Friday, October 9, 2009

ನಾಸ್ಟಾಲಜಿಕ್‌ ಎಂದರೆ...

ಎಲ್ಲೋ ಬಹಳ ದೂರ ಉಳಿದಿರುತ್ತವೆ ಹಳೆ ದಿನಗಳು. ಆದರೂ ಆಗಾಗ್ಗೆ ಧಿಗ್ಗನೆ ತಾಜಾ ಗೊಳ್ಳುತ್ತವೆ. ಒಂಥರಾ ತೋಟದಲ್ಲಿ ಹೂತಿಟ್ಟ ಹುಳಿ ಮಾಗಿದ ಹಳೆ ವೈನ್‌ ಬಾಟಲಿಯಂತೆ. ಹಳೆಯ ಗೆಳೆಯರ ಎದುರು ನೆನಪಿನ ಔತಣ ಕೂಟದಲ್ಲಿ ಧಿಗ್ಗನೆ ಪ್ರತ್ಯಕ್ಷವಾಗುತ್ತವೆ. ಹೊಸ ಗ್ಲಾಸಿನಲ್ಲಿ ಹೊಸ ರೂಪದೊಂದಿಗೆ.
ಘಮಿಸುವ ನಗು ಒಗ್ಗರಣೆ, ಹದವಾಗಿ ಹುರಿದ ಸ್ವಮರುಕ, ಆತ್ಮ ಪ್ರಶಂಸೆಯ ಸಿಹಿ, ಸ್ವ ಭಂಜಕತೆಯ ಗಂಟಲು ಖಾರ....
ಆದರೆ `ನೆನಪಿನ ಗಣಿಯಿಂದ ಅಗೆದದ್ದಾರೂ ಏನು?'.....

1.
ಬೀಡಾಡಿ ನೆನಪುಗಳೇ ಹೀಗೆ
ವೃದ್ಧ ಮಾಂತ್ರಿಕರಂತೆ;
ಒಮ್ಮೆಲೇ ಕಲೆಯುತ್ತವೆ
ಯಾವುದೋ ಅಭೌತಿಕ ಆವಾಹನೆಯಂತೆ

ಬಲು ಸುಲಭ
ನವಿರು ನೆನಪಿನ ತೆಕ್ಕೆಗೆ ಜಾರುವುದು
ಹಿಡಿ ಹಿಡಿಯಾಗಿ ಜಾರಿ
ಕಾಲನ ಕಾಲು ನೇವರಿಸುವುದು

ಭಲೇ ರೋಮಾಂಚನವೊಡ್ಡಿ
ಬುಗ್ಗೆಯೆದ್ದು ಮೈದುಂಬುವ ನೆನಪಿನ `ಕಥೆ'ಗೆ
ಇತಿಹಾಸ ವ್ಯಂಗ್ಯವಾಡುತ್ತದೆ...

ನಡೆದದ್ದು,
ನಡೆಯಬಯಸಿದ್ದು,
ನಡೆಯದೇ ಇದ್ದದ್ದು...
ಎಲ್ಲವೂ ಹದವರಿಯುತ್ತವೆ
ಹೇಳುವವನ ಭಾವನೆ ಮುಕ್ಕಾಗದಿರೆ

2
ತುರಿಸಿಕೊಳ್ಳಲು ಹಳೆಯ ಗಾಯ
ಹೆಕ್ಕಿದಂತೆ
ಹುಡುಕುತ್ತಾನೆ ಮಾದೇಸನ ಪದವಾಡುವವನು,
ಎಲ್ಲಮ್ಮನ ಪದ ಹೇಳುವವನು
ಹಳೆಯ ಕಲೆಯಲ್ಲಿ ಹೊಸ ಕಥೆ;
ಆದರೆ
ಭಾವನೆ ಬಿಟ್ಟು
ಬರಿದೆ ಇತಿಹಾಸ ಹುಡುಕುವವನಿಗೆ
ಗಾಯವೂ ಇಲ್ಲ, ತುರಿಕೆಯೂ ಇಲ್ಲ,
ನೆನಪಿನ ಗುರುತು ಮೊದಲೇ ಇಲ್ಲ
ರೋಮಾಂಚನವಂತೂ
ಇಲ್ಲವೇ ಇಲ್ಲ

No comments:

Post a Comment