Friday, November 6, 2009

ನೆಲವೆಂದರೆ ಅದು......

ಇತ್ತೀಚೆಗೆ ಕೆಲ ಸೃಜನಶೀಲ ಗೆಳೆಯರು ಹೊರತಂದ `ನೆಲದ ಮಾತು' ಮಾಸಿಕದ ಮೊದಲ ಸಂಚಿಕೆಗೆ ಬರೆದ ಅಭಿನಂದನಾ ಬರಹ.
****************************************************************************************************************

ಸೃಜನಶೀಲ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಇಂದಿನ ತುರ್ತು. ಪ್ರಸಕ್ತ ನಾಡಿನ ಮುಂದಿರುವ ಗಂಭೀರ ಸವಾಲುಗಳನ್ನು ಸಮರ್ಥವಾಗಿ, ಸಮಗ್ರವಾಗಿ ಎದುರಾಗಬೇಕಾದರೆ ಇದು ಅತ್ಯಗತ್ಯ. ಶ್ರಮಿಕ ಪರಂಪರೆಯೇ ಪ್ರಮುಖವಾದ ನಮ್ಮ ಹಳ್ಳಿಗಳು ಆಧುನಿಕ, ಜಾಗತಿಕ ಆಕರ್ಷಣೆಯಲ್ಲಿ ಇಂದು ಆಂತರ್ಯದಲ್ಲಿ ಕುಸಿಯುತ್ತಿವೆ. ಒಂದೊಮ್ಮೆ ಉತ್ಪಾದಕ ಕೋಶಗಳಾಗಿ, ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬಾಗಿದ್ದ ಹಳ್ಳಿಗಳು ಮುದುಡಿವೆ. ಕೃಷಿ ವಲಯ ಅನಾಕರ್ಷಕವಾಗಿದೆ, ಪಾರಂಪರಿಕ ಗೃಹ ಕೈಗಾರಿಕೆಗಳು ನೇಪಥ್ಯ ಸರಿದಿವೆ.
ದೇಶವೆಂದರೆ ಅದು ಪ್ರಜ್ಞೆ, ಪರಿಸರದ ಸಮಷ್ಟಿ. ಸೊಗಡು, ಸ್ವಾವಲಂಬನೆ, ವೈವಿಧ್ಯತೆಯ ಸಂಚಯ. ಆದರೆ ಮಾರುಕಟ್ಟೆ
ನಿರ್ದೇಶಿತ ಆಧುನಿಕ ಬದುಕಿನಲ್ಲಿ ಎಲ್ಲವೂ ಏಕರೂಪ. ಗ್ರಹೀತಗಳು ಸಹ. ಹಾಗಾಗಿ ಇದು ಜೀವನಶೈಲಿಯಲ್ಲಿಯೂ ಪ್ರತಿಧ್ವನಿಸ ತೊಡಗುತ್ತದೆ.
ಸಮಾಜ, ಸಮುದಾಯದ ಗ್ರಹಿಕೆ, ಅಗತ್ಯತೆಯನ್ನು ಟಿವಿಯಲ್ಲಿ ಪದೇ ಪದೇ ಕಾಣಿಸಿಕೊಳ್ಳುವ 10 - 20 ಸೆಕೆಂಡುಗಳ ಒಂದು ಜಾಹೀರಾತು ಬದಲಿಸಬಲ್ಲದು. ಮಾರುಕಟ್ಟೆ, ಮಾಲ್‌ಗಳಿಗೆ ಜನತೆಯನ್ನು ಎಳೆತಂದು ಕೊಳ್ಳುವುದಕ್ಕೆ ಪ್ರಚೋದಿಸಬಲ್ಲದು. ಜಾಹಿರಾತಿನ ಮೂಲಕ ಯಾವುದೋ ವಸ್ತುವನ್ನು ಮಾರುಕಟ್ಟೆ ಮಾಡಲಾಗುತ್ತದೆ ಎನ್ನುವದು ಅರೆಬರೆ ಸತ್ಯ. ಬದಲಿಗೆ ಜಾಹೀರಾತಿನ ಮೂಲಕ ಆಕರ್ಷಕ ರೀತಿಯಲ್ಲಿ ಸಮಾಜ, ಸಮುದಾಯಗಳಿಗೆ ಒಂದು `ಗ್ರಹಿಕೆ' ಅಥವಾ `ಕಾನ್ಸೆಪ್ಟ್‌' ಅನ್ನು ಮಾರಾಟ ಮಾಡಲಾಗುತ್ತದೆ ಎನ್ನುವುದು ಗಂಭೀರ ಸತ್ಯ. ಇಂತಹ ಆಕರ್ಷಕ ಮಾಯಾರೂಪಿ ಗ್ರಹಿಕೆಗಳನ್ನು ಸೃಷ್ಟಿಸಲೆಂದೇ ನಮ್ಮ `ಬುದ್ಧಿವಂತ' ಮನಸ್ಸುಗಳು ಹಗಲಿರಳು ಶ್ರಮಿಸುತ್ತಿವೆ. ಇದಕ್ಕಾಗಿಯೇ ಲಕ್ಷಾಂತರ ರೂ ವೇತನ ಮಾಸಿಕ ಪಡೆಯುತ್ತಿವೆ.
ಈ ಎಲ್ಲ ಅಂಶವನ್ನು ಸಮೀಕರಿಸಿ ನೋಡಿದಾಗಲೇ ನಮಗೆ ಗ್ರಾಮೀಣ ಬದುಕು ಏಕೆ ಮತ್ತು ಹೇಗೆ ಕುಸಿಯುತ್ತಿದೆ ಎನ್ನುವುದು ಅರ್ಥವಾಗುವುದು. ಏಕರೂಪದ ಕೃಷಿ, ಮಾರುಕಟ್ಟೆ ನಿರ್ದೇಶಿತ ಬೆಳೆ ಈ ಎಲ್ಲವುಗಳ ಹೂರಣ ಬಯಲಾಗುವುದು. ಯಾವುದೇ ದೇಶ, ಸಮುದಾಯದ ಗ್ರಾಮೀಣ ಬದುಕಿನ ಸ್ವಾವಲಂಬನೆ ಮುರಿಯುವುದು ಕಾರ್ಪೊರೆಟ್‌ ವಲಯಕ್ಕೆ ಅಥವಾ ಎಂಎನ್‌ಸಿಗಳಿಗೆ ನಿಜಕ್ಕೂ ಏಕೆ ಮುಖ್ಯವಾಗಿತ್ತು ಎನ್ನುವುದು ಅರ್ಥವಾಗುವುದು.
ಹಳೆಯ ಕತೆಯನ್ನು ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ. ಅವಘಡ ಸಂಭವಿಸಿದ್ದಾಗಿದೆ. ಗ್ರಾಮೀಣ ಬದುಕು ಮೂರಾಬಟ್ಟೆಯಾಗಿದೆ. ಹಳ್ಳಿಗರಿಗೂ ಹಳ್ಳಿಗಳು ಶಾಪವಾಗಿ ಗೋಚರಿಸಿವೆ. ನಗರಿಗರಿಗಂತೂ ಉಪೇಕ್ಷೆಯಾಗಿವೆ. ಮೆಟ್ರೋ ಸಂಸ್ಕೃತಿ ಎಲ್ಲರ ದುಡಿಮೆಗೂ ಶಕ್ಯಾನುಸಾರ ಅವಕಾಶ ಕಲ್ಪಿಸಿದೆ. ಹೊಲ ಉಳುವ ಕೈಗಳು ರಾತ್ರಿ ಪಾಳಿಯ ಕ್ಯಾಬ್‌ಗಳಲ್ಲಿ ಸ್ಟಿಯರಿಂಗ್‌ ಹಿಡಿಯುತ್ತಿವೆ. ಮನೆ, ಹೊಲ ನಿಭಾಯಿಸುತ್ತಿದ್ದ ಹೆಣ್ಣುಮಕ್ಕಳು ಗಾರ್ಮೆಂಟ್‌ಗಳಲ್ಲಿ ದಾರ ಪೋಣಿಸುತ್ತಿದ್ದಾರೆ.

ಇಂತಹ ಕಟು ವಾಸ್ತವದಲ್ಲಿಯೇ ನಾವು ಅಭಿವೃದ್ಧಿ ಪತ್ರಿಕೋದ್ಯಮ ಇಂದಿನ ತುರ್ತು ಎನ್ನುತ್ತಿದ್ದೇವೆ. ಕುಸಿದ ಮನೆಯಲ್ಲಿ ಕುಳಿತಾಗ ಇಂತಹ ಮಾತುಗಳು ಬಲು ಜೊಳ್ಳು ಅನಿಸುತ್ತವೆ. ದೇಸಿ ಸಂಸ್ಕೃತಿ ಪುನರುತ್ಥಾನ ಎಂದರೆ ಖಾದಿ ನೇಯ್ದು ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಅಂಗಡಿ ಬಾಡಿಗೆ ಹಿಡಿದು ಮಾರಾಟ ಮಾಡುವುದಲ್ಲ. ಎಲ್ಲ ಆಕರ್ಷಣೆಗಳಿಗೆ ಮುಕ್ತವಾಗಿಯೇ ಗ್ರಾಮೀಣ ಬದುಕನ್ನು ಹೊಸದಾಗಿ ಕಟ್ಟಲು ಪ್ರಯತ್ನಿಸುವುದು. ಆಕರ್ಷಣೆಯೊಟ್ಟಿಗೇ, ಅಗತ್ಯತೆಯ ಅರಿವು, ಸಂಯಮ ಕಲಿಸುವುದು. ಉತ್ಪಾದಕತೆಯಲ್ಲಿ ಸಹಭಾಗಿತ್ವ, ವಿಕೇಂದ್ರೀಕರಣ ಎರಡನ್ನೂ ಬೆರೆಸುವುದು. ಇಂತಹ ವೈದೃಶವನ್ನು ನಿಭಾಯಿಸಲು ಗ್ರಾಮೀಣ ಬದುಕಿಗೆ ಮಾತ್ರ ಸಾಧ್ಯ. ಏಕೆಂದರೆ ಗ್ರಾಮೀಣ ಬುದುಕು ಎಂದರೆ `ಒಳಗೊಳ್ಳುವಿಕೆ' ಎಂದೇ ಅರ್ಥ.
ನಿಜಕ್ಕೂ ಇಂದು ದೇಸಿ ಮನಸ್ಸುಗಳ ಮುಂದಿರುವ ಬಹು ದೊಡ್ಡ ಸವಾಲೆಂದರೆ, ಅದು ಹಳ್ಳಿ ಹಾಗೂ ಹಳ್ಳಿಗಾಡಿನ ಹೆಣ್ಣುಮಕ್ಕಳ ಪುನಶ್ಚೇತನ. ಮಾಜಿ ರಾಷ್ಟ್ರಪತಿ ಕಲಾಂರ `ಪುರ' ಮಾದರಿ ಅಭಿವೃದ್ಧಿ ಸೇರಿದಂತೆ ಸರ್ಕಾರದ ನೂರಾರು ಮಹತ್ವಾಕಾಂಕ್ಷಿ ಯೋಜನೆಗಳ ಗಂಭೀರ ಅನುಷ್ಠಾನ. ಇದರೊಟ್ಟಿಗೆ ಇಂತಹ ಯೋಜನೆಗಳು ಹೊಸದಾಗಿ ತಂದೊಡ್ಡುವ ಆಕರ್ಷಣೆ, ಸವಾಲುಗಳನ್ನು ಎದುರಾಗುವುದು ಕೂಡಾ. ಸೃಜನಶೀಲ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಮುಖ್ಯವಾಗುವುದೇ ಇಲ್ಲಿ. ಜನರಲ್ಲಿ ವಿಶ್ವಾಸ, ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿ ಸರ್ಕಾರದ ಯೋಜನೆಗಳು ಫೈಲುಗಳಲ್ಲೇ ಕೊಳೆಯದೆ ಫಲಾನುಭವಿಗಳಿಗೆ ಮುಟ್ಟಿಸುವಲ್ಲಿ. ಅದೇ ರೀತಿ ಹೊಸ ನೀರು ತರುವ ಕಳೆ, ಕೊಳೆಯನ್ನು ಸಮರ್ಥವಾಗಿ ಎದುರಿಸುತ್ತಾ, ಅವಕಾಶಗಳ ಪ್ರವಾಹ ಹರಿಸುವಲ್ಲಿ.
ಇದೆಲ್ಲಕ್ಕಿಂತ ಮುಖ್ಯವಾಗಿ ಬಲು ದೊಡ್ಡ ಜವಾಬ್ದಾರಿಯೊಂದಿದೆ. ಅದು ಗ್ರಾಮೀಣ ಬದುಕು ಸಹ್ಯ, ಹಸನು ಎನಿಸುವ `ಗ್ರಹಿಕೆ' ಅಥವಾ `ಕಾನ್ಸೆಪ್ಟ್‌'ಗಳನ್ನು ಆಕರ್ಷಕವಾಗಿ ಜನರಿಗೆ ತಲುಪಿಸುವುದು. ಹಳ್ಳಿಗಳಲ್ಲೇ ಉಳಿಯುವಂತೆ ಪ್ರಚೋದಿಸುವುದು. ನಗರಗಳನ್ನೇ ಹಳ್ಳಿಗಳತ್ತ ಕರೆಸಿಕೊಳ್ಳುವುದು. ಗುಂಡಿ, ಗುದ್ದರದ ರಸ್ತೆ ಹಾದೂ ಅವಕಾಶಗಳು ಅರಸಿ ಬರುವಂತೆ ಮಾಡುವುದು. ಇದು ಸಾಧ್ಯ. 'ಮಾಯಾರೂಪಿ ಸುಳ್ಳಿಗಿಂತ ಬೆಡಗಿನ ಸತ್ಯವೇ ಸಶಕ್ತ ಹಾಗೂ ಆಕರ್ಷಕ' ಎನ್ನುವು ಅರಿವು ವಿಶ್ವಾಸ ನಮ್ಮದಾದಾಗ .

ಈ ಎಲ್ಲ ಆಶಯದೊಂದಿಗೆ ಹೊಮ್ಮಿದ `ನೆಲದಮಾತು'ಗೆ ನನ್ನ ಹಾರ್ದಿಕ ಅಭಿನಂದನೆ. ಗ್ರಾಮೀಣ ಅಂತಃಸತ್ವ ಹೆಚ್ಚಿಸುವಲ್ಲಿ ನೆಲದಮಾತು ಶ್ರಮಿಸಲಿ. ದೇಸಿ ಫಲವಂತಿಕೆಗೆ ಕಂಕಣ ಕಟ್ಟಲಿ.

No comments:

Post a Comment