Wednesday, February 23, 2011

ಆ ಮರ

ಆ ಮನೆಯಂಗಳದಲ್ಲಿ ಒಂದು ಮರವಿತ್ತು. ಅದು ಹಣ್ಣು ಬಿಡುತ್ತಿತ್ತಾದರೂ ಅದರ ಹಣ್ಣನ್ನು ಪಕ್ಷಿಗಳಷ್ಟೇ ತಿನ್ನುತ್ತಿದ್ದವು. ಮನುಷ್ಯರು ಬಾಯಿ ಚಪ್ಪರಿಸುವ ಮಾವು, ಹಲಸನ್ನಾಗಲಿ, ದಿನನಿತ್ಯದ ಬಳಕೆಯ ತೆಂಗಿನಕಾಯನ್ನಾಗಲಿ ನೀಡುವ ಭಾಗ್ಯ ಅದರದಾಗಿರಲಿಲ್ಲ. ಅದು ನೆರಳನ್ನು ನೀಡುತ್ತಿತ್ತಾದರೂ ಅದರ ನೆರಳಿನಡಿ ಹೋಗಿ ನಿಂತವರನ್ನು ಯಾರೂ ಕಂಡಿರಲಿಲ್ಲ. ಹೀಗಿರುವಾಗ ಅದಕ್ಕೊಂದು ಹೆಸರು ಇದ್ದೀತು ಎನ್ನುವ ಬಗ್ಗೆ ಯಾರಾದರೂ, ಯಾವತ್ತಾದರೂ ಯಾಕೆ ಯೋಚಿಸುತ್ತಾರೆ ಹೇಳಿ? ಯಾವುದೋ ಹಕ್ಕಿ ಹೀಗೆ ಹಾರುತ್ತಾ, ಅರೆಬರೆ ಕುಕ್ಕಿ ತಿಂದಿದ್ದ ಕಾಯಿಯೊಂದನ್ನು ಬಾಯಲ್ಲಿಡುದು ಹೋಗುವಾಗ ಹಿಕ್ಕೆ ಹಾಕುವ ಒತ್ತಡದಲ್ಲಿ ಬಾಯಲ್ಲಿನ ಬೀಜವನ್ನೂ ಉದುರಿಸಿ ಹೋಗಿತ್ತು. ಮೊದಲು ಹಿಕ್ಕೆ ಬಿತ್ತೋ, ಬೀಜ ಬಿತ್ತೋ ಅಥವಾ ಬೀಜ ಹಿಕ್ಕೆ ಒಟ್ಟಿಗೇ ಬಿದ್ದವೋ ಎನ್ನುವಂಥ ಬೀಜವೃಕ್ಷ ನ್ಯಾಯ ಅಥವಾ ಜಿಜ್ಞಾಸೆಯಲ್ಲಿ ತೊಡಗಲು ಅಲ್ಲಾರಿಗೂ ಪುರಸೊತ್ತು ಇರಲಿಲ್ಲ. ಒಂದು ವೇಳೆ ಇದ್ದರೂ ಅಂಥ ಜಿಜ್ಞಾಸೆಗೆ ಕಾರಣವಾಗುವ ಘನತೆ ಆ ಬೀಜಕ್ಕೆ ಇಲ್ಲ ಎಂದು ತಳ್ಳಿ ಹಾಕಿ ಬಿಡುತ್ತಿದ್ದರೇನೋ...
ಇರಲಿ, ವಿಷಯ ಇಷ್ಟೇ, ಪ್ರಪಂಚವೆಲ್ಲಾ ಸದ್ದಿನಲ್ಲಿ-ಸುದ್ದಿಯಲ್ಲಿ ಮುಳುಗಿದ್ದಾಗ ಅದ್ಯಾವುದೋ ಒಂದು ದಿನ ಈ ಬೀಜ ಆ ಮನೆಯ ಆವರಣದಲ್ಲಿ ಬಿತ್ತು. ಅದರ ಜೈವಿಕ ಪುಣ್ಯ ಮಳೆ, ಇಳೆ ಎರಡೂ ಅನುಕೂಲವಾಗಿದ್ದರಿಂದ ಅದರೊಳಗಿದ್ದ ದ್ರವ್ಯ ಹೊರನುಗ್ಗಿ ಮೊಳಕೆಯೂ ಮೂಡಿತು. ದಿನಗಳೆರಡು ಉರುಳಿತ್ತು, ಎರಡು ಪುಟಾಣಿ ಎಲೆ ಹೊತ್ತು ಹಸಿ ಹಸಿ ಸಸಿಯೊಂದು ತಲೆ ಎತ್ತಿ ನಿಂತಿತ್ತು. ಆದರೆ ಅದ್ಯಾವುದನ್ನೂ ಗಮನಿಸುವಷ್ಟು ಪುರುಸೊತ್ತು ಆ ಮನೆಯವರಾರಿಗೂ ಇರಲಿಲ್ಲ. ಗಡಿಬಿಡಿ, ಪಿಟಿಪಿಟಿ ಮಾಡಿಕೊಂಡು ಬಲೇ ಧಾವಂತದಲ್ಲಿ ಬದುಕುತ್ತಿದ್ದ ಅಲ್ಲಿನ ಜನಕ್ಕೆ ಗಿಡ ಸೊಂಟದೆತ್ತರ ಬೆಳೆದಾಗ ಕಣ್ಣಿಗೆ ಬಿದ್ದಿತ್ತು. ಕಾಂಪೌಂಡು ವಿಶಾಲ ಇದ್ದರಿಂದಲೋ ಅಥವಾ ಎಂದೂ ಮುಗಿಯದ ಧಾವಂತದಲ್ಲಿ ಅವರೆಲ್ಲಾ ತಮ್ಮ ಬದುಕನ್ನು ಸಿಕ್ಕಿಸಿಕೊಂಡಿದ್ದರಿಂದಲೋ ಅಂತೂ ಆ ಗಿಡ ಉಳಿದು ಬಿಟ್ಟಿತು. ಮೂರ್ನಾಲ್ಕು ವರ್ಷಕ್ಕೆ ಎಂಟ್ಹತ್ತು ಅಡಿ ಮೀರಿ ತನ್ನ ಇರುವಿಕೆಯನ್ನು ರಸ್ತೆ ಬದಿಯಲ್ಲಿ ಸಾಗುವವರಿಗೆಲ್ಲಾ ಸಾರತೊಡಗಿತು. ಸಣ್ಣ ಸಣ್ಣ ಹೂ ಬಿಡುತ್ತಾ, ಕಾಯಿ ಕಟ್ಟುತ್ತಾ ಜೀವ ಬದುಕಿನ ಅನನ್ಯತೆಗೆ ಅಚ್ಚರಿಯಿಂದ ಹಿತವಾಗಿ ತೆರೆದುಕೊಂಡಿತು.
...........

ಹೀಗಿರುವಾಗ ಆ ಮನೆಯಲ್ಲಿ ಕೂಸೊಂದು ಹುಟ್ಟಿತು. ಅಳು, ಲಾಲಿ, ಪುಟ್ಟ ಗಂಟಲಿನಿಂದ ಉಬ್ಬುವ ಚಿತ್ರ, ವಿಚಿತ್ರ ಸದ್ದುಗಳು, ಜೋಗುಳ ಇವೆಲ್ಲವನ್ನು ಮರ ಕೇಳಿಸಿಕೊಳ್ಳತೊಡಗಿತು. ಸಪ್ಪೆ ಆಹಾರ ತಿನ್ನುವ ಆ ಪುಟಾಣಿ ಕಂದಮ್ಮನ ಹಸಿ ಮೈಯ ವಾಸನೆ, ಸ್ನಾನದ ನಂತರ ಆ ಕಂದಮ್ಮನ ತಲೆಗೆ ನೀಡುವ ಸಾಮ್ರಾಣಿ ಹೊಗೆ, ಜೋಕಾಲಿಯ ಜೀಕು, ಮಗುವಿರುವ ಮನೆಯಲ್ಲಿನ ಗಡಿಬಿಡಿ ಇವೆಲ್ಲ ಆಗಷ್ಟೇ ಮರವಾಗಿದ್ದ ಆ ಗಿಡದಲ್ಲಿ (ಹಾಗೆನ್ನಬಹುದೇ!) ವಿಚಿತ್ರ ಕುತೂಹಲ ಹುಟ್ಟಿಸಿತ್ತು.
ಅದೊಂದು ದಿನ ಮನೆಯಾಚೆಗೆ ಕೂಸನ್ನು ತಂದಾಗ ಮರದಲ್ಲೂ ಎಂಥದೋ ಪುಳಕ! ದಿನ ಕಳೆದಂತೆ ಆ ಹೆಣ್ಣು ಕೂಸು ಮತ್ತೊಬ್ಬರ ಆಸರೆಯಿಂದ ನಿಂತು ಗೆಜ್ಜೆ ಕಟ್ಟಿದ ಪುಟ್ಟ, ಪುಟ್ಟ ಕಾಲನ್ನು ನೆಲಕ್ಕೆ ಕುಟ್ಟುತ್ತಾ ಥೈ ಥೈ ಎನ್ನಿಸುವುದೂ ನಡೆದಿತ್ತು. ಮತ್ತಷ್ಟು ದಿನ ಮೂಡಿದಂತೆ ಅತ್ತಿತ್ತ ದೇಕುವುದೂ ಸಾವಕಾಶವಾಯಿತು. ಆಮೇಲೊಂದು ದಿನ ಅಂಬೆಗಾಲು ಹಾಕುವುದನ್ನು ಕಲಿತು ಕಡೆಗೊಮ್ಮೆ ತಾನೇ ಹೊಸಲು ದಾಟಿತು. ಆ ಮೂಲಕ ಎಲ್ಲರ ಬಾಯಿಯಲ್ಲೂ ಸಕ್ಕರೆ ಕರಗಿತು.
ಮಗುವಿನ ಈ ಎಲ್ಲ ಪುಟಿಪುಟಿಯುವ ಚಟುವಟಿಕೆ ನೋಡುವುದು ಮರದ ಪಾಲಿಗಂತೂ ಹಬ್ಬವೇ ಆಗಿ ಹೋಯಿತು. ಆದರೆ ಅದೇಕೋ, ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಅಂತೂ ಆ ಮಗು ಒಂದು ದಿನಕ್ಕೂ ಆ ಮರದತ್ತ ಸುಳಿಯಲೇ ಇಲ್ಲ. ಇತ್ತ ತಾನು ಒಂದಿಂಚೂ ಕದಲುವುದು ಸಾಧ್ಯವೇ ಇಲ್ಲ ಎನ್ನುವುದು ಗೊತ್ತಿದ್ದರೂ ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಆ ಮರ ಆ ಪುಟ್ಟ ಕಂದಮ್ಮನೆಡೆಗೆ ತುಡಿಯುವುದ ಬಿಡಲಿಲ್ಲ...
.............

ಅಂತೂ ಮರ ಈಗ ಭರ್ಜರಿಯಾಗಿ ಹಬ್ಬಿ ನಿಂತಿತ್ತು. ತನಗೆ ಜಾಗ ನೀಡಿದ ಆ ಮನೆಗೆ ಒಂದಿಷ್ಟೂ ತೊಂದರೆಯಾಗದಂತೆ ರಸ್ತೆಯ ಕಡೆಗೆ ಬಲಿಷ್ಠ ರೆಂಬೆಗಳನ್ನು ಹಬ್ಬಿಸಿ, ಮನೆಯ ಆಯದ ಬಗ್ಗೆ ಜಾಗ್ರತೆವಹಿಸಿ ಬೆಳೆದುಕೊಂಡಿತ್ತು. ತನ್ನ ಕದಲದ ದೇಹವನ್ನಲ್ಲದೆ ಅದರೊಳಗೆ ಅದೆಂಥದೋ ತೀವ್ರ ಭಾವನೆಯನ್ನೂ ಹಬ್ಬಿಸಿಕೊಂಡಿತ್ತು. ಆಕಾಶದಗಲಕ್ಕೂ ಹಾಸುವಂಥ ಭಾವನೆ ಅದು. ಹೌದು, ಆ ಮರ ಆ ಮನೆಯಲ್ಲಿ ಜೀವವುಕ್ಕಿಸಿದ ಆ ಪುಟ್ಟ ಕಂದಮ್ಮನನ್ನು ಎಳೆವೆಯಿಂದಲೇ ಹಚ್ಚಿಕೊಂಡು ಬಿಟ್ಟಿತ್ತು. ಮನುಷ್ಯ ಭಾಷೆಯಲ್ಲಿ ಅದನ್ನು ಪ್ರೇಮವೆನ್ನಬಹುದೇನೋ ಆದರೆ ಮರದ ಭಾಷೆಯಲ್ಲಿ ಏನೆನ್ನಬಹುದು? ಗೊತ್ತಿಲ್ಲ...

ಇಂಥ ಮರ ತಾನು ಹೂಬಿಟ್ಟು ನಿಂತಾಗ ಆ ಹುಡುಗಿ ಏನಾದರೂ ಹೊರ ಬಂದರೆ ಸಾಧ್ಯವಾದಷ್ಟೂ ಹೆಚ್ಚು ಹೂವುಗಳ ಉದುರಿಸುತ್ತಿತ್ತು. ಗಾಳಿ ತೀಡಿದಾಗ ತನ್ನೊಡಲಿನ ಕಂಪನ್ನೆಲ್ಲಾ ಆಕೆಯ ರೂಮಿನತ್ತ ಹರಡುವಂತೆ ತೂರುತ್ತಿತ್ತು. ಆದರೆ ಆ ಹುಡುಗಿಗೆ ಮಾತ್ರ ಇದ್ಯಾವುದರ ಪರಿವೆಯೂ ಇರಲಿಲ್ಲ. ಮೂರುವರೆ ವರ್ಷದಿಂದಲೇ ಅದರ ಧಾವಂತದ ದಿನಚರಿ ಶುರುವಾಗಿ ಹೋಯಿತು. ವಿಶಾಲ ಕಾಂಪೌಂಡಿನಲ್ಲಿ ಹಿಂದಕ್ಕೆ ಆತುಕೊಂಡಂತೆ ಇದ್ದ ಆ ಮರವನ್ನು ಆಕೆ ಒಮ್ಮೆಯಾದರೂ ದಿಟ್ಟಿಸಿದ್ದಳೋ ಗೊತ್ತಿಲ್ಲ. ಚಿಕ್ಕಂದಿನಲ್ಲಿ ತನ್ನ ಮನೆಯ ಚಿತ್ರ ಬರೆದಿದ್ದಾಗ ಅದರಲ್ಲಿ ಆ ದೊಡ್ಡ ಮರವನ್ನೆನಾದರೂ ಕಾಣಿಸಿದ್ದಳೇ! ಬಹುಶಃ ಇರಲಿಕ್ಕಿಲ್ಲ. ಇನ್ನು ಹದಿಹರೆಯ, ಕಾಲೇಜು, ಡಿಗ್ರಿ, ಕೆಲಸ ಎಂದೆಲ್ಲಾ ಭರಪೂರ ಯೌವ್ವನದಲ್ಲಿ ಜೀಕುವಾಗ ಆ ಮರದ ಇರುವಿಕೆಯ ಬಗ್ಗೆಯೇನಾದರೂ ಆಕೆಗೆ ಅಕ್ಕರೆ ಮೂಡಿತ್ತೇ? ಅದೂ ಗೊತ್ತಿಲ್ಲ...

ಅದೊಂದು ಬಾರಿ ಯಾವಾಗಲೋ ಮೊಬೈಲು ಹಿಡಿದು ಹಾಗೇ ಕಾಂಪೌಡಿನಲ್ಲಿ ಸುತ್ತುತ್ತಾ ಮಾತನಾಡುವಾಗ ಆ ಮರವಿದ್ದೆಡೆಗೆ ಹೆಜ್ಜೆ ಹಾಕುತ್ತಾ ಏಳೆಂಟು ಅಡಿ ಹತ್ತಿರದವರೆಗೂ ಹೋಗಿದ್ದಳು. ಅಷ್ಟೇ.
ಬಂಗಲೆ ಅಲ್ಲವಾದರೂ ಬಂಗಲೆಯಂಥ ಮನೆ ಅದಾಗಿದ್ದ ಕಾರಣ ಆಕೆ ಮನೆಯಲ್ಲಿ ಇರುವ ಹೊತ್ತಲ್ಲಿ ಹೊರಗೆ ಬರುತ್ತಿದ್ದುದೇ ಕಡಿಮೆ. ಬಂದರೂ ಕಾಂಪೌಂಡಿನ ಮಧ್ಯದಲ್ಲಿದ್ದ ಲಾನ್ ದಾಟಿ ಕೈತೋಟದ ಕಡೆಗೆ ಸಾಗುತ್ತಿದ್ದುದು ಬಹಳ ಕಡಿಮೆ. ಹಾಗೊಮ್ಮೆ ಕೈದೋಟಕ್ಕೆ ಹೆಜ್ಜೆ ಇಟ್ಟರೂ ಹಿಂದಿನ ಸಾಲಿನವರೆಗೆ ಹೋಗಿದ್ದೇ ಇಲ್ಲ. ಅವಳಿಗೆ ಅದೇಕೋ, ಆ ಮರ, ಗಿಡ, ಲಾನ್ ಎಲ್ಲವೂ ಆ ಮನೆಯ ಗೋಡೆಯಷ್ಟೇ ಜೀವಂತ!
.............

ಹೀಗಿರುವಾಗ ಆ ಮರ ಮೈಯೆಲ್ಲಾ ಕಿವಿಯಾಗಿಸಿಕೊಂಡು ಹಗಲು ಇರುಳು ಮನೆಯ ಗೋಡೆಗಳಿಂದ ಹೊಮ್ಮುವ ತರಂಗಗಳ ಸೋಸುತ್ತಿತ್ತು. ಎಂದಾದರೂ ಆ ಹುಡುಗಿ ತನ್ನ ಬಗ್ಗೆ ಒಂದಾದರೂ ಮಾತು ಆಡಬಹುದೇನೋ ಎಂದು ಎಲೆಗಳ ಅರಳಿಸಿ ಕೇಳುತ್ತಿತ್ತು. ಆದರೆ ಅಂತಹ ಒಂದು ಶಬ್ಧವೂ ಅದರ ಕಿವಿಗೆ ಬೀಳಲಿಲ್ಲ. ಮರದ ಪಾಡಿಗೆ ಮರ ಆ ಹುಡುಗಿಯನ್ನು ಪ್ರೇಮಿಸುತ್ತಿತ್ತು. ಅತ್ತ ಆ ಹುಡುಗಿ ತನ್ನ ಪಾಡಿಗೆ ತಾನು ಬದುಕ ಸಂಭ್ರಮಿಸಿದ್ದಳು. ವಯೋಸಹಜವಾಗಿ ಆಕೆಯೂ ಪ್ರೀತಿ, ಪ್ರೇಮದಲ್ಲಿ ತುಯ್ಯುತ್ತಾ, ಗೆಳೆಯ, ಗೆಳತಿಯರ ಗುಂಪಿನಲ್ಲಿ ಹಿಗ್ಗುತ್ತಾ ಸಾಗಿದ್ದಳು. ಅವಳ ಬಾಳಿನ ಯಾವ ಪುಟದಲ್ಲೂ "ಆ ಮರದ' ಪ್ರಸ್ತಾಪವೇ ಇರಲಿಲ್ಲ.
.............

ಮುಂದೊಂದು ದಿನ ಹುಡುಗಿಯ ಬಾಳಲ್ಲಿ ಹುಡುಗ ಬಂದ. ಮನೆಯವರೆಲ್ಲಾ ಸೇರಿ ಅವರಿಗೆ ಮದುವೆ ಮಾಡಿದರು. ಮದುವೆ ಮಾಡುವ ವೇಳೆ ಶಾಮಿಯಾನ ಹಾಕಲು ಹಗ್ಗ ಕಟ್ಟುವ ಸಲುವಾಗಿ ಬಲಿಷ್ಠವಾಗಿದ್ದ ಆ ಮರದ ಕಾಂಡಕ್ಕೆ ಬರೋಬ್ಬರಿ ಏಳಿಂಚಿನ ಮೊಳೆಯನ್ನೂ ಹೊಡೆದರು. ಮೈಯೆಲ್ಲಾ ಸಿಗಿದು ಹಾಕುವಂಥ ನೋವಾದರೂ ಮರ ಮಾತ್ರ ಶಾಮಿಯಾನ ಒಂದಿನಿತೂ ಅಲುಗಾಡದಂತೆ ಬಿಗಿಪಟ್ಟಿನಲ್ಲಿ ಮೊಳೆಯನ್ನು ಹಿಡಿದುಕೊಂಡಿತ್ತು. ಮದುವೆ ಮುಗಿದು ಶಾಮಿಯಾನ ಕಳಚಿದರು. ಯಾವುದಾದರೂ ಸಭೆ, ಸಮಾರಂಭ ಇದ್ದೇ ಇರುತ್ತದೆ, ಆಗೆಲ್ಲಾ ಶಾಮಿಯಾನ ಹಾಕಲೇ ಬೇಕಾಗುತ್ತದೆ ಎನ್ನುವ ಕಾರಣದಿಂದ ಮೊಳೆಯನ್ನು ಮರದಲ್ಲೇ ಬಿಟ್ಟರು. ಮರವಾದರೂ ಅಷ್ಟೇ ಆ ಮೊಳೆಯನ್ನು ಅಷ್ಟೇ ಜತನದಿಂದ ಬಿಗಿಯಾಗಿ ಹಿಡಿದುಕೊಂಡಿತು.
.............

ಮದುವೆ ನಂತರ ಹುಡುಗಿ ಅಷ್ಟಾಗಿ ಆ ಮನೆಯಲ್ಲಿ ಕಾಣುತ್ತಿರಲಿಲ್ಲ. ಆಗೊಮ್ಮೆ, ಈಗೊಮ್ಮೆ ಬರುತ್ತಿದ್ದಳು. ಹಾಗೆ ಬಂದಾಗಲೂ ಎನೋ ಧಾವಂತ, ಗಡಿಬಿಡಿ. ರಸ್ತೆ, ಗೇಟು, ಮನೆ ಇದಿಷ್ಟೇ ಆಕೆ ಹೋಗಿಬರುವ ಹಾದಿ. ಆರು ತಿಂಗಳಿಗೋ, ವರ್ಷಕ್ಕೋ ಏನಾದರೂ ವಿಶೇಷ ಇದ್ದಾಗ ಬಂದು ಹೋಗುತ್ತಿದ್ದಳು. ಹಾಗೆ ಬಂದಾಗ ಕೆಲ ಬಾರಿ ಲಾನ್ನತ್ತ ಸುಳಿಯುತ್ತಿದ್ದಳು. ಅಷ್ಟೇ. ಅದರಾಚೆಗೆ ಅವಳ ಒಂದು ಹೆಜ್ಜೆಯೂ ಮೂಡಲಿಲ್ಲ.
.............

ತನ್ನದೇ ಓಘದಲ್ಲಿ ಬದುಕ ಹೀರುತ್ತಾ, ಸಮಾಗಮದ ಸುಖದಿ ಹದವಾಗಿ ಈಸುತ್ತಾ, ಬಿಸಿಯುಕ್ಕುವ ತೋಳಿನಲಿ ತೊನೆಯುತ್ತಾ, ಕಡೆಗೊಮ್ಮೆ ಸ್ವರ್ಗದಲ್ಲಿ ತೇಲುವಾಗ ತನ್ನೊಳಗೆ ಜೀವವೊಂದನ್ನೂ ಅಂಕುರಿಸಿಕೊಂಡಳು ಹುಡುಗಿ. ತವರಿಗೆ ಬಂದು, ಮುದ್ದಾದ ಮಗುವನ್ನು ಪ್ರಪಂಚಕ್ಕೆ ಕರೆದು ಮತ್ತೊಂದು ದಿನ ಮಗುವಿನೊಂದಿಗೆ ಹೊರಟೂ ಬಿಟ್ಟಳು.
............

ಅದೊಂದು ದಿನ ದೂರದ ಮನೆಯ ಟೆರೇಸಿನಲ್ಲಿ, ಮಿನುಗುವ ರಾತ್ರಿ ಹೊತ್ತಲ್ಲಿ, ಯಾರೋ ಇಬ್ಬರು ಗೆಳೆಯರು ಕೂತು ಗುಂಡು ಹಾಕುತ್ತಿದ್ದರು. ಅವರ ಮಾತುಗಳು ಗಾಳಿಯಲ್ಲಿ ಕರಗಿ ಹಾಗೇ ಹರಿದು ಬರುತ್ತಿದ್ದವು. ಒಬ್ಬ ಹೇಳುತ್ತಿದ್ದ, ನನ್ನದು ನಿಸ್ವಾರ್ಥ ಪ್ರೀತಿ. ಅವಳು ನನ್ನನ್ನು ಪ್ರೀತಿಸುತ್ತಾಳೋ, ಇಲ್ಲವೋ ಗೊತ್ತಿಲ್ಲ ಆದರೆ ನಾನು ಮಾತ್ರ ಯಾವುದೇ ನಿರೀಕ್ಷೆ ಇಲ್ಲದೆ ಅವಳನ್ನು ಪ್ರೀತಿಸುತ್ತೇನೆ ಎಂದು. ಇದನ್ನು ಕೇಳಿಸಿಕೊಂಡ ಮರ ಅದೇ ಮೊದಲ ಬಾರಿಗೆ ಹಾಗೂ ಕಡೆಯ ಬಾರಿಗೆ ಯೋಚಿಸತೊಡಗಿತು. ಒಂದು ವೇಳೆ ಪ್ರೀತಿ ಎನ್ನುವುದು ಮನದ ಒಳಗೆ ಮಧುರ ಭಾವನೆ ಹುಟ್ಟಿಸದೆ ಕೋಪವನ್ನೋ, ದ್ವೇಷವನ್ನೋ ಹುಟ್ಟಿಸುವಂತಿದ್ದರೆ ಆಗ ಯಾರಾದರೂ ಪ್ರೀತಿಸುತ್ತಿದ್ದರೇ? ಮಧುರ ಭಾವನೆ ಮೂಡದೆ ಪ್ರೀತಿ ಹುಟ್ಟಬಲ್ಲದೇ? ಪ್ರೀತಿಯಲ್ಲಿ ತಿರಸ್ಕಾರದ ಅಸಹನೀಯ ನೋವು ಉಂಡಾಗಲೂ ಆ ನೋವಿನ ಮೇಲೆ 'ಅದು ನನ್ನದೇ ನೋವು' ಎನ್ನುವ ಅತೀವ ಭಾವ ಇರುವುದಿಲ್ಲವೇ? ಇಷ್ಟೆಲ್ಲಾ ಇದ್ದಮೇಲೆ ಅಲ್ಲಿ ಸ್ವಾರ್ಥ ಇದೆ ಎಂದಾಯಿತಲ್ಲವೇ? ಎಂದುಕೊಂಡಿತು.
ಸ್ವಾರ್ಥ ಎನ್ನುವುದು ಈ ಮನುಷ್ಯರು ತಿಳಿದುಕೊಂಡಿರುವಂತೆ ನಿಜಕ್ಕೂ ಅಷ್ಟು ಕೆಟ್ಟ, ಕಟು ಪದ ಅಲ್ಲವೇನೋ ಎಂದುಕೊಂಡು ನಿಟ್ಟುಸಿರು ಬಿಟ್ಟಿತು.
............

ಅದೊಮ್ಮೆ ಆ ಮನೆಯ ಯಜಮಾನ ಯಾರೋ ನಾಲ್ಕಾರು ಮಂದಿಯನ್ನು ಕರೆದು ಏನೋ ಮಾತನಾಡಿ ಕಳುಹಿಸಿದ. ಮಾರನೆಯ ದಿನ ಗರಗಸ ಹೊತ್ತು ತಂದ ಅವರು ಆ ಮರದ ಬುಡಕ್ಕೆ ಅಲಗು ತಾಕಿಸಿ ಲಯಬದ್ಧವಾಗಿ 'ಸರ್ ಬರ್' ಎಂದು ಕೊಯ್ಯ ತೊಡಗಿದರು. ಇಬ್ಬನಿ ಹೊದ್ದು ಹಸಿ ಮೈಯಲ್ಲಿ ಇದ್ದ ಮರ ಒಮ್ಮೆಲೇ ತಡಬಡಾಯಿಸಿತು. ಇನ್ನೇನು ಒಂದೆರಡು ಗಂಟೆಗಳಲ್ಲಿ ತನ್ನನ್ನು ಕತ್ತರಿಸಿ ಬಿಸಾಕುತ್ತಾರೆ ಎನ್ನುವುದು ಖಾತ್ರಿಯಾಗುವ ಹೊತ್ತಿಗೆ ಕಾಂಡದ ಕಾಲುಭಾಗ ಸಡಿಲವಾಗಿತ್ತು. ಅಸಹನೀಯ ನೋವು ಪ್ರತಿಜೀವಕೋಶದಲ್ಲೂ ಹಬ್ಬಿತ್ತು. ಅದರ ನಡುವೆಯೂ ತಾನು ಪ್ರೀತಿಸಿದ ಹುಡುಗಿ ಮುಂದಿನ ಬಾರಿ ಬಂದಾಗ ನಾನು ಇಲ್ಲದೆ ಇರುವುದನ್ನು ಗುರುತಿಸಬಹುದೇ? ಆ ಬಗ್ಗೆ ಮನೆಯವರನ್ನು ಕೇಳಬಹುದೇ? ಎನ್ನುವ ಪ್ರಶ್ನೆಗಳು ಸುಳಿದವು. ಜೀವನದಲ್ಲಿ ತನ್ನ ಬಗ್ಗೆ ಅರೆಕ್ಷಣವೂ ಯೋಚಿಸಿರದ, ಒಂದಕ್ಷರವೂ ಮಾತನಾಡಿರದ ಹುಡುಗಿಯಿಂದ ಅದನ್ನೆಲ್ಲಾ ನಿರೀಕ್ಷಿಸಲು ಸಾಧ್ಯವಿಲ್ಲವೇನೋ ಎಂದುಕೊಂಡಿತು.

ಅಷ್ಟರಲ್ಲಿ ಗರಗಸ ಕಾಂಡದ ಅರ್ಧಕ್ಕೆ ಬಂದು ನಿಂತಿತ್ತು. ಕೆಲಸಗಾರರು ಕೆಲಹೊತ್ತು ಕತ್ತರಿಸುವುದ ನಿಲ್ಲಿಸಿದರು. ಮರದ ಮತ್ತೊಂದು ಬದಿಗೆ ಕಟ್ಟಿರುವ ಹಗ್ಗಗಳ ಬಿಗಿಯನ್ನು ಖಾತ್ರಿ ಪಡಿಸಿಕೊಂಡು ಒಂದೆರಡು ನಿಮಿಷ ಬೀಡಿ ಸೇದಲು ಅನುವು ಮಾಡಿಕೊಂಡರು.

ಇತ್ತ ಸಾವು, ಬದುಕಿನ ಮಧ್ಯೆ ಸರಿಯಾಗಿ ಅರ್ಧದಲ್ಲಿ ನಿಂತಿದ್ದ ಮರ ಒಂದು ವೇಳೆ ನಾನೇನಾದರೂ ಇದೇ ಆವರಣದಲ್ಲಿ ಮತ್ತೊಮ್ಮೆ ಹುಟ್ಟಿದರೆ ಹೀಗೆ ಕಡೆಯ ಸಾಲಿನಲ್ಲಿ ಹುಟ್ಟಬಾರದು ಎಂದು ಆಶಿಸುತ್ತಾ ಕಡೆಯ ಪ್ರಯತ್ನವೆನ್ನುವಂತೆ ಒಂದು ಬೀಜವನ್ನು ಮನೆಗೆ ಹತ್ತಿರವಾಗಿ ಬೀಳುವಂತೆ ಸಿಡಿಸಿತು. ಆದರೆ ಅಸಹನೀಯ ನೋವಿನಲ್ಲಿ ಅರೆಬರೆ ಜೀವದಲ್ಲಿದ್ದ ಆ ಮರದ ಕೊಂಬೆಗೆ ಅದು ಸಾಧ್ಯವಾಗದೆ ಬೀಜ ಎತ್ತಲೋ ಸಿಡಿದು ಚರಂಡಿ ಪಾಲಾಯಿತು.

ಕೆಲಸಗಾರರು ಮತ್ತೆ ಶುರುವಿಟ್ಟರು. ಅಷ್ಟರಲ್ಲಿ ಸಣ್ಣದೊಂದು ಆಸೆ ಸಾಯುವ ಮರದಲ್ಲಿ ಮೂಡಿತು. ಅಲ್ಲ, ನನ್ನ ಈ ಕೊಂಬೆ, ಕಾಂಡಗಳನ್ನು ಕತ್ತರಿಸಿ ಅವನ್ನೆಲ್ಲಾ ಆ ನನ್ನ ಹುಡುಗಿ ತನ್ನ ಗಂಡನೊಡಗೂಡಿ ಕಟ್ಟಿಸುವ ಮನೆಗೆ ಕಿಟಕಿ, ಬಾಗಿಲು, ಚೌಕಟ್ಟಾಗಿ ಬಳಸಬಹುದೇನೋ ಎಂದು! ಇಂಥ ಒಂದು ನಿರೀಕ್ಷೆ ಹುಟ್ಟಿದ್ದೇ ತಡ ಮರ ತಾನೇ ಮುಂದಾಗಿ ನೆಲದ ಮೇಲೆ ದಭಾರ್ ಎಂದು ಒರಗಿತು.
............

ಆ ಹುಡುಗಿ ಮನೆಯನ್ನೇ ಕಟ್ಟಿಸಲಿಲ್ಲ. ಬದಲಿಗೆ ದುಬಾರಿ ಏರಿಯಾದಲ್ಲಿ ಲಕ್ಷುರಿ ಅಪಾರ್ಟ್ ಮೆಂಟ್ ಒಂದ ಕೊಂಡಳು. ಆ ಮನೆಯಲ್ಲಿ ತೇಗ, ಬೀಟೆಯ ಕಿಟಕಿ, ಬಾಗಿಲುಗಳು ಇದ್ದವು.
.............

ಅಂದಹಾಗೆ, ಮರಗಳಿಗೇನಾದರೂ ಆತ್ಮವಿರುತ್ತದೆಯೇ?
ಈ ಕಥೆಯ ಮಟ್ಟಿಗೆ ಹೇಳುವುದಾದರೆ ಇರುವುದಿಲ್ಲ ಎಂದುಕೊಳ್ಳುವುದೇ ವಾಸಿ. ಕಡೆಯ ಪಕ್ಷ ಆ ಮರದ ನಿರೀಕ್ಷೆಗಳಾದರೂ ಹಾಗೇ ಹಸಿರಾಗಿರಲಿ...

No comments:

Post a Comment