Friday, December 25, 2009

ಕಾನನ ಮತ್ತು ಕಂಪು

ಚಾರಣ ನಡೆಸಿದಾತ ಕಾಲು ನೊಂದು ತಂಪು ನೆರಳ ಹೊಂಗೆಯಡಿ ಹಾಗೇ ಹಾಯಾದ. ತನ್ನೊಳಗೆ ತಾನೇ ಮುದಗೊಂಡು, ಮೌನ ಸಂತಸದಿ ಹದಗೊಂಡಿದ್ದ ಮರ ಅದು. ದಾರಿಹೋಕನ ಅಲೆದಾಟ ಕಂಡು, ಕರಗಿ ಬಾಷ್ಪ ಮಾಲೆ ಹರವಿತು. ಚಾರಣಿಗನ ಮೈ ಅಪ್ಪಿದ ಬಾಷ್ಪ ಮನಕೂ ಇಳಿಯಿತು. ಆತ್ಮ ತಂಪಲಿ ತೊಯ್ದು, ಎದೆಯಾಳದಿ ಬೆಚ್ಚನೆ ಹಾಡು ಅರಳಿತ್ತು. ಭಾವ ಬಿರಿದ ಹಾಡು.
ಕಣ್ಣು ಬಿಟ್ಟಾಗ ಅರ್ಥ ಸಿಕ್ಕಿತ್ತು. ಆತ್ಮ ತೊಳೆದು ಹುರುಪು ಮೂಡಿತ್ತು. ಎದೆಯೊಳಗೋ ಭಾವದ ಗುನುಗು. ಆದರೆ ಅದಕಿಲ್ಲ ಪದಗಳ ಸಖ್ಯ. ಹೇಗೆ ಬೆಸೆಯಲಿ ಭಾವಕು, ಪದಕೂ ನಂಟು ಎಂದು ಕುಳಿತ. ಮೌನದ ಮರ ಮಾತಾಡಿತು. ಅಲೆಯ ಬೇಡ ಹಾಗೇ ಸುಮ್ಮನೆ, ಅಲೆಯುವುದೇ ಆದರೆ ಕಾಲೊಳಗೆ ಹಾದಿ ತುಂಬಿಕೊ. ಹಾದಿ ಬದಿಯ ಬೀದಿ, ಬೀದಿ ಆಚೆಯ ಮರಗಿಡ, ಅದರಾಚೆಯ ನದಿ, ಝರಿ, ಬೆಟ್ಟ, ಗುಡ್ಡ ತುಂಬಿಕೋ. ಕಾಲು ತುಂಬಿದ ಮೇಲೆ ಮನವೂ ತುಂಬೀತು. ಮನ ತುಂಬಿದರೆ ಎದೆ ಭಾವಕೆ ಪದಗಳೂ ದಕ್ಕೀತು ಎಂದಿತು.
ಮತ್ತೆ ಹೊರಟ ಚಾರಣಿಗ. ಈ ಬಾರಿ ದಾರಿಯ ಮೇಲೆ ಕಾಲಿರಲಿಲ್ಲ. ದಾರಿಯೇ ಅವನ ಕಾಲಲ್ಲಿತ್ತು. ಹೆಜ್ಜೆಗಳಲಿ ಊರಿತ್ತು. ನದಿ, ತೊರೆ, ಬೆಟ್ಟ, ಗುಡ್ಡಗಳಿತ್ತು. ಆದರೂ ಎದೆಯ ಭಾವಕೆ ಪದದ ಬಂಧ ಬರಲಿಲ್ಲ. ಸುತ್ತಿ, ಸುಳಿದು ಮತ್ತೆ ಅದೇ ಮರದ ಬಳಿ ಬಂದ. ವಸಂತ ಸಮಯ. ಈ ಬಾರಿ ನಿದ್ದೆಗೆ ಜಾರಿದ ಅವನ ಮೇಲೆ ಬಾಷ್ಪದ ಜೊತೆ ಹೂಗಳ ಮಾಲೆ. ತಂಪಿನೊಟ್ಟಿಗೆ, ಕಂಪಿನ ದ್ರವ್ಯ.. ಎದೆಯೊಳಗಣ ಭಾವ, ಆತ್ಮಕ್ಕೂ ಹಬ್ಬಿತ್ತು. ಎದ್ದು ಕುಳಿತ. ದಟ್ಟೈಸಿದ ಭಾವಕೆ ಪದಗಳು ಕೊಡು ಮರವೇ ಎಂದ.
ಮರ ಹೇಳಿತು, ನನ್ನದು ಹೂವಿನ ಭಾಷೆ. ಪ್ರೀತಿ ದಟ್ಟೈಸಿದರೆ ಹೂ ಅರಳಿಸುವೆ, ಶೋಕವಾದರೆ ಎಲೆ ಉದುರಿಸುವೆ. ನಿನ್ನೊಳಗೆ ಇಳಿದರೆ ನಿನಗೂ ನಿನದೇ ಭಾಷೆ ಸಿಕ್ಕೀತು. ಭುವಿ ಸುತ್ತಿದ್ದು ಸಾಕು, ಮುದ್ದಾದ ಮನವೊಂದ ಅರಸಿ, ಆ ಮನದ ಬನದಿ, ಭಾವ ಕಾನನದಿ ಹೊರಡು ಚಾರಣ. ಆಗ ಪದ ದಕ್ಕೀತು ಎಂದಿತು.
ಹೊರಗಣ ಹಾದಿಯಲ್ಲ, ಒಳಗಣ ಹಾದಿ. ಮನದೊಳಗೆ ಇಳಿದು ನಡೆಸುವ ಚಾರಣ. ಅದುವೇ ರಮಣೀಯ- ಸೌಂದರ್ಯ. ಅದುವೇ ಅರ್ಥ - ತತ್ವ. ಅಲ್ಲಿದೆ ಬದುಕು. ಬದುಕಿನಾಚೆಯ ಒಲವ ಬದುಕು. ದಕ್ಕಿಸಿಕೊಂಡರೆ ಅದ, ಎದೆಯ ಭಾವಕೆ ಪದ...
ಚಾರಣಿಗ ಮತ್ತೆ ಹೊರಟ. ಕಾಲ ಮೇಲಲ್ಲ, ಒಲವಿನ ಮೇಲೆ.
ಒಲಿದಳು ದೇವಿ, ಪ್ರೇಮ ಪಲ್ಲವಿ.
ಎದೆ ತುಂಬಿದ ಭಾವಕೆ ಪದ ಬೆಸೆದಿತ್ತು. ಕಾವು ಕೂತಿದ್ದ ಹಾಡು ಕಡೆಗೂ ಹೊಮ್ಮಿತ್ತು.

No comments:

Post a Comment