Friday, September 11, 2009

ಹನಿ ಮಳೆ ಮತ್ತು ದಡ್ಡ....

ಅಷ್ಟು ಹೊತ್ತು ಸುರಿದ ಮಾತುಗಳು ಆಗಷ್ಟೇ ಸ್ತಬ್ಧ. ಸಣ್ಣದೊಂದು ಮೌನ... ಆ ಮೌನ ಮಾಗುವ ಮುನ್ನವೇ ನನ್ನ ಸರದಿ ಎಂದು ಆಗಸ ಶುರುವಿಟ್ಟಿತು.
ಹನಿ ಹನಿ ಮಳೆ... ಜೋರಿಲ್ಲ, ಮೈ ಮೇಲೆ ಬಿದ್ದರೂ ನೆಲಕ್ಕೆ ಜಾರಲೇಬೇಕು ಎನ್ನುವ ತವಕವಿಲ್ಲ. ಮಾನವ ದೇಹದ ಮೇಲೂ ಇಂಗಲು ಸಾಧ್ಯವೇ ಎಂದು ಕ್ಷಣ ಹೊತ್ತು ಪ್ರಯತ್ನಿಸಿ, ನವೆದು ಕಡೆಗೆ ಏನನ್ನೂ ದಕ್ಕಿಸಿಕೊಳ್ಳದ `ದರಿದ್ರ' ಈ ಮಾನವ ಚರ್ಮ ಎಂದು ಭೂಮಿಯ ಮೇಲೊದಿಕೆಗೆ ಜಾರುತ್ತಿತ್ತು. ಬಿದ್ದಲ್ಲೇ ಮಣ್ಣ ಕಣಕಣವ ಮುದಗೊಳಿಸಿ ಮೆದುವಾಗಿ ಹಬ್ಬುತ್ತಿತ್ತು.
ಅದೇಕೋ ಆ ಹನಿ ಮಳೆಯಲಿ ನೆನೆದು ಮನೆಗೆ ಮರಳಿದರೂ ಮನದ ಮಳೆ ನಿಲ್ಲಲಿಲ್ಲ. ಕೆಲ ದಿನ ಕಳೆದ ಮೇಲೆ ಮತ್ತೊಂದು ಮಳೆಯಲ್ಲಿ ಮತ್ತದೇ ತವಕ, ತಲ್ಲಣ. ಈ ಮಧ್ಯೆ ಬದುಕ ಪುಟಗಳಲಿ ಮತ್ತಷ್ಟು ಸಾಲು.
ಅಪ್ಪಿ ತಪ್ಪಿ ಒಂದು ಹನಿ ಮಳೆಯ ಲೆಕ್ಕ ಹಿಡಿಯಲು ಹೊರಟರೂ ದಿಕ್ಕು ತಪ್ಪುತ್ತೇವೆ! ಹೇಗೆ ಅಂತೀರಾ... ಹನಿಯಾಗಿ ಅರಳಿ ನೆಲದಲಿ ಇಳಿವ ಮಳೆಯ ಸಾರ್ಥಕತೆ ಎಲ್ಲಿದೆ ಎಂದು ಪ್ರಶ್ನೆ ಹೊತ್ತು ಹೊರಟರೆ ಅಲ್ಲಿಗೆ ಮತ್ತೊಂದು ಸೋಲು ಮೈ ಮೇಲೆ ಮುಗಿ ಬೀಳುತ್ತದೆ. ಆ ಪ್ರಶ್ನೆಗೆ ಸಾವಿರ ಸಾವಿರ ಉತ್ತರ ಹೇಳಬಹುದು.
`ಗರಿಕೆಯ ನೇವರಿಸಿ ಹಸಿರ ತಾಜಾಗೊಳಿಸುವಲ್ಲಿ ಇದೆ ಹನಿಯ ಸಾರ್ಥಕತೆ' ಎಂದರೆ ಇಲ್ಲಾ ಎನ್ನಲಾದೀತಾ? ಬಿತ್ತ ಬೀಜಕ್ಕೆ ಒಂದಷ್ಟು ತಂಪು ನೀಡಿ ಮಣ್ಣಿನ ಸತ್ವ ಬಸಿದು ಮೊಳಕೆ ಒಡೆಸುವಲ್ಲಿ ಅದರ ಸಾರ್ಥಕ್ಯ ಎಂದರೆ ಅದ ತಳ್ಳಿಹಾಕಬಹುದಾ... ಗಟಾರದೊಳಗೆ ಬಿದ್ದು ಅಲ್ಲಿನ ವಿಷದ ಸಾಂದ್ರತೆ ತಗ್ಗಿಸುವಲ್ಲಿ, ವಿಷವ ತೊಳೆವಲ್ಲಿ ಎಂದರೆ ಒಪ್ಪದೆ ಇರಲು ಸಾಧ್ಯವಾ....
ಅದೇನೇ ಇರಲಿ, ಇಷ್ಟಾಗೂ ಹನಿ ಮಳೆಯ ಸಾರ್ಥಕತೆ ಇರುವುದೇ elusivenessನಲ್ಲಿ ಎನ್ನುವ ಉತ್ತರ ಕಂಡುಕೊಂಡರೆ ಬಹುಶಃ ಅದೇ ಹೆಚ್ಚು ನಿಖರ. ನೆಲಕ್ಕೆ ಬಿದ್ದರೂ ಭೂಮಿಗೆ ಸಂಪೂರ್ಣ ದಕ್ಕದು `ಹನಿ'. ಒಂದಷ್ಟು ತಂಪು ತುಂಬಿ, ಮಣ್ಣ ಕಣದ ಬಿಗುವ ಸಡಿಲಿಸಿ ಮತ್ತಾವುದೋ ಬೀಜದಲ್ಲಿ ಸ್ವಲ್ಪ ಭಾಗ ಚೈತನ್ಯವಾಗಿ ಉಳಿಯಬಹುದು ಅಷ್ಟೆ. ಆದರೆ ವಾಯುವಿನ ನವಿರು ನೇವರಿಕೆಗೆ ಆ ತಂಪು ರೂಪ ಬದಲಿಸಿರುತ್ತದೆ, ಶೀತಲ ಹವೆಯಾಗುತ್ತದೆ. ಬೆಳಗಿನ ಭಾನು ಬಿಟ್ಟ ಕಿರಣದ ಬಾಣಕ್ಕೆ ಆವಿಯಾಗಿ ಆಗಸಕೇರುತ್ತದೆ. ಹೀಗೆ ಭುವಿಯಲ್ಲಿ, ತಿನ್ನುವ ಬಾಯಲ್ಲಿ, ಬಾನಲ್ಲಿ, ಬೀಸುವ ಗಾಳಿಯಲಿ ಎಲ್ಲೆಲ್ಲಿ ಇಡುವುದು ಹನಿ ಮಳೆಯ ಲೆಕ್ಕ ಅದರ ಜಾಡು....
ಹನಿ ಮಳೆಯಂತೆಯೇ `ಅವರ' ಆ ಆಪ್ತ ಮಾತುಗಳು... ನಿರ್ಮಲ ಪೀತಿ ಜಿನುಗಿನಲ್ಲಿ, ಮೋಹವಿರದ ಭರಪೂರ ಕಾಳಜಿಯಲ್ಲಿ ನಾನೆಂಬ ನನ್ನನ್ನು ಕರಗಿಸುವ ಮಾತುಗಳು. ಮತ್ತೆ ಮತ್ತೆ ಅದೇ ತೊಡರಿನೊಂದಿಗೆ, ಭಾವನೆಗಳ ತಲ್ಲಣದಲಿ ಬೆಂದು ಕಡೆಗೆ ಸೋತು `ಅವರ' ಮುಂದೆ ನಿಲ್ಲುತ್ತೇನೆ. ಆಗ ತಂಪು ಸುರಿಯುತ್ತಾ ತಣ್ಣಗೆ ಹೇಳುತ್ತಾರೆ. ಪ್ರವಾದಿ ಗುಣವೇ ಇರದ ಸಂತನಂತೆ ನಿರ್ಲಿಪ್ತವಾಗಿ ಮಾತಾಗುತ್ತಾರೆ. ಆ ಮಾತುಗಳಲ್ಲಿ ಹನಿ ಮಳೆಯ ಆಳದ ಶೀತಲತೆ. ಅವುಗಳ ತೂಕಕ್ಕೆ ಮನದ ಆಗಸದಿ ಕಟ್ಟಿ ಮೈಯಲ್ಲಿ ದಟ್ಟೈಸಿದ್ದ ಉತ್ಕಟ ಭಾವನೆಗಳ ಮೋಡ ಕರಗುತ್ತದೆ. ಹನಿಯಾಗಿ ಸಾಂದ್ರಗೊಳ್ಳುತ್ತದೆ. ನೇರ ಎದೆಯ ಸುಡು ಸುಡು ನೆಲಕ್ಕೆ ಚಿಟಪಟ ಇಳಿಯುತ್ತದೆ.
`ನಾನಿರುವಲ್ಲಿ ಖುಷಿ, secure feeling ಇರಬೇಕು. ನಿರೀಕ್ಷೆಯ ಭಾರಗಳಲ್ಲ, ತಹತಹವಂತೂ ಅಲ್ಲವೇ ಅಲ್ಲ. just be with me... ಹಾಗಂದ್ರೆ ತುಂಬಾ ಸುಮ್ನೆ ಇರು ಅಂತಾ. ಯಾವಾಗಲೂ ಉಸಿರಾಡೋ ಹಾಗೆ. ಅದರಲ್ಲಿ ಯಾವುದೇ ವಿಶೇಷ ಅನ್ನಿಸದ ಹಾಗೆ. ಸುಮ್ನೆ, ಸುಮ್ನೆ ಇರಬೇಕು... ನಿರೀಕ್ಷೆ, ಬೇಜಾರು, ಹತಾಶೆ ಯಾವುದೂ ಅಲ್ಲಿ ಬೇಡ. ಉಸಿರಿನ ಹಾಗೆ. ಸಹಜವಾಗಿ ಜೊತೆ ಇರಿ...'
ಭಾವನೆಗಳಲಿ ಬೆಂದು, ಅಭಿವ್ಯಕ್ತಿಸಲಾಗದೆ ಸೋತು ನಾನು ಕುದಿವ ಕೆಂಡವಾದಾಗ ಅವರ ಈ ಮಾತುಗಳು ಕೈ ಹಿಡಿಯುತ್ತವೆ. ನಾನು ಪೂಜಿಸುವ, ಆರಾಧಿಸುವ ಹನಿ ಮಾತುಗಳು ಅವು. ಏನೆನ್ನಬಹುದು ಅವುಗಳನ್ನು `ಸಹಜ, ಸುಂದರ, ಸರಳ, ಅನನ್ಯ'...
ಆದರೂ ನನಗೆ ಗೊತ್ತು. `ನಾನು ಮತ್ತೆ ಸೂಲುತ್ತೇನೆ'. ಸೋಲುವ ಮುನ್ನ ಮಣ್ಣ ಕಣಕಣವಾಗಿ ಮಳೆ ಹನಿಯಂತೆ ಅವರ ಆ ಮಾತುಗಳ ದಕ್ಕಿಸಿಕೊಳ್ಳಲು ನೋಡುತ್ತೇನೆ, ದಕ್ಕಿಸಿಕೊಂಡರೂ ಬಹಳಷ್ಟು ಜಾರುತ್ತವೆ. ಆ ಮಾತುಗಳ ತಂಪಿನಲಿ ಭಾವನೆಗಳ ಮೊಳಕೆ ಕಟ್ಟಿ ಸತ್ವಯುತವಾಗಲು ಪ್ರಯತ್ನಿಸುತ್ತೇನೆ. ಅದರಲ್ಲಿ ಸಫಲನಾಗುತ್ತೇನೆ ಕೂಡಾ. ಆದರೂ ಮತ್ತೂ ಜಾರುತ್ತವೆ. ಭುವಿಯಾಗಿ, ಬಾನಾಗಿ, ಭಾನುವಿನ ಕಿರಣವಾಗಿ, ಬೀಸುವ ಗಾಳಿಯಾಗಿ ಎಲ್ಲವೂ ಆಗಿ ಒಮ್ಮೆಲೇ ಅವುಗಳ ಹಿಡಿಯಲು ನೋಡುತ್ತೇನೆ. ಮತ್ತೂ ಉಳಿದು ಬಿಡುತ್ತವೆ. ಒಂದು ವೇಳೆ ದಕ್ಕಿದರೂ ಚದುರಿ ಚದುರಿ ದೂರವೇ ನಿಲ್ಲುತ್ತವೆ.... ಜಗತ್ತಿನ ಅತ್ಯಂತ ಸರಳ ಮಾತು ಅವು. ಬರೆದರೆ ಒಂದು ಚಿಕ್ಕ ಪ್ಯಾರಾ ಕೂಡಾ ಆಗುವುದಿಲ್ಲ. ಆದರೂ ಅವುಗಳನ್ನು ನನಗೆ ದಕ್ಕಿಸಿಕೊಳ್ಳಲು ಆಗುವುದಿಲ್ಲ. ನನ್ನೊಳಗೆ ಅವು ಸಂಪೂರ್ಣವಾಗಿ internalize ಆಗುವುದೇ ಇಲ್ಲ.
ಹಾಗಾಗೇ, ಮತ್ತೆ ಮತ್ತೆ ಸೋಲುತ್ತಲೇ ಇದ್ದೇನೆ.. ಬಹುಶಃ ಮುಂದೂ ಸಹ. ಮತ್ತದೇ ತಪ್ಪುಗಳೊಂದಿಗೆ ಅವರ ಮುಂದೆ ನಿಲ್ಲಬಾರದು ಎಂದರೂ ಅಷ್ಟೇ ಎಳಸಾಗಿ, ಬಾಲಿಶವಾಗಿ ನಿಂತಿರುತ್ತೇನೆ. ಆಗ ಮತ್ತೊಮ್ಮೆ ಹನಿ ಮಳೆ. ಎಂದೂ ದಕ್ಕದ ಮಾತಿನ ಹನಿ ಹನಿ ಮಳೆ...
.
.
.
.
.

ಏನು ತಾನೆ ಹೇಳಲಿ ಅವರಿಗೆ? ಪದೇ ಪದೇ ಅದೇ ತಪ್ಪು ಮಾಡುವ ಈ ದಡ್ಡನ ಮೇಲೆ ಕ್ಷಮೆ ಇರಲಿ ಎಂದಷ್ಟೇ ಹೇಳಬಹುದು

1 comment:

  1. ಈ ಲೇಖನದಲ್ಲಿ ಅದ್ಬುತವಾದ ನಿರೂಪಣೆ ಇದೆ. ಸ್ವಂತ್ತದಾ.

    ReplyDelete