಕೆ ಸೇರಿದವಳೇ ಅಲ್ಲವೇನೋ ಎನ್ನುವಂತೆ ನಿರ್ಲಿಪ್ತವಾಗಿ ಕೇಳಿದಳು,.. 'ಅದೆಷ್ಟು ಪ್ರೇಮಿಸಬೇಕು ಅಂತಾ ಇದ್ದೀಯ ನನ್ನನ್ನು' ಎಂದು.

'ನಾನೇ ನೀನಾಗುವಷ್ಟು' ಎಂದೆ,

'ಆಮೇಲೆ' ಎಂದಳು.

ಅವಳ ಮೊಗವನ್ನೇ ದಿಟ್ಟಿಸುತ್ತಿದ್ದೆ..

ಅವಳೇ ಮುಂದುವರೆದು ಕೇಳಿದಳು 'ನೀನು ನಾನಾದ ಮೇಲೆ ಮುಂದೇನು?',

'ನಿನ್ನೊಳಗಿನ ನೀನು ಕರಗಿ ಕಡೆಗೆ ಶೂನ್ಯವಾಗುವುದು' ಅಂದೆ.

"ಆಯಿತು' ಎಂದಳು.

ನನ್ನ ಕಣ್ಣನ್ನೇ ದಿಟ್ಟಿಸಿದಳು. ನಾನು ಹಾಗೇ ಅವಳ ಕಣ್ಣೊಳಗೆ ಇಳಿಯುತ್ತಾ ಹೋದೆ. ಕೈ ಹಿಡಿದು ಅಂತರಂಗಕ್ಕೆ ಕರೆದೊಯ್ದಳು, ಆತ್ಮದೊಳಗೆ ಬೆರೆಸಿಕೊಳ್ಳುತ್ತಾ ಕೇಳಿದಳು, 'ನನ್ನೊಳಗೆ ನೀನು ಕರಗಿ, ಆಮೇಲೆ ನಾನೂ ಕರಗಿ ಕಡೆಗೆ ಶೂನ್ಯವಾಗಿ ಹೋದ ಮೇಲೆ ಉಳಿಯುವುದೇನೋ ಹುಡುಗ?'

'ನಿನ್ನಾಣೆಗೂ ಗೊತ್ತಿಲ್ಲ, ಅದನ್ನೆಲ್ಲಾ ನೀನೇ ಹೇಳಬೇಕು, ಆ ಪ್ರಶ್ನೆಗಳನ್ನು ಕೇಳುವುದಿರಲಿ ಅದನ್ನು ಯೋಚಿಸಿದರೂ ನನಗೆ ಗೊಂದಲವಾಗುತ್ತೆ' ಎಂದೆ.

ತನ್ನ ಆತ್ಮದ ಆಳಕ್ಕೆ ಕರೆದುಕೊಳ್ಳುತ್ತಾ ಹೇಳಿದಳು, 'ದಡ್ಡ, ಶೂನ್ಯದಲ್ಲಿ ಗೊಂದಲವೆಲ್ಲೋ ಇರುತ್ತೆ, ಅಲ್ಲಿ ಎಲ್ಲವೂ ತುಂಬಿರುತ್ತೆ'. ನನಗೆ ಅರ್ಥವಾಗದು ಎಂದು ಅರಿತು, ತನ್ನ ಆತ್ಮದೊಳಗೆ ಪರಿಪೂರ್ಣವಾಗಿ ನಾನು ಹರವಿಕೊಳ್ಳಲು ಬಿಟ್ಟು ಬೆಚ್ಚಗೆ ಹೇಳಿದಳು, 'ನೋಡು ಎಲ್ಲವೂ ತುಂಬಿರುತ್ತೆ ಅಂದರೆ ಅದರ ಅರ್ಥ ಅಲ್ಲಿ ಏನೂ ಇಲ್ಲ ಎಂತಲೇ. ಏನೂ ಇಲ್ಲ ಎಂದರೆ ಅದು ಪರಿಪೂರ್ಣವೆಂದೇ... ಹಾಗಾಗಿ ಅಂಥ ಪರಿಪೂರ್ಣತೆ ಏಕಕಾಲಕ್ಕೆ ನಿಶ್ಚಲವೂ, ಚೈತನ್ಯಶೀಲವೂ ಆಗಿರುತ್ತೆ. ಸಂಭವ, ಅಸಂಭವ ಎರಡೂ ಅಲ್ಲಿ ಒಟ್ಟಿಗೇ ಇರುತ್ತವೆ' ಎಂದಳು.

ನಾನು ಪೆದ್ದಾಗಿ ನೋಡುತ್ತಿದ್ದೆ. 'ಹೋಗಲಿ ಬಿಡು... ಅನುಭವಕ್ಕೆ ವಿವರಣೆಯ ಅಗತ್ಯವಿಲ್ಲ. ಅನುಭವಿಸಿದ ಮೇಲೆ ವಿವರಣೆ ಬೇಕಿಲ್ಲ. ಮುಂದೆ ನಿನಗೇ ತಿಳಿಯುತ್ತದೆ' ಎಂದಳು.
ಹಾಗೆ ಅವಳ ಅತ್ಮದೊಳಗೆ ನನ್ನ ಬೆರೆಸಿಕೊಂಡ ಮೇಲೆ ಕಾಲ ನಿಂತು ಹೋಯಿತು. ಯುಗಯುಗಳೇ ಗತವಾದವು. ಹೀಗೆ ಅದೆಷ್ಟು ಕಾಲ ಸಂದಿತ್ತೋ... ಒಂದು ದಿನ ಇದ್ದಕ್ಕಿದ್ದಂತೆ ಹೇಳಿದಳು, 'ಸಾಕು, ಹೊರಡು, ಕೆಲಸ ಮಾಡುವುದಿಲ್ಲವೇನು?' ಎಂದು.

'ಯಾಕೆ' ಅಂದೆ,

'ಅಯ್ಯೋ, ಅರಸಿಕ, ಹೋಗಿ ಮತ್ತೊಂದಿಷ್ಟು ನಶೆ ತೆಗೆದುಕೊಂಡು ಬಾ... ಭಾವದ ನಶೆ, ಅನುಭಾವದ ನಶೆ, ಅದ ಕರಗಿಸಿ ಮತ್ತೆ ಶೂನ್ಯವಾಗೋಣ' ಎಂದಳು.

'ಹೇಗೆ?' ಅಂದೆ.

'ಅಕ್ಷರದಾಚೆಗೆ ನಿಂತ, ಕಿವಿಗಳಿಗೆ ದಕ್ಕದ, ಸದಾ ಮನದೊಳಗೆ ಜಿನುಗುವ ಕಾವ್ಯ ತಾ' ಅಂದಳು. ಸರಿ ಎಂದು ಹೊರಟೆ. ಅವಳ ಆತ್ಮದಿಂದ ನನ್ನನ್ನು ಕಡ ಪಡೆದು ಹೊರಬಿದ್ದೆ. ಅಲೆದೆ, ಅಲೆದೆ... ಅಂಥದ್ದೊಂದು ಕಾವ್ಯ ಎಲ್ಲಿಂದ ತರಲಿ, ಅದ್ಹೇಗೆ ಸೃಷ್ಟಿಸಲಿ ಎಂದು. ಕಡೆಗೊಂದು ದಿನ ಅರಿವಾಯಿತು, 'ನಾನು ಅವಳಾದ ಮೇಲೆ ಕಾವ್ಯ ಹೊರಗೆ ಎಲ್ಲಿ ತಾನೇ ಇರುತ್ತೆ? ಅದು ಇರುವುದು ನಮ್ಮೊಳಗೆ... ಆ ನಮ್ಮೊಳಗಿನ ಕಾವ್ಯ ಪದವಾಗಿ ಅಕ್ಷರದಲ್ಲಿ ಸ್ಥಾಯಿ ಆಗುವ ಮುನ್ನ ಬರಿದೆ ಭಾವದ ಕಾವ್ಯ ಕಟ್ಟಬೇಕು. ಅದುವೇ ಅಕ್ಷರದಾಚೆಗೆ ನಿಂತ, ಪದಗಳಾಗದ, ಕಿವಿಗಳಿಗೆ ದಕ್ಕದ ಶುದ್ಧ ಭಾವದ ನಿಶ್ಶಬ್ಧ ಕಾವ್ಯ... ಭಾವನೆಗಳು ಪದವಾಗಿ ಶಬ್ಧವಾಗುವ ಮುನ್ನವೇ ಕಾವ್ಯ ಕಟ್ಟಿದೆ... ಅವಳ ಎದೆಯೊಳಗೆ....'' ಎಂದು ಹೇಳಿ ಬೈರಾಗಿ ಮಾತು ನಿಲ್ಲಿಸಿದ.

'ಅಲ್ಲಾ ಬೈರಾಗಿ, ಹಾಗಾದರೆ ಆ ಶಬ್ದವಲ್ಲದ ಕಾವ್ಯಕ್ಕೆ ಶಬ್ದವಾಗಿ ಹೊಮ್ಮಿ, ಪದವಾಗಿ ಬಿದ್ದು ಮಣ್ಣಲ್ಲಿ ಹೊರಳಿರುವ ನಾನು ಮೈಲಿಗೆಯಲ್ಲವೇ? ನನ್ನನ್ನೇಕೆ ತಂದೆ?' ಎಂದಿತು ಆ ಪದ.

ಬೈರಾಗಿ ನಿಧಾನವಾಗಿ ಹೇಳಿದ, 'ಶಬ್ಧವಾಗದ ಕಾವ್ಯಕ್ಕೆ ನಶೆ ಬರುವುದು ನಿನ್ನಿಂದಲೇ.. ಅವಳ ಅಧರದಿಂದ ಮತ್ತಾಗಿ ಇಳಿದ ನಿನಗೆ ಯಾವುದೇ ಅರ್ಥದ ದಾಸ್ಯ ಇಲ್ಲ.... ನೀನೇ ಹೇಳಿದಂತೆ ನಶೆ ನಿನ್ನೊಳಗಿಲ್ಲ, ನೀನು ನಶೆಯೊಳಗೆ ಇರುವೆ. ಹಾಗಾಗೇ ಅರ್ಥ ಮೀರಿದ ಅವಿರತ ಕಾವ್ಯಕ್ಕೆ ನೀನೇ ಶೀರ್ಷಿಕೆ'

ಒಂದಷ್ಟು ಹೊತ್ತು ಅಲ್ಲಿ ಮೌನವೇ ಮೌನ ತುಂಬಿತ್ತು.

ಬೈರಾಗಿ ಮೆಲ್ಲನೆ ಮತ್ತೊಂದು ಮಾತು ಹೇಳಿದ್ದು ಪಕ್ಕದಲ್ಲಿನ ಪದಕ್ಕೆ ಕೇಳಿಸಲೇ ಇಲ್ಲ.

'ನಾನೇ ಅವಳಾದ ಮೇಲೆ ಅವಳಿಗೆ ಅರ್ಪಿಸಲು ಉಳಿವುದಾದರೂ ಏನು? ಅವಳಿಗೆ, ಅವಳೇ ಅರ್ಪಣೆ' ಎಂದಿದ್ದ ಅವ.

ಅಲ್ಲಿಗೆ ಯುಗಯುಗಾಂತರದ ನಂತರ ಮತ್ತೊಂದು ನಿಹಾರಿಕಾ ವಸಂತ ಮೈದಳೆವ ಕ್ಷಣ ಸನ್ನಿಹಿತವಾಗಿತ್ತು. ಶಿವಶಕ್ತಿಯರ ಸಮ್ಮಿಳನಕ್ಕೆ ಕಾತರಿಸಿ ಆಗಸದ ತುಂಬಾ ಹರಡಿಕೊಂಡಿದ್ದ ಚುಕ್ಕಿಗಳು ಮೈ ನೆರೆದವು.....

ಚಿತ್ರಕೃಪೆ: ಕಿರಣ್ ಮಾಡಾಳ್

Thursday, August 12, 2010

ನನ್ನೊಳಗಿನ ನೀನು ಮತ್ತು ನಾನು

1

ನನ್ನೊಳಗೆ ನೀನು ಯಾವತ್ತೂ ಉಳಿದಿರುವೆ,

ನಾ ಕರಗಿ ಹೋದ ಮೇಲೂ...

ಏಕೆಂದರೆ

ನೀ ನನ್ನ ನಿಜ ಅಸ್ತಿತ್ವ2

ನಿನ್ನೊಳಗೆ ನಾನು ಇರಲೇಬೇಕೆಂಬ

ಹಂಬಲ ಇಲ್ಲ, ಹಠವೂ ಇಲ್ಲ...

ಉಳಿಸಿಕೊಂಡರೆ ಉಸಿರಾಗುವೆ

ಉಳಿಸದೆ ಹೋದರೆ

ಮರೆವೆಂಬ ಊರಲ್ಲಿ ಮರೆಯಾಗುವೆ

ಹಾಗೇ ಒಂದು ಕಥೆ

ಬ್ರಹ್ಮಾಂಡವೆಂಬೋ ಬ್ರಹ್ಮಾಂಡದಲ್ಲಿ ಭುವಿಯೆಂಬ ಸಣ್ಣದೊಂದು ಬಿಂದು. ಅಲ್ಲೋ ಪಿತಗುಟ್ಟುವಷ್ಟು ಜನ, ಮನುಕುಲವೆಂದು ಕರೆದುಕೊಂಬರು ತಮ್ಮನ್ನು ಅವರು. ಆ ಮನುಕುಲಕ್ಕೆ ಇತಿಹಾಸವೆಂಬೋ ಇತಿಹಾಸವೂ, ಭವಿಷ್ಯವೆಂಬೋ ಭವಿಷ್ಯವೂ ಉಂಟು. ಆದರೆ ಅವರೆಲ್ಲಾ ವರ್ತಮಾನದಲ್ಲೇ ಫುಲ್ ಬಿಜಿ... ಇತಿಹಾಸವನ್ನು ಕಾಣುವ ಒಳಗಣ್ಣಾಗಲಿ, ಭವಿತವ್ಯವ ದಿಟ್ಟಿಸುವ ದೃಷ್ಟಿಯಾಗಲಿ ಬಹುತೇಕ ನಶಿಸಿದೆ.

ಇಂತಿಪ್ಪ ಮನುಕುಲದ ಇತಿಹಾಸ, ವರ್ತಮಾನವನ್ನು ಯಾವನೋ ಪರದೇಶಿ ಕೆದಕಲಾಗಿ ಕಂಡದ್ದಾದರೂ ಇಷ್ಟು:
ಪ್ರೀತಿಸುವವರಿಗೆ ಹತ್ತಿರವಾಗದ, ಕಾತರಿಸಿದವರೊಡನೆ ಕೂಡಲಾಗದ, ಬಯಸಿದವರನ್ನು ಪಡೆಯಲಾಗದ ಅಸಹಾಯಕವೂ, ಗೊಂದಲಮಯವೂ ಆದ ಜೀವನ ಅಲ್ಲಿ ಬಹುಪಾಲು ಜನರದ್ದು. ಪ್ರೀತಿಸಿ, ಕಾತರಿಸಿ, ಬಯಸಿ ಪಡೆದವರು ಕೆಲ ಮಂದಿ, ಅವರದೋ ಧನ್ಯತಾಭಾವ... ಉಳಿದಂತೆ ಅಲ್ಲೊಬ್ಬರು, ಇಲ್ಲೊಬ್ಬರು ಅನುಭವಿಗಳು, ಅನುಭಾವಿಗಳು, ಅವರಂತು ಅವನ್ಯಾರೋ 'ಭಗವಂತನೆಂಬ ಭಗವಂತನು' ಕೊಟ್ಟದ್ದ ಪಡೆದು ಗೊಂದಲಗಳಿಂದ ದೂರವೇ ಉಳಿದವರು... ಹೀಗಾಗಿ ಈ ಎಲ್ಲ ಮಂದಿಗೆ ಅವರವರದೇ ಆದ ಸತ್ಯಗಳು...

ಫ್ಲ್ಯಾಶ್ ಬ್ಯಾಕ್ ನಲ್ಲೂ ಫಾಸ್ಟ್ ಫಾರ್ವರ್ಡ್ ನಲ್ಲೂ, ಸ್ಲೋ ಮೋಷನ್ನಲ್ಲೂ, ನಾರ್ಮಲ್ ಮೋಡ್ನಲ್ಲೂ ಅಲ್ಲಿ ಯಾವಾಗಲೂ ಇದೇ ಕಥೆ..

ಇದರಿಂದಾಗಿ ಅಲ್ಲಿ ಒಟ್ಟೊಟ್ಟಿಗೇ ತಾಳ್ಮೆಯೂ, ಅಸಹನೆಯೂ, ಗೊಂದಲ, ಧ್ಯಾನ, ಹಿಂಸೆ, ಶಾಂತಿ, ಕೊಲೆ, ಸುಲಿಗೆ, ವಂಚನೆ, ಕ್ರೌರ್ಯ, ಮದ, ಮತ್ಸರ, ಪ್ರೀತಿ, ಮೋಹ, ಪ್ರೇಮ, ಕಾಮ, ಲಾಂಗು, ಮಚ್ಚು, ಕಾರತೂಸಿನ ಹೊಗೆ, ಕೆಂಪು ಗುಲಾಬಿ, ಬಿಳಿ ಪಾರಿವಾಳ ಮತ್ತೆ ಕೆಲ ದೇವತೆಯರು ಅವರ ಆರಾಧಕರೂ ಇದ್ದರು....

ಇದೆಲ್ಲ ಕಾರಣದಿಂದ ಮನುಕುಲವೆಂಬ ಕುಲದ ಕಥೆಯು ಏಕಕಾಲಕ್ಕೆ ಅಸಹನೀಯವೂ, ಆದರಣೀಯವೂ, ದಾರುಣವೂ, ಪ್ರೀತಿಪೂರ್ವಕವೂ ಆಗಿತ್ತೆಂಬುದು ಕಂಡು ಬಂದಿತೆಂಬಲ್ಲಿಗೆ ಪರಿಸಮಾಪ್ತಿ.

-------ಓಂ ಜನಗಣ ಮನ ಢಣಢಣ ಭಣಭಣ....-----------