Saturday, March 5, 2011

ಆದಿಮ ಮಿಂಚು

ಬಹಳ ಹಳೆಯ ಕಥೆ ಅದು. ಈಗ ಹೇಳುತ್ತೇನೆ.
...............
ಅವನ ಅವ್ವೆ ಅವನಿಗೆ ಚಿಕ್ಕಂದಿನಲ್ಲಿ ಹೇಳುತ್ತಿದ್ದಳು, 'ಸುತ್ತಣ ಜನರ ಬಾಳ ಬೆಳಗ ಬೇಕು ನೀನು' ಎಂದು. ಅವನು ಅದಕ್ಕಾಗಿಯೇ ತುಡಿದ. ಚಂದಿರನಾದ. ಜ್ಞಾನವನ್ನು ಎರವಲು ತಂದು ಬೆಳಕ ಚೆಲ್ಲತೊಡಗಿದ. ಹಾಲಿನಂಥ ಬೆಳಕು ಎಂದರು ಎಲ್ಲ. ಹಾಡಿ ಹೊಗಳಿದವರೇ ಸುತ್ತಲೂ. ಆದರೆ, ಕಡೆಗೊಂದು ದಿನ ಎರವಲು ಜ್ಞಾನವೇಕೆ ನೀನೇ ಬೆಳಕಾಗು ಎಂದರು. ಅವ್ವೆಯೂ ಕೂಡಾ.

ಸರಿ, ಜ್ಞಾನದ ತಲಾಶಿನಲ್ಲಿ ಅವ ದೂರ ಹೋದ. ಜ್ಞಾನವೆಂದರೇನು ಸುಲಭದ್ದೇ! ಬಲು ದೂರ, ದೂರ, ದೂರ...

ಕಡೆಗೆ ಚಂದಿರನಿದ್ದವನು ಬಿಂದುವಾದ. ಜ್ಞಾನ ದಕ್ಕಿತು. ಆದರೆ ಬಲುದೂರ ಹೋಗಿ ಬಿಟ್ಟಿದ್ದ. ನಕ್ಷತ್ರವಾಗಿದ್ದ. ಹಾಲಿನ ಬೆಳಕು ಈಗ ಮಿಣುಕು ಮಿಣುಕಾಗಿತ್ತು.

ಬೆಳಕು ಮಿಣುಕು ಮಿಣುಕಾಯಿತು ಎಂದರು ಎಲ್ಲ. 'ಜ್ಞಾನ ನಿನಗೆ ಮಾತ್ರ ದಕ್ಕಿದರೆ ಸಾಕೆ? ನಮಗೂ ಹರಿಸು ಭರಪೂರ' ಇದು ಹೊಸ ಬೇಡಿಕೆ. ಅವ್ವೆಯ ಆಸೆಯೂ ಅದೇ.

ಹತ್ತಿರ ಬಂದರೆ ಸುಟ್ಟು ಹೋದೀರಿ, ದೂರವೇ ಇದ್ದರೆ ಬರಿದೇ ಹಲಬುವಿರಿ.. ಏನು ಮಾಡುವುದು? ಎಂದು ಯೋಚಿಸಿಯೇ ಯೋಚಿಸಿದ. ಕಡೆಗೆ ಸಿಡಿದ.

ಬೆಳಕು, ಬೆಳಕೆಂದು ಹಪಹಪಿಸುತ್ತಿದ್ದವರ ಕಂಗಳು ಆ ಅಸೀಮ ಬೆಳಕ ಕಂಡು ಕತ್ತಲಾದವು.

ಇತ್ತ ಬೆಳಕಿನ ಪೊರೆಯ ಕಳಚಿದವನು ತನ್ನೊಳಗೇ ಕುಸಿದ. ಘನವಾದ. ಘನವೆಂದರೆ ಘನ. ಎಷ್ಟೆಂದರೆ ಅಂತರಂಗದ ಬೆಳಕು ಎಂದೂ ಸೋರದಷ್ಟು.

ಕೆಲ ಕಣ್ಣಿದ್ದವರು ಹೇಳಿದರು, 'ಬೆಳಕನ್ನು ಅಂಧಕಾರ ತಿಂದಿತು'. ಒಳಗಣ್ಣಿದ್ದವರು ಹೇಳಿದರು, 'ಅಂಧಕಾರದೊಳಗಿದೆ ಬೆಳಕು'.
...............

ಇದೆಲ್ಲವನ್ನೂ ಮೊದಲಿಂದ ತುದಿಯವರೆಗೆ ನೋಡಿದ ಅಲ್ಲಮ ನಕ್ಕ.

ಅತ್ತ ಮೇಲೆ ಶಿವಶಕ್ತಿಯರು ಒಬ್ಬರೊಳಗೊಬ್ಬರು ಮೈಚಾಚಿದ್ದರು. ಆದಿಮ ಬಿಂದುವಾಗಿದ್ದರು. ಆ ಪರಮಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಂಡ ಅಲ್ಲಮ ಮೆಲ್ಲನೆ ಉಸುರಿಕೊಂಡ, 'ನನಗೆ ಜ್ಞಾನ, ಅಂಧಕಾರ ಎರಡೂ ಒಂದೇ...'.

ಶಿವಶಕ್ತಿಯರ ಸಮರಸದಲ್ಲಿ ಮೂಡಿದ ಆದಿಮ ಮಿಂಚು ಅದು.

No comments:

Post a Comment