Thursday, September 24, 2009

ಎಲ್ಲೆಲ್ಲೂ ಡಾ.ಫೌಸ್ಟ್‌ಗಳೇ....

1.
ಅವರು ಎದ್ದು ಹೋದರೂ ಆ ಕಾಫಿ ಟೇಬಲ್ಲಿನ ಮೇಲೆ ನೆನಪುಗಳು ಹಾಗೇ ಕುಳಿತಿದ್ದವು. ಕ್ಷಣ ಹೊತ್ತು ಹಿಂದೆ ಅದೇ ಟೇಬಲ್ಲಿನಲ್ಲಿ ಬಿಸಿ ಬಿಸಿಯಾಗಿ ಹಬೆಯಾಡಿದ್ದ `ಕೆಫೆ ಲಟೆ'ಯ ಅರೋಮಾ ಸಹ ಆರಿರಲಿಲ್ಲ....
ಒಂದೆರಡು ತಿಂಗಳ ಹಿಂದಿನ ಮಾತು. ಖಾಲಿ ಹೊಡೆಯುತ್ತಿದ್ದ ಆ ಮಧ್ಯಾಹ್ನದ ಆಗಸದಿ ಒಂದು ಸಣ್ಣ ಗೀಚೂ ಇರಲಿಲ್ಲ. ಒಂದಿಷ್ಟು ನೀಲಿ, ಒಂದಷ್ಟು ಬಿಳುಪು ಬಿಟ್ಟರೆ ಆಗಸದ ಬಳಿ ಇದ್ದದ್ದು ಬರೀ ಆಕಳಿಕೆ. ಅದು ವೀಕ್‌ ಡೇ, ಮಧ್ಯಾಹ್ನ ಬೇರೆ. ಹಾಗಾಗಿ ಗಿಜಿಗಿಜಿಯಿಂದ ದೂರಿತ್ತು ಆ ಕಾಫೀ ಡೇ. ಒಂದು ಉದ್ದನೆಯ ಮಧ್ಯಾಹ್ನ ಕಳೆಯಲು ಪ್ರಶಸ್ತ ಸ್ಥಳ ಎನ್ನುವಂತೆ.
ಒಳಗೆ ಎಸಿಯಲ್ಲಿ ಕೂರಲು ಮನಸಾಗದೆ ಆತ ಅಂಗಣದಲ್ಲಿನ ಟೇಬಲ್‌ಗಳತ್ತ ಹೆಜ್ಜೆ ಹಾಕಿದ. ಎಂಟು ಹತ್ತು ಟೇಬಲ್‌ಗಳಿದ್ದ ಜಾಗ. `ನಾನೇ ನಾನು, ತಲೆ ಎತ್ತಿದ್ದರೆ ಬಾನೇ ಬಾನು' ಎನ್ನುವ ಸ್ವಗತ. ಖಾಲಿ ತನವನ್ನಾದರೂ ಪರಿಪೂರ್ಣವಾಗಿ ಮನದೊಳಗೆ ಸುರಿದುಕೊಳ್ಳೋಣ ಎಂದು ಹಿತವೆನಿಸಿದ ಟೇಬಲ್‌ ಬಳಿ ಕುಳಿತ.
ಅದೆಷ್ಟೇ ಸುದೀರ್ಘ ಮಧ್ಯಾಹ್ನವಾದರೂ ಸಂಜೆಯ ಹೊತ್ತಿಗೆ ಸಾಯುವುದೇ. ಹಾಗಾಗಿ ಅದಕ್ಕೂ ಮುನ್ನ ನಿಮಿಷ ನಿಮಿಷವೂ ಅದರ ಖಾಲಿತನವ ಕೈದು ಮಾಡಬೇಕು ಎನ್ನುವ ಹಂಬಲ. ಮೆನು ಹಿಡಿದು ಬಂದ ಹುಡುಗನಿಗೆ ಆರ್ಡರ್‌ ನೀಡಿ ಅರ್ಧ ಗಂಟೆ ಬಿಟ್ಟು ತರುವಂತೆ ಕೋರಿಕೆ ಸಲ್ಲಿಕೆ. ಮೊಬೈಲ್‌ ಅಂತೂ ತಾನಾಗೇ ಸುಮ್ಮನಿತ್ತು.
ಟ್ರಾಫಿಕ್‌ ಸದ್ದಿನ ಮೇಲೆ ಒಂದಷ್ಟು ಹೊತ್ತು ತುಸು ಗಮನವಿಟ್ಟ, ಹೆಚ್ಚಲ್ಲ ತುಸುವೇ. ಹೆಚ್ಚು ಗಮನವಿಟ್ಟರೆ ಅಲ್ಲಿಂದ ಎದ್ದು ಹೋಗದೆ ವಿಧಿ ಇಲ್ಲ. ಕ್ಷಣ ಕಾಲ ಟ್ರಾಫಿಕ್‌ನ `ಶಬ್ದಸಿರಿ', ಆಟೋಗಳ ಡರ್ರ್ರ್‌ ಬುರ್ರ್ರ್‌ `ಲಾಲಿತ್ಯ' ಕೇಳಿ ಕಿವಿಗಳೂ ಸುಮ್ಮನಾದವು. ಆ ಖಾಲಿತನದಲ್ಲಿ ಒಂದಿಪ್ಪತ್ತು ನಿಮಿಷ ಕಳೆದಿರಬಹುದು.
ಆತನಿದ್ದ ಟೇಬಲ್‌ನಿಂದ ಎರಡು ಟೇಬಲ್‌ ಆಚೆಗಿನ ಕುರ್ಚಿಗಳಿಗೆ ಮೂವರು ಬಂದು ಕುಳಿತರು. ಒಂದಷ್ಟು ಹೊತ್ತು ಅದೂ ಇದೂ ಮಾತು ಸಾಗಿತ್ತು. ಅಲ್ಲಿಗೆ ಇವನ ಖಾಲಿತನಕ್ಕೂ ಭಂಗ ಬಂತು. ಹಾಗೇ ಅಡ್ಡಾದಿಡ್ಡ ಸಾಗಿದ್ದ ಅವರ ಮಾತಿಗೆ ಲಹರಿ ಸಿಕ್ಕಿತೇನೋ, ಇದಕ್ಕಿದ್ದಂತೆ ಓಘ, ದನಿ ಎರಡೂ ಜೋರಾಯಿತು. ಪಕ್ಕದಲ್ಲೇ ಕುಳಿತು ಮಾತಾಡುತ್ತಿದ್ದಾರೇನೋ ಎನ್ನುವಷ್ಟು ಸ್ಪಷ್ಟ. ಸುಮಾರು 30 ರಿಂದ 35 ವಯೋಮಾನದವರು.
ಬೇಸರದ ದನಿಯೊಂದು ಹೊಮ್ಮಿತು, `ಇಟ್ಸ್‌ ಎ ಟ್ರ್ಯಾಷ್‌, ಟು ಲಿವ್‌ ಈಸ್‌ ಟು ಲೂಸ್‌, ಟು ಲೀವ್‌ ಇಸ್‌ ಟು ಪ್ಲೆಡ್ಜ್‌ ಯುವರ್‌ ಸೆಲ್ಫ್‌' . ದನಿಯಲ್ಲಿ ಇದ್ದ ಖಚಿತತೆ ಸಹಜವಾಗಿಯೇ ಕಿವಿಗಳಿಗೆ ಕುತೂಹಲಕಾರಿ ಎನಿಸಿತು.
`ವೆನ್‌ ಐ ಜಾಯಿನ್ಡ್‌ ದ ಕಂಪೆನಿ ಐ ವಾಸ್‌ ವೆರಿ ಪ್ರೌಡ್‌ ಟು ಸೇ ದ ಕಂಪೆನೀಸ್‌ ನೇಮ್‌ ಬಿಸೈಡ್‌ ಮೈ ನೇಮ್‌'. ಎಲ್ಲಾದ್ರೂ ನನ್ನನ್ನು ಇಂಟ್ರಡ್ಯೂಸ್‌ ಮಾಡ್ಕೊಳ್ಳೋವಾಗ ನನ್ನ ಹೆಸರು ಹೇಳಿ, ನನ್ನ ಕೆಲಸ ಹಾಗೂ ಕಂಪೆನಿ ಹೆಸರನ್ನು ಖುಷಿಯಿಂದ ಜೊತೆ ಜೊತೆಗೇ ಹೇಳಿಕೊಳ್ಳುತ್ತಿದ್ದೆ'. ಆದರೆ ಈಗ ಲೈಫ್‌ ಇಷ್ಟೇ ಆಗೋಯ್ತಲ್ಲ ಅನ್ಸುತ್ತೆ. `ಬ್ಲಡಿ, ಆಮ್‌ ಜಸ್ಟ್‌ ರೆಡ್ಯೂಸ್ಡ್‌ ಟು ಎ ಪ್ರೊಫೆಷನ್‌'. ಆಮ್‌ ನೋ ಮ್ಯಾನ್‌, ಜಸ್ಟ್‌ ಎ ಪ್ರೊಫೆಷನ್‌, ಆಮ್‌ ನೋ ಇಂಡಿವಿಜುಅಲ್‌, ಎ ಪ್ರೊಫೆಷನಲ್‌ ಇನ್‌ ಎ ಸೋ ಅಂಡ್‌ ಸೋ ಕಂಪೆನಿ' ಎಂದ.
ಅಲ್ಲಿಗೆ ಮತ್ತೊಂದು ವಾಸ್ತವ ಅವರ ಮುಂದಿತ್ತು. ಮತ್ತೊಂದು ಹುಡುಕಾಟ ಅವರಲ್ಲಿನ್ನೂ ಉಳಿದಿದ್ದ, ಸ್ವಂತದ್ದೆಂದು ಹೇಳಿಕೊಳ್ಳಬಹುದಾದ ಅಷ್ಟೋ ಇಷ್ಟೋ, ಚೂರು ಪಾರು ಆತ್ಮವನ್ನು ಕೆಣಕುತ್ತಿತ್ತು.
ಇಪ್ಪತ್ತರ ಆದಿಯಲ್ಲಿ ಕೆಲಸದ ಹುಡುಕಾಟ, ಮೂವತ್ತರ ಆದಿಯಲ್ಲಿ ಕೆಲಸದಲ್ಲಿ ಕಳೆದುಹೋದ ತನ್ನದೇ ವ್ಯಕ್ತಿತ್ವ, ಪ್ರತಿಭೆ, ಅಂತಃಸತ್ವದ ಹುಡುಕಾಟ. ದುಡಿಮೆಗಾಗಿ ವ್ಯಕ್ತಿಗಳು ವೃತ್ತಿಗಳಾಗುತ್ತಾರೆ. ಕಂಪೆನಿಗಳ ಭಾಗವಾಗುತ್ತಾರೆ. `ಬ್ರ್ಯಾಂಡ್‌ ನೇಮ್‌' ಭ್ರಮೆಯ ಗುಲಾಮರಾಗುತ್ತಾರೆ. ಕೆಲವರದು ತುಂಬು ಜೇಬಿನ ಸಂಬಳ ಮತ್ತೆ ಕೆಲವರದು ಎಂದೂ ತುಂಬದ ತೂತು ಜೇಬಿನ ಸಂಬಳ.
ಒಬ್ಬ ವ್ಯಕ್ತಿ ತನ್ನ ಜೀವನದ ಅದೆಷ್ಟೋ ವರ್ಷಗಳನ್ನೇ ಕಂಪೆನಿಯೊಂದರ ಪಗಾರಕ್ಕೆ ಮಾರಿಕೊಂಡು ಬಿಡುವುದು `ಆಧುನಿಕ ಸೋಜಿಗ'. ತಿಂಗಳ ಕೊನೆಯ ಸಂಬಳಕ್ಕಾಗಿ ವೈಯಕ್ತಿಕವಾಗಿ ತನಗೆ ಯಾವತ್ತೂ ಸಂಬಂಧಪಡದ ಕೆಲಸ ಮಾಡಿಕೊಂಡಿರುವುದು ಮತ್ತೂ ಸೋಜಿಗ.
2.
ಅಲ್ಲಿ ಕಂಪನೆಯಲ್ಲಿ ಕೆಳಗೆ, ಕೊನೆ ಸಾಲಿನಲ್ಲಿ ಕುಳಿತಿರುವವನು ಕೇಳುತ್ತಾನೆ, `ಕಂಪೆನಿ ಅಂದ್ರೆ ಯಾರು?'... ಅವನ ಮೇಲಿನವ ತನ್ನ ಮೇಲೆ ಬೆರಳು ಮಾಡಿ ಹೇಳುತ್ತಾನೆ `ಕಂಪೆನಿ, ಕಾರ್ಪೊರೆಟ್‌, ಸರ್ಕಾರ ಎಂದರೆ ಯಾವತ್ತೂ ಮೇಲೆ, ಮೇಲೆ.... ಮೇಲೆ ಅಲ್ಲಿರುತ್ತದೆ'.
ಕಡೆಗೊಮ್ಮೆ ರಿಟೈರ್‌ ಆಗುವ ಮುನ್ನಾದಿನ ಕೆಳಗಿದ್ದವನು ಹೇಗೋ ಒಂದು ಅವಕಾಶ ಸಂಪಾದಿಸಿ ತುದಿಯಲ್ಲಿದ್ದವನನ್ನು ಕೇಳುತ್ತಾನೆ,
`ಸಾರ್‌, ಕಂಪೆನಿ ಅಂದರೆ ಯಾರು, ನೀವೇನಾ?'
`ನಾವೆಲ್ಲಾ.... ನಾವೆಲ್ಲಾ ಕಂಪೆನಿ' ಉತ್ತರಿಸುತ್ತಾನೆ ಅವನು.
`ನಾನೂ ಸಹ'
`ಹೌದು, ನೀನು, ನಾನು ಎಲ್ಲರೂ ಕಂಪೆನಿಯೇ....'
`ನನಗೆ ಗೊತ್ತೇ ಇರಲಿಲ್ಲ ಸರ್‌.. ನಾನೂ ಕಂಪೆನಿ ಅಂಥ. ಐ ಥಾಟ್‌ ಅಮ್‌ ಎನ್‌ ಎಂಪ್ಲಾಯೀ, ಐ ಆಮ್‌ ಅನ್‌ ಇಂಡಿವಿಜುಅಲ್‌'
`ಡೋಂಟ್‌ ಕಾಂಟ್ರಡಿಕ್ಟ್‌ ಯುವರ್‌ ಸೆಲ್ಫ್‌... ಯು ಕಾಂಟ್‌ ಬಿ ಅನ್‌ ಎಂಪ್ಲಾಯೀ ಅಂಡ್‌ ಅನ್‌ ಇಂಡಿವಿಜುಅಲ್‌ ಅಟ್‌ ದ ಸೇಮ್‌ ಟೈಮ್‌'
ಅವನ ಮಾತಿನ ಅರ್ಥ ಕೆಳಗಿನವಿಗೆ ಆಗಲಿಲ್ಲ, ಆದರೂ ಅವನ ಬಳಿ ಇನ್ನೊಂದಷ್ಟು ಪ್ರಶ್ನೆಗಳಿದ್ದವು ಕೇಳಿಯೇ ಬಿಟ್ಟ,
`ಸಾರ್‌, ವಾಟ್‌ ಈಸ್‌ ದ ಕೋರ್‌ ಆಫ್‌ ಕಂಪೆನಿ, ವಾಟ್‌ ಈಸ್‌ ಇಟ್ಸ್‌ ಪಾಲಿಸಿ'
`ಬೈ ಸಂ ಮ್ಯಾನ್‌ ಅವರ್ಸ್‌ ( ನಾಟ್‌ ಮೆನ್‌‌), ಗುಡ್‌ ಪ್ರೊಡಕ್ಟಿವ್‌ ಮ್ಯಾನ್‌ ಅವರ್ಸ್‌. ಟರ್ನ್‌ ಇಟ್‌ ಟು ಗೂಡ್ಸ್‌, ಪ್ರಾಡಕ್ಟ್ಸ್‌ ಆರ್‌ ಪ್ರಾಜೆಕ್ಟ್ಸ್‌. ದೆನ್‌ ಸೆಲ್‌ ದೆಮ್‌ ಇನ್‌ ದ ನೇಮ್‌ ಆಫ್‌ ಸರ್ವೀಸಸ್‌ ಆರ್‌ ಎಸೆನ್ಷಿಯಾಲಿಟೀಸ್‌. ಗ್ಯಾದರ್‌ ಮನಿ ಅಂಡ್‌ ಪವರ್‌'
ಇವನಿಗೆ ಏನೂ ಅರ್ಥ ಆಗಲಿಲ್ಲ. ಆದರೆ ಇಷ್ಟು ವರ್ಷ ಕೆಳಲೇ ಬೇಕೆಂದು ಚೀಟಿಯಲ್ಲಿ ಬರೆದುಕೊಂಡಿದ್ದ ಪ್ರಶ್ನೆಗಳಲ್ಲೇ ಮತ್ತೊಂದನ್ನು ಹುಡುಕಿ ಕೇಳಿದ.
`ಸರ್‌, ವಾಟ್‌ ಡು ಕಂಪೆನೀಸ್‌ ಹೇಟ್‌`
`ಇಂಡಿವಿಜುಅಲ್ಸ್‌, ಇಂಡಿವಿಜುಆಲಿಟಿ'
ಬಿಲ್‌ಕುಲ್‌ ಅರ್ಥ ಆಗಲಿಲ್ಲ. ಕಡೆಗೆ ಹೇಳಿದ,
`ಥ್ಯಾಂಕ್ಯು ಸರ್‌, ಥ್ಯಾಂಕ್ಯು ವೆರಿ ಮಚ್‌. ಸಾರ್‌, ಒಂದು ರಿಕ್ವೆಸ್ಟ್‌. ನನ್‌ ಮಗ ಈ ಸಾರಿ ಫೈನಲಿಯರ್‌ ಡಿಗ್ರೀಲಿ ಇದಾನೆ. ಇಂಟೆಲಿಜೆಂಟ್‌. ಅವನಿಗೂ ಇದೇ ಕಂಪೆನೀಲೇ ಒಂದು ಕೆಲಸ ಕೊಟ್ಟರೆ ಐ ವಿಲ್‌ ಬಿ ಗ್ರೇಟ್‌ಫುಲ್‌ ಟು ಯು ಸರ್‌'.

..................
ಡಾ.ಫೌಸ್ಟಸ್‌ ಕಥೆ ಬಹುತೇಕರಿಗೆ ತಿಳಿದದ್ದೇ. ಮಹಾನ್‌ ವಿದ್ವಾಂಸ, ಮಹತ್ವಾಕಾಂಕ್ಷಿ ಫೌಸ್ಟ್‌ ಅಸೀಮ ಶಕ್ತಿಯ ಆಸೆಗೆ ಬಿದ್ದು ತನ್ನ ಆತ್ಮವನ್ನೇ ಸೈತಾನನಿಗೆ ಮಾರಿಕೊಳ್ಳುತ್ತಾನೆ. ಬದಲಿಗೆ ಸೈತಾನನಿಂದ ಆತನ ಎಲ್ಲ ಶಕ್ತಿಗಳನ್ನೂ ಕೆಲ ವರ್ಷಗಳ ಕಾಲ ಕರಾರಿನ ಮೇಲೆ ಪಡೆಯುತ್ತಾನೆ. ಕಡೆಗೆ ಆತ್ಮ ನಾಶ ಹೊಂದಿ ಸೈತಾನನ ಸ್ವತ್ತಾಗುತ್ತಾನೆ. ಫೌಸ್ಟ್‌ನ ಆತ್ಮನಾಶ ಆಧುನಿಕ ಮನುಷ್ಯನ ವ್ಯಕ್ತಿತ್ವ ವಿನಾಶ ಎರಡೂ ಆಜೂಬಾಜಿನವೇ....

Tuesday, September 15, 2009

ಎರಡೂ ಮುಕ್ಕಾಲು ಪ್ರತಿಮೆ

ಬದುಕು ದಕ್ಕದ ಅಕ್ಷರ ಮೋಹಿ ಕವಿ(!)ಗೆ
ಅಕಸ್ಮಾತ್‌
ಮಲ್ಲೇಶ್ವರದ ಹೂ ಮಾರುಕಟ್ಟೆ ಬಳಿ ಎರಡೂ ಮುಕ್ಕಾಲು ಪ್ರತಿಮೆ ದಕ್ಕಿತು;
ಎರಡು ಪೂರ್ಣ ಹಾಗು ಒಂದು ಮುಕ್ಕು.

ಪ್ರತಿಮೆ,
ಕವಿ ಸಮಯದ - ಕಲಾವಿದ ಮನದ ಮೂಸೆಯೊಳಗಣ ದೀಪ್ತಿ;
ಆಕಾರಗಳಿಲ್ಲದ್ದು,
ಭಾವ ಅಕ್ಷರಗಳ ಅಮೂರ್ತ ಬೆಡಗು.

ಏನು ಮಾಡುವುದು ಇವನ್ನು
ಒಂದಷ್ಟು ಹೊತ್ತು ಹೊರಳಿಸಿ, ತಿರುಗಿಸಿ ನೋಡಿದ
ಕಡೆಗೆ
ಕವಿಯೊಬ್ಬನ `ಆತ್ಮಘಾತುಕ' ನಿರ್ಧಾರ ಕೈಗೊಂಡ
`ಈ ಎರಡೂ ಮುಕ್ಕಾಲು ಪ್ರತಿಮೆಯನು ಕೊಟ್ಟು ಬಿಡುವೆ '...

ಯಾರಿಗೆ ಕೊಡುವುದು,
ವ್ಯಾಸನಿಗೋ, ಹೋಮರನಿಗೋ?
ಶೇಕ್ಸಪಿಯರ್‌, ಕಾಳಿದಾಸರಿಗೆ..!
ಬೇಂದ್ರೆ, ಯೇಟ್ಸ್‌, ಇಲಿಯಟ್‌, ನೀಲುಗೆ...

ಇಲ್ಲಾ,
ಪ್ರತಿಮಾ ಬೆಡಗಲಿ ಅನುಭಾವ ಸಾಂದ್ರಗೊಳಿಸಿದ ಅಲ್ಲಮನಿಗೆ,
ಅಲ್ಲಾ - ಮಾ ಗಹಗಹಿಸಿದರೆ?....
ಧೈರ್ಯ ಸಾಲದ ಮೇಲೆ
ಗಿರಿ ಏರುವುದೇ ಒಳಿತು.

ಹೌದು ,
ಅಲ್ಲಿ ದತ್ತನ ಮುಂದೆ ಮಂಡಿಯೂರಿ
ಅವನ ಉಡಿಗೆ ಒಪ್ಪಿಸಿಬಿಡುವೆ....

ಅದೇಕೋ,
ಹಾಗೆಂದುಕೊಂಡವಗೆ ಬದುಕ ಜಂಜಡ
ನೆನಪ ಮಾಸಿತು
ನಿರ್ಧಾರ ಕಂದರವಾಯಿತು

ದಿನ ಸರಿಯಿತು,
ನೇಸರ ಅದೆಷ್ಟೋ ಬಾರಿ
ಶಿವ ಸಾಮ್ರಾಜ್ಯದಿ ಮುಳುಗಿ ಮೇಲೆದ್ದ;

ಮುಂದೆಂದೋ
ನೆನಪಿನ ಕಪಾಟಲಿ ಅನೂಹ್ಯ ಸದ್ದು
ಮತ್ತೆ, ಮತ್ತೆ
ಎರಡೂ ಮುಕ್ಕಾಲು ಪ್ರತಿಮೆ;
ಹೊರಟೇ ಬಿಟ್ಟ ನೇರ ಗಿರಿಗೆ...

ಅದು ಸೂರ್ಯಾಸ್ತ
ಅವ್ಯಕ್ತ ಕಂಗಳ ಕಲಾವಿದನೊಬ್ಬ
ಗಿರಿ ಮೇಲೆ ಕ್ಯಾನ್ವಾಸ್‌ ಹರಡಿ
ಖಾಲಿ ಕುಳಿತಿದ್ದ
ಎಲ್ಲ ದಕ್ಕಿದ ನಂತರವೂ `ವ್ಯಾಳಾ' ಕಾಯೋ
ಸಂಗೀತಗಾರನಂತೆ...

ದತ್ತನ ಉಡಿಗೆ ಹಾಕೋ ಮನಸಲಿ
ಮಿಂಚು
ದತ್ತನೇ ದೀಪ್ತಿ ಎಂದು ನೇರ ಖಾಲಿ ಕ್ಯಾನ್ವಾಸ್‌ನತ್ತ
ಸರಿಯಿತು ಹೆಜ್ಜೆ

`ಹಿಡಿ ಅಂಗೈ,
ತಗೋ ಈ ಎರಡೂ ಮುಕ್ಕಾಲು ಪ್ರತಿಮೆ
ನನ್ನ ಭವದ ಅಷ್ಟೂ ದುಡಿಮೆ'
ಕ್ಷಣ ಕಾಲ ಮೌನ.....
ಅಶ್ರುವಿನಲಿ ಮಿಂದು ಅವನೆಂದ
`ಮೂರೂ ಮುಕ್ಕಾಲು'

ಕಿವಿ ಮೋಸ ಹೋದವೇ?
ಮತ್ತೆ ಇವನೆಂದ `ಎರಡೂ ಮುಕ್ಕಾಲು`
ನಿಮ್ಮ ಬಳಿ ಎರಡೂ ಮುಕ್ಕಾಲು
ಆದರೆ
ನನ್ನೆದುರಿಗೆ `ಮೂರು ಮುಕ್ಕಾಲು'....

ಎರಡು ಜೋಡಿ ಕಂಗಳಲ್ಲೂ ಧನ್ಯಾಶ್ರು....

ಅಲ್ಲೇ ದೂರದಲಿ
ಗುಡುಗುಡಿಯಾಗ ತೇಲಿದ್ದ ಫಕೀರ
ಬೆಳಕಿನ ನಗೆ ನಕ್ಕ

Sunday, September 13, 2009

ನೆನಪಿನ ಹಾದಿಯಲಿ ಭಾಳಾನೇ ಟ್ರಾಫಿಕ್ಕು....

ಹಾಗೇ ಸಾಗುವ ಬೇಜಾರಿನ ಟಾರು ರಸ್ತೆಯ ಮೇಲೆ
ಎಂತೆಂತದೋ ಚಿತ್ತಾರಗಳು....
ಅವೇನು ನೆರಳೆ?
ನೆತ್ತಿ ಹೊರಳಿಸಿದರೆ ಕೊಡೆಯಂತಾ ಮರಗಳ ಸಾಲು ಸಾಲು
ಹಾಗಾಗಿ `ರಸ್ತೆಗೆ ಬಿದ್ದರೂ' ಮರದ ನೆರಳೆಂಬ ಘನತೆ
ಆದರೆ ಅಲ್ಲಿ ಮತ್ತೂ ಹಲವಿವೆ,
ಚಿತ್ತಾರದಂತವು...
ಏನೆನ್ನಬಹುದು ಅವನ್ನು,
ಎಂತದೋ ನರಳಿಕೆ, ನಲಿವು, ನೋವು, ಖುಷಿ
ಹೀಗೆ ಹತ್ತು ಹಲವು....
ಅವೆಲ್ಲಾ, ಅಲ್ಲೇ ಹಾಗೇ
ಅಜ್ಞಾತ ಹಾದಿಯಲಿ ತಡಬಡಾಯಿಸುತ್ತಾ
ನೆನಪುಗಳ ಟ್ರಾಫಿಕ್ಕಿನಲಿ ಸಾಲಾಗುತ್ತಾ
ಸಿಗ್ನಲ್‌ನಲ್ಲಿ ಆಕಳಿಸುತ್ತವೆ...
ಎಲ್ಲಿಂದಲೋ ಗುಳೆ ಬಂದವರ
ಕಣ್ಣಲ್ಲಿ ಹೊಲ ಬೇಡುತ್ತವೆ,
ರಸ್ತೆ ಬದಿಯಲಿ ಟೀ ಅಂಗಡಿ ಇಟ್ಟವನಲ್ಲಿ
ಎಂತದೋ ವಿಳಾಸ ಕೇಳುತ್ತವೆ;
ಕಡೆಗೂ ಏನೂ ದಕ್ಕದೆ
ಬಿಡು ಬೀಸು ರಸ್ತೆಯ ಸಲೀಸು ಎಂದು
ಅಲ್ಲಿಯೇ ಉಳಿದು ಬಿಡುತ್ತವೆ
ಅದಕ್ಕೇ ಇತ್ತೀಚೆಗೆ ನೆನಪಿನ ಹಾದಿಯಲಿ ಭಾಳಾನೇ ಟ್ರಾಫಿಕ್ಕು....

Friday, September 11, 2009

ಹನಿ ಮಳೆ ಮತ್ತು ದಡ್ಡ....

ಅಷ್ಟು ಹೊತ್ತು ಸುರಿದ ಮಾತುಗಳು ಆಗಷ್ಟೇ ಸ್ತಬ್ಧ. ಸಣ್ಣದೊಂದು ಮೌನ... ಆ ಮೌನ ಮಾಗುವ ಮುನ್ನವೇ ನನ್ನ ಸರದಿ ಎಂದು ಆಗಸ ಶುರುವಿಟ್ಟಿತು.
ಹನಿ ಹನಿ ಮಳೆ... ಜೋರಿಲ್ಲ, ಮೈ ಮೇಲೆ ಬಿದ್ದರೂ ನೆಲಕ್ಕೆ ಜಾರಲೇಬೇಕು ಎನ್ನುವ ತವಕವಿಲ್ಲ. ಮಾನವ ದೇಹದ ಮೇಲೂ ಇಂಗಲು ಸಾಧ್ಯವೇ ಎಂದು ಕ್ಷಣ ಹೊತ್ತು ಪ್ರಯತ್ನಿಸಿ, ನವೆದು ಕಡೆಗೆ ಏನನ್ನೂ ದಕ್ಕಿಸಿಕೊಳ್ಳದ `ದರಿದ್ರ' ಈ ಮಾನವ ಚರ್ಮ ಎಂದು ಭೂಮಿಯ ಮೇಲೊದಿಕೆಗೆ ಜಾರುತ್ತಿತ್ತು. ಬಿದ್ದಲ್ಲೇ ಮಣ್ಣ ಕಣಕಣವ ಮುದಗೊಳಿಸಿ ಮೆದುವಾಗಿ ಹಬ್ಬುತ್ತಿತ್ತು.
ಅದೇಕೋ ಆ ಹನಿ ಮಳೆಯಲಿ ನೆನೆದು ಮನೆಗೆ ಮರಳಿದರೂ ಮನದ ಮಳೆ ನಿಲ್ಲಲಿಲ್ಲ. ಕೆಲ ದಿನ ಕಳೆದ ಮೇಲೆ ಮತ್ತೊಂದು ಮಳೆಯಲ್ಲಿ ಮತ್ತದೇ ತವಕ, ತಲ್ಲಣ. ಈ ಮಧ್ಯೆ ಬದುಕ ಪುಟಗಳಲಿ ಮತ್ತಷ್ಟು ಸಾಲು.
ಅಪ್ಪಿ ತಪ್ಪಿ ಒಂದು ಹನಿ ಮಳೆಯ ಲೆಕ್ಕ ಹಿಡಿಯಲು ಹೊರಟರೂ ದಿಕ್ಕು ತಪ್ಪುತ್ತೇವೆ! ಹೇಗೆ ಅಂತೀರಾ... ಹನಿಯಾಗಿ ಅರಳಿ ನೆಲದಲಿ ಇಳಿವ ಮಳೆಯ ಸಾರ್ಥಕತೆ ಎಲ್ಲಿದೆ ಎಂದು ಪ್ರಶ್ನೆ ಹೊತ್ತು ಹೊರಟರೆ ಅಲ್ಲಿಗೆ ಮತ್ತೊಂದು ಸೋಲು ಮೈ ಮೇಲೆ ಮುಗಿ ಬೀಳುತ್ತದೆ. ಆ ಪ್ರಶ್ನೆಗೆ ಸಾವಿರ ಸಾವಿರ ಉತ್ತರ ಹೇಳಬಹುದು.
`ಗರಿಕೆಯ ನೇವರಿಸಿ ಹಸಿರ ತಾಜಾಗೊಳಿಸುವಲ್ಲಿ ಇದೆ ಹನಿಯ ಸಾರ್ಥಕತೆ' ಎಂದರೆ ಇಲ್ಲಾ ಎನ್ನಲಾದೀತಾ? ಬಿತ್ತ ಬೀಜಕ್ಕೆ ಒಂದಷ್ಟು ತಂಪು ನೀಡಿ ಮಣ್ಣಿನ ಸತ್ವ ಬಸಿದು ಮೊಳಕೆ ಒಡೆಸುವಲ್ಲಿ ಅದರ ಸಾರ್ಥಕ್ಯ ಎಂದರೆ ಅದ ತಳ್ಳಿಹಾಕಬಹುದಾ... ಗಟಾರದೊಳಗೆ ಬಿದ್ದು ಅಲ್ಲಿನ ವಿಷದ ಸಾಂದ್ರತೆ ತಗ್ಗಿಸುವಲ್ಲಿ, ವಿಷವ ತೊಳೆವಲ್ಲಿ ಎಂದರೆ ಒಪ್ಪದೆ ಇರಲು ಸಾಧ್ಯವಾ....
ಅದೇನೇ ಇರಲಿ, ಇಷ್ಟಾಗೂ ಹನಿ ಮಳೆಯ ಸಾರ್ಥಕತೆ ಇರುವುದೇ elusivenessನಲ್ಲಿ ಎನ್ನುವ ಉತ್ತರ ಕಂಡುಕೊಂಡರೆ ಬಹುಶಃ ಅದೇ ಹೆಚ್ಚು ನಿಖರ. ನೆಲಕ್ಕೆ ಬಿದ್ದರೂ ಭೂಮಿಗೆ ಸಂಪೂರ್ಣ ದಕ್ಕದು `ಹನಿ'. ಒಂದಷ್ಟು ತಂಪು ತುಂಬಿ, ಮಣ್ಣ ಕಣದ ಬಿಗುವ ಸಡಿಲಿಸಿ ಮತ್ತಾವುದೋ ಬೀಜದಲ್ಲಿ ಸ್ವಲ್ಪ ಭಾಗ ಚೈತನ್ಯವಾಗಿ ಉಳಿಯಬಹುದು ಅಷ್ಟೆ. ಆದರೆ ವಾಯುವಿನ ನವಿರು ನೇವರಿಕೆಗೆ ಆ ತಂಪು ರೂಪ ಬದಲಿಸಿರುತ್ತದೆ, ಶೀತಲ ಹವೆಯಾಗುತ್ತದೆ. ಬೆಳಗಿನ ಭಾನು ಬಿಟ್ಟ ಕಿರಣದ ಬಾಣಕ್ಕೆ ಆವಿಯಾಗಿ ಆಗಸಕೇರುತ್ತದೆ. ಹೀಗೆ ಭುವಿಯಲ್ಲಿ, ತಿನ್ನುವ ಬಾಯಲ್ಲಿ, ಬಾನಲ್ಲಿ, ಬೀಸುವ ಗಾಳಿಯಲಿ ಎಲ್ಲೆಲ್ಲಿ ಇಡುವುದು ಹನಿ ಮಳೆಯ ಲೆಕ್ಕ ಅದರ ಜಾಡು....
ಹನಿ ಮಳೆಯಂತೆಯೇ `ಅವರ' ಆ ಆಪ್ತ ಮಾತುಗಳು... ನಿರ್ಮಲ ಪೀತಿ ಜಿನುಗಿನಲ್ಲಿ, ಮೋಹವಿರದ ಭರಪೂರ ಕಾಳಜಿಯಲ್ಲಿ ನಾನೆಂಬ ನನ್ನನ್ನು ಕರಗಿಸುವ ಮಾತುಗಳು. ಮತ್ತೆ ಮತ್ತೆ ಅದೇ ತೊಡರಿನೊಂದಿಗೆ, ಭಾವನೆಗಳ ತಲ್ಲಣದಲಿ ಬೆಂದು ಕಡೆಗೆ ಸೋತು `ಅವರ' ಮುಂದೆ ನಿಲ್ಲುತ್ತೇನೆ. ಆಗ ತಂಪು ಸುರಿಯುತ್ತಾ ತಣ್ಣಗೆ ಹೇಳುತ್ತಾರೆ. ಪ್ರವಾದಿ ಗುಣವೇ ಇರದ ಸಂತನಂತೆ ನಿರ್ಲಿಪ್ತವಾಗಿ ಮಾತಾಗುತ್ತಾರೆ. ಆ ಮಾತುಗಳಲ್ಲಿ ಹನಿ ಮಳೆಯ ಆಳದ ಶೀತಲತೆ. ಅವುಗಳ ತೂಕಕ್ಕೆ ಮನದ ಆಗಸದಿ ಕಟ್ಟಿ ಮೈಯಲ್ಲಿ ದಟ್ಟೈಸಿದ್ದ ಉತ್ಕಟ ಭಾವನೆಗಳ ಮೋಡ ಕರಗುತ್ತದೆ. ಹನಿಯಾಗಿ ಸಾಂದ್ರಗೊಳ್ಳುತ್ತದೆ. ನೇರ ಎದೆಯ ಸುಡು ಸುಡು ನೆಲಕ್ಕೆ ಚಿಟಪಟ ಇಳಿಯುತ್ತದೆ.
`ನಾನಿರುವಲ್ಲಿ ಖುಷಿ, secure feeling ಇರಬೇಕು. ನಿರೀಕ್ಷೆಯ ಭಾರಗಳಲ್ಲ, ತಹತಹವಂತೂ ಅಲ್ಲವೇ ಅಲ್ಲ. just be with me... ಹಾಗಂದ್ರೆ ತುಂಬಾ ಸುಮ್ನೆ ಇರು ಅಂತಾ. ಯಾವಾಗಲೂ ಉಸಿರಾಡೋ ಹಾಗೆ. ಅದರಲ್ಲಿ ಯಾವುದೇ ವಿಶೇಷ ಅನ್ನಿಸದ ಹಾಗೆ. ಸುಮ್ನೆ, ಸುಮ್ನೆ ಇರಬೇಕು... ನಿರೀಕ್ಷೆ, ಬೇಜಾರು, ಹತಾಶೆ ಯಾವುದೂ ಅಲ್ಲಿ ಬೇಡ. ಉಸಿರಿನ ಹಾಗೆ. ಸಹಜವಾಗಿ ಜೊತೆ ಇರಿ...'
ಭಾವನೆಗಳಲಿ ಬೆಂದು, ಅಭಿವ್ಯಕ್ತಿಸಲಾಗದೆ ಸೋತು ನಾನು ಕುದಿವ ಕೆಂಡವಾದಾಗ ಅವರ ಈ ಮಾತುಗಳು ಕೈ ಹಿಡಿಯುತ್ತವೆ. ನಾನು ಪೂಜಿಸುವ, ಆರಾಧಿಸುವ ಹನಿ ಮಾತುಗಳು ಅವು. ಏನೆನ್ನಬಹುದು ಅವುಗಳನ್ನು `ಸಹಜ, ಸುಂದರ, ಸರಳ, ಅನನ್ಯ'...
ಆದರೂ ನನಗೆ ಗೊತ್ತು. `ನಾನು ಮತ್ತೆ ಸೂಲುತ್ತೇನೆ'. ಸೋಲುವ ಮುನ್ನ ಮಣ್ಣ ಕಣಕಣವಾಗಿ ಮಳೆ ಹನಿಯಂತೆ ಅವರ ಆ ಮಾತುಗಳ ದಕ್ಕಿಸಿಕೊಳ್ಳಲು ನೋಡುತ್ತೇನೆ, ದಕ್ಕಿಸಿಕೊಂಡರೂ ಬಹಳಷ್ಟು ಜಾರುತ್ತವೆ. ಆ ಮಾತುಗಳ ತಂಪಿನಲಿ ಭಾವನೆಗಳ ಮೊಳಕೆ ಕಟ್ಟಿ ಸತ್ವಯುತವಾಗಲು ಪ್ರಯತ್ನಿಸುತ್ತೇನೆ. ಅದರಲ್ಲಿ ಸಫಲನಾಗುತ್ತೇನೆ ಕೂಡಾ. ಆದರೂ ಮತ್ತೂ ಜಾರುತ್ತವೆ. ಭುವಿಯಾಗಿ, ಬಾನಾಗಿ, ಭಾನುವಿನ ಕಿರಣವಾಗಿ, ಬೀಸುವ ಗಾಳಿಯಾಗಿ ಎಲ್ಲವೂ ಆಗಿ ಒಮ್ಮೆಲೇ ಅವುಗಳ ಹಿಡಿಯಲು ನೋಡುತ್ತೇನೆ. ಮತ್ತೂ ಉಳಿದು ಬಿಡುತ್ತವೆ. ಒಂದು ವೇಳೆ ದಕ್ಕಿದರೂ ಚದುರಿ ಚದುರಿ ದೂರವೇ ನಿಲ್ಲುತ್ತವೆ.... ಜಗತ್ತಿನ ಅತ್ಯಂತ ಸರಳ ಮಾತು ಅವು. ಬರೆದರೆ ಒಂದು ಚಿಕ್ಕ ಪ್ಯಾರಾ ಕೂಡಾ ಆಗುವುದಿಲ್ಲ. ಆದರೂ ಅವುಗಳನ್ನು ನನಗೆ ದಕ್ಕಿಸಿಕೊಳ್ಳಲು ಆಗುವುದಿಲ್ಲ. ನನ್ನೊಳಗೆ ಅವು ಸಂಪೂರ್ಣವಾಗಿ internalize ಆಗುವುದೇ ಇಲ್ಲ.
ಹಾಗಾಗೇ, ಮತ್ತೆ ಮತ್ತೆ ಸೋಲುತ್ತಲೇ ಇದ್ದೇನೆ.. ಬಹುಶಃ ಮುಂದೂ ಸಹ. ಮತ್ತದೇ ತಪ್ಪುಗಳೊಂದಿಗೆ ಅವರ ಮುಂದೆ ನಿಲ್ಲಬಾರದು ಎಂದರೂ ಅಷ್ಟೇ ಎಳಸಾಗಿ, ಬಾಲಿಶವಾಗಿ ನಿಂತಿರುತ್ತೇನೆ. ಆಗ ಮತ್ತೊಮ್ಮೆ ಹನಿ ಮಳೆ. ಎಂದೂ ದಕ್ಕದ ಮಾತಿನ ಹನಿ ಹನಿ ಮಳೆ...
.
.
.
.
.

ಏನು ತಾನೆ ಹೇಳಲಿ ಅವರಿಗೆ? ಪದೇ ಪದೇ ಅದೇ ತಪ್ಪು ಮಾಡುವ ಈ ದಡ್ಡನ ಮೇಲೆ ಕ್ಷಮೆ ಇರಲಿ ಎಂದಷ್ಟೇ ಹೇಳಬಹುದು