Wednesday, February 24, 2010

'ನಾರಾಯಣನಿಗೆ ಇಲೆಕ್ಟಾನಿಕ್ ಅಂಗಡಿವರು ಮೀಸೆ ಕತ್ತರಿಸಿದ್ದಾರೆ'......

'ನಾರಾಯಣನಿಗೆ ಇಲೆಕ್ಟಾನಿಕ್ ಅಂಗಡಿವರು ಮೀಸೆ ಕತ್ತರಿಸಿದ್ದಾರೆ'.....ಹೀಗೊಂದು ಕಾಗದ ಬಂದಿತ್ತು ನೋಡಿ ನನಗೆ. ಅದರಲ್ಲಿ 'ಇಲೆಕ್ಟ್ರಾನಿಕ್' ಎಂದು ಇರಲಿಲ್ಲ, 'ಇಲೆಕ್ಟಾನಿಕ್' ಎಂದೇ ಇತ್ತು, 'ಅಂಗಡಿಯವರು' ಎನ್ನುವದು 'ಅಂಗಡಿವರು' ಆಗಿತ್ತು ... ಸುಮಾರು 20 ವರ್ಷದ ಕೆಳಗೆ ಬಂದಿದ್ದ ಕಾಗದ ಅದು. ಕಾಗದ ಬರೆದಾತ ಬಾಲ್ಯ ಕಾಲದ ಗೆಳೆಯ. ಅದುವೇ ಅವನು ನನಗೆ ಬರೆದ ಮೊದಲ, ಕೊನೆಯ ಪತ್ರ. ನೆನಪಿನ ಪುಟದಲ್ಲಿ ಅವನ ಹೆಸರು ಎಂದೋ ಮಸುಕಾಗಿ ಹೋಗಿದೆ. ಎಷ್ಟೋ ಸಾರಿ ನನಗೆ ಅನಿಸಿದ್ದಿದೆ, ಕಡೇ ಪಕ್ಷ ಈ ನೆನಪುಗಳು ಎಂದು ಮಾಸುತ್ತವೆ, ಅವುಗಳ ಎಕ್ಸ್ಪೈರಿ ಡೇಟ್ ಯಾವತ್ತು ಅನ್ನೋದು ಏನಾದರೂ ಗೊತ್ತಾದರೆ ಅದರ ಮೇಲೆ ಕುಳಿತ ಕಸ ಕೊಡವಿ ಮತ್ತೊಂದಿಷ್ಟು ದಿನ ಜತನ ಮಾಡಬಹುದೇನೋ ಎಂದು. ಇರಲಿ ಬಿಡಿ, ಅಂದಹಾಗೆ ಕಾಗದ ಬರೆದ ಆ ನನ್ನ ಗೆಳೆಯನ ಹೆಸರು ಯೋಗೀಶ ಅಂತಲೋ ಅಥವಾ ಪ್ರಹ್ಲಾದ ಎಂದೋ ಇರಬೇಕು. ನಿಖರವಾಗಿ ಹೇಳಲಾರೆ. ಆತ ನನ್ನ ಬದುಕಿನ ಆವರಣವನ್ನು ಎಂದೂ ತಟ್ಟದ ಊರೊಂದರ ಒಂದು ಕಾಲದ ಗೆಳೆಯ ಅಂಥ ಹೇಳಬಹುದು.

ಹೌದು, ಆ ಊರು ನನ್ನನ್ನು ಎಂದಿಗೂ ತಟ್ಟಲಿಲ್ಲ. ಕೆಲ ಕಾಲ ನಾವು ಆ ಊರಿನಲ್ಲಿದ್ದೆವು ಎನ್ನುವುದಷ್ಟೇ ನಿಜ. ಅಲ್ಲಿಗೆ ಹೋದ ಮೊದಲ ದಿನದಿಂದಲೂ ಆ ಊರು ನನಗೆ ಸೇರಲಿಲ್ಲ. ವೈರುಧ್ಯ ಅಂದರೆ ಆ ಊರಿನ ಶಾಲೆಗೆ, ಅಲ್ಲಿನ ಸಹಪಾಠಿಗಳಿಗೆ ನಾನು ಬಹುವಾಗಿ ಸೇರಿಬಿಟ್ಟಿದ್ದೆ. ಬುದ್ಧಿವಂತ ಎನ್ನುವ ವಿಶೇಷಣ ಬೇರೆ! ನನ್ನ ಬಗ್ಗೆ ನನಗೆ ಸ್ವಲ್ಪ ಕೆಡುಕೆನಿಸಿದರೂ ನಿಮಗೆ ಒಂದು ವಿಷಯ ಹೇಳಲೇ ಬೇಕು, ಆ ನನ್ನ ಸಹಪಾಠಿಗಳಿಗೆ ನಾನು ಎಷ್ಟು ಹಿಡಿಸಿದ್ದೆ ಅಂದರೆ ಮುಂದೆ ಆ ಊರು ಬಿಟ್ಟು ದೂರದ ನಗರಕ್ಕೆ ಬಂದ ಮೇಲೂ ನನ್ನ ಶಾಲೆಯ ವಿಳಾಸವನ್ನು ಹೇಗೋ ಪತ್ತೆ ಮಾಡಿದ ಅವರೆಲ್ಲಾ ನನಗೆ ಕಾಗದವನ್ನು ಬರೆದೇ ಬರೆದರು... ಒಂದು ನೂರೈವತ್ತು ಇನ್ನೂರು ಕಾಗದಗಳಾದರೂ ಆಗ ನನಗೆ ಬಂದಿರಬಹುದು. ಮೇಲೆ ಹೇಳಿದ ಕಾಗದ ಸಹ ಹಾಗೇ ಬಂದಿದ್ದು. ಆದರೆ, ಆ ಊರು ನನಗೆ ಎಷ್ಟು ಹಿಡಿಸಿರಲಿಲ್ಲ ಎಂದರೆ ಹಾಗೆ ಬಂದ ಒಂದೇ ಒಂದು ಕಾಗದಕ್ಕೂ ನಾನು ಉತ್ತರಿಸಿರಲಿಲ್ಲ..

ನಮ್ಮ ತಂದೆಯ ವರ್ಗವಾದ ಕಾರಣ ನಾವು ಆ ಊರಿಗೆ ಹೋಗಿ ನೆಲೆಸಿದ್ದೆವು. ಆ ಊರಿಗೆ ಹೋದ ಮೊದಲನೇ ದಿನದಿಂದಲೂ ನಾನು ಕಾತರಿಸಿದ್ದು ಆ ಊರನ್ನು ಬಿಡುವ ಕೊನೆಯ ದಿನಕ್ಕಾಗಿ ಎನ್ನಬಹುದು. ಅತ್ತ ಹಳ್ಳಿಯೂ ಅಲ್ಲದ ಪಟ್ಟಣವೂ ಅಲ್ಲದ ಊರು ಅದು.

ಅದೇಕೋ ತೀರಾ ಎಳೆವೆಯಲ್ಲಿ ನನ್ನ ಮನಸ್ಸಿಗೆ ಹಳ್ಳಿಗಳು ಹಿಡಿಸಿರಲೇ ಇಲ್ಲ. ಅದು ಅಕಾರಣವೋ, ಸಕಾರಣವೋ ಗೊತ್ತಿಲ್ಲ. ಈಗ ಹಿಂತಿರುಗಿ ನೋಡಿದರೆ ಬಹುಶಃ ನನ್ನನ್ನು ಹಳ್ಳಿಗಳಿಗೆ ರಿಲೇಟ್ ಮಾಡಿಕೊಳ್ಳುವ ಬದುಕಿನ ಯಾವೊಂದು ಆವರಣವೂ ಆ ಹೊತ್ತು ನನ್ನಲ್ಲಿ ಇರಲಿಲ್ಲ ಅನಿಸುತ್ತೆ. ಸಕರ್ಾರಿ ನೌಕರಿಯ ವಗರ್ಾವಗರ್ಿಗೆ ಸಿಕ್ಕು ಯಾವುದೋ ಒಂದು ಹಳ್ಳಿಗೆ ಹೋದ ಕುಟುಂಬ ನಮ್ಮದು. ಆಗಿನ ನನ್ನ ಮನಸ್ಥಿತಿ ಅನುಸರಿಸಿ ಹೇಳುವುದಾದರೆ ನಾನು ಹುಟ್ಟಿದ ಪಟ್ಟಣದಿಂದ ಕನಸಿದ ಬೆಂಗಳೂರಿಗೆ ಸಾಗಿ ಬರುವ ಹಾದಿಯಲ್ಲಿ ಅನಿವಾರ್ಯವಾಗಿ ಬಂದ ಸ್ಟಾಪ್ ಅದು. ಬೇಕೆಂದರೂ, ಬೇಡವೆಂದರೂ ಕೆಲ ಹೊತ್ತು ಇದ್ದು ಸಾಗಲೇ ಬೇಕಾದ ಇಷ್ಟವಾಗದ ತಂಗುದಾಣ. ಬಹುಶಃ ಈ ಎಲ್ಲ ಕಾರಣಗಳಿಂದಲೇ ಇರಬಹುದು ಇಂದು ನಾನು ಹಳ್ಳಿಗಳ ಬಗ್ಗೆ ಮಾತನಾಡುವಾಗ ಹಳ್ಳಿಯ ಬದುಕಿನ ಚಿತ್ರಣ ಕಂಡೆ ಎಂದಷ್ಟೇ ಧೈರ್ಯವಾಗಿ ಹೇಳಬಲ್ಲೆನೇ ಹೊರತು, ಹಳ್ಳಿಯ ಬದುಕನ್ನೇ ಕಂಡೆ ಎನ್ನುವ ಅಪ್ರಾಮಾಣಿಕತೆ ತೋರಲಾರೆ. ಅಷ್ಟೇ ಅಲ್ಲ ನನಗೆ ಭಾರತದ ಹಳ್ಳಿಗಳ ಆತ್ಮವೇನಾದರೂ ಅಲ್ಪಸ್ವಲ್ಪ ದಕ್ಕಿದ್ದರೆ ಅದು ನಗರಗಳಲ್ಲಿ ಸಿಕ್ಕ ಕೆಲ ಪ್ರಫುಲ್ಲ ದೇಸಿ ಮನಸ್ಸುಗಳಿಂದಲೇ ಹೊರತು ನನ್ನ ಬಾಲ್ಯಕಾಲದ ಹಳ್ಳಿ ವಾಸ್ತವ್ಯದಿಂದ ಅಲ್ಲ.

ನಮ್ಮ ಕುಟುಂಬ ಕೆಲಕಾಲ ಆ ಹಳ್ಳಿಯಲ್ಲೇ ಇದ್ದರೂ ನನ್ನ ಬದುಕ ಸುತ್ತವರೆದಿದ್ದು ಮಾತ್ರ ಹಳ್ಳಿಯ ಪರಿಸರವಲ್ಲ; ಬದಲಿಗೆ ಟಿವಿ, ಪೇಪರ್, ಮ್ಯಾಗಝೀನ್ಸ್ ಮತ್ತು ಪುಸ್ತಕಗಳು. ಅವುಗಳ ಮೂಲಕ ನನ್ನ ಮನೋಭಿತ್ತಿಯಲ್ಲಿ ರೂಪು ತಳೆದ ಒಂದು "ಸಿಂಥೆಟಿಕ್' ಪ್ರಪಂಚ. ಇನ್ನೂ ಮುಂದುವರೆದು ಹೇಳುವುದಾದರೆ ಮಾಧ್ಯಮಗಳ ಮೂಲಕ ಕಂಗಳಲ್ಲಿ ಬೆರಗು ಹುಟ್ಟಿಸಿ, ಲೈಫ್ಸ್ಟೈಲ್ ಬಗೆಗೆ ಎಳೆವೆಯಲ್ಲೇ ಕಾನ್ಷಿಯಸ್ ಮಾಡಿದ ಕನ್ಸೂಮರಿಸಂನ ಚಿನ್ನಾರಿ ಕನಸುಗಳ ಪ್ರಪಂಚ.

ಇತ್ತೀಚೆಗೆ ಗೆಳೆಯ ಸಂತೋಷನೊಡನೆ ಮಾತನಾಡುವಾಗ ಇದನ್ನೇ ಹೇಳಿದ್ದೆ. ಕನ್ಸೂಮರಿಸಂ ಪ್ರವರ್ತಕ ಕಂಪೆನಿಗಳು ಹೇಗೆ ಯಾವುದೇ ಸಕರ್ಾರಕ್ಕಿಂತ ಚೆನ್ನಾಗಿ ಮೀಡಿಯಾಗಳನ್ನು ಬಳಸಿ ಅನೇಕ ತಲೆಮಾರುಗಳ ತಲೆ ಬೋಳಿಸಿ ತಾವು ಉತ್ಪಾದಿಸುವ ವಸ್ತುಗಳ ನೇರಕ್ಕೆ ನಮ್ಮಲ್ಲಿ ಕನಸು ಬಿತ್ತಿ ಬಿಟ್ಟವಲ್ಲಾ ಎಂದು. ಇರಲಿ, ಆ ಬಗ್ಗೆ ಇನ್ನೊಮ್ಮೆ ಸುದೀರ್ಘ ಬರೆಯುವ ಇರಾದೆ ಇದೆ. ಈಗ ಮತ್ತೆ ಆ ಊರಿನ ನೆನಪಿಗೆ ಬರುತ್ತೇನೆ.

ನಾನು ಆ ಹಳ್ಳಿಯಲ್ಲಿ ಇದ್ದಷ್ಟೂ ದಿನ ಒಂದೇ ಒಂದು ದಿನಕ್ಕೂ ಒಂದು ಕೋಗಿಲೆಯ ಕೂಗನ್ನಾಗಲಿ, ಹಕ್ಕಿಗಳ ಕಲರವವನ್ನಾಗಲಿ ಕಿವಿ ಆನಿಸಿ ಕೇಳಿದ ನೆನಪೇ ಇಲ್ಲ. ನಮಗೆ ಒಂದು ಪ್ರಪಂಚ ಅಥವಾ ಪರಿಸರದ ಬಗ್ಗೆ ಬೇಸರ ಹುಟ್ಟಿದರೆ ಹೇಗೆ ನಾವು ಅದರಿಂದ ವಿಮುಖರಾಗುತ್ತೇವೆ, ಹೇಗೆ ಅದನ್ನು ನಮ್ಮೊಳಗೆ ಬಿಟ್ಟುಕೊಳ್ಳದೆ ಇರುತ್ತೇವೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ... ಆಗ ದೂರದರ್ಶನದಲ್ಲಿ ಪ್ರತಿ ಶುಕ್ರವಾರ ಪ್ರಣಯ್ ರಾಯ್ರ "ವಲ್ಡರ್್ ದಿಸ್ ವೀಕ್' ಕಾರ್ಯಕ್ರಮ ಬರುತ್ತಿತ್ತು. ಪ್ರಣಯ್ ಈಗಲೂ ಎನ್ಡಿಟಿವಿಯಲ್ಲಿ ಅವರ ಆಗಿನ ಬುಲೆಟಿನ್ಗಳ ಕ್ಲಿಪಿಂಗ್ಸ್ ಬಳಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಆಗ ಡಿಡಿಯಲ್ಲಿ ಭಿತ್ತರವಾಗುತ್ತಿದ್ದ 'ಸುರಭಿ', 'ವಲ್ಡರ್್ ದಿಸ್ ವೀಕ್', 'ರಂಗೋಲಿ' ಇವೆಲ್ಲಾ ಜಗತ್ತಿನೆಡೆಗಿನ ನಮ್ಮ ಬೆಳಕಿಂಡಿಗಳೇ ಆಗಿದ್ದವು. ಇರಲಿ, ಆಲಿಸಿದ್ದರೆ ಆ ಹಳ್ಳಿಯಲ್ಲಿ ಕೋಗಿಲೆ ಕೂಗು ಕೇಳಲಿಕ್ಕೆ ಭರಪೂರ ಅವಕಾಶ ಇತ್ತು. ಕೋಗಿಲೆ ಕೂಗು ಕೇಳುತ್ತಲೇ ಒಂದಿಷ್ಟು ಸ್ವರಗಂಧವನ್ನೂ ಪಡೆಯಬಹುದಿತ್ತೇನೋ.. ಆದರೆ ನನಗೆ ಕೋಗಿಲೆ ಕೂಗಿಗಿಂತ ಪ್ರಣಯ್ರ ಇಂಗ್ಲಿಷ್ನಲ್ಲೇ ಆಸಕ್ತಿ... ತಪ್ಪೋ ಸರಿಯೋ ಒಂದು ಮಟ್ಟಕ್ಕಂತೂ ಇಂಗ್ಲಿಷ್ ಓದುತ್ತಿದ್ದೆ. ಆದರೆ ಆಗಿನ್ನೂ ಆ ಭಾಷೆಯನ್ನು ಅಥರ್ೈಸಿಕೊಳ್ಳುವ ಲಯ ನನಗೆ ದಕ್ಕಿರಲಿಲ್ಲ. "ವಲ್ಡರ್್ ಆಫ್ ಸ್ಪೋಟ್ರ್ಸ' ಅನ್ನು ಕ್ರೀಡಾ ಜಗತ್ತು ಎಂದು ಅಥರ್ೈಸದೆ 'ಜಗತ್ತೇ ಕ್ರೀಡೆ' ಎಂದೆಲ್ಲಾ 'ವಿಫುಲವಾಗಿ' ಅರ್ಥ ಮಾಡಿಕೊಳ್ಳುವಷ್ಟು ಭಾಷಾ ಜ್ಞಾನ! ಒಮ್ಮೆ ಇದನ್ನೇ ಅಪ್ಪನ ಮುಂದೆಯೂ ವಾದಿಸಿ ಉಗಿಸಿಕೊಂಡಿದ್ದೆ.. ಹೋಗಲಿ ಬಿಡಿ, ಅದೇನು ಅಂಥ ದಡ್ಡತನ ಅಲ್ಲ. ಆಗೆಲ್ಲಾ ಬೆಂಗಳೂರಿನ ಬಹುತೇಕ ಕಾನ್ವೆಂಟ್ ಶಾಲಾ ಮಕ್ಕಳ ಇಂಗ್ಲಿಷ್ ಸಹ, "ಮಿಸ್ ಹಿ ಈಸ್ ಪಿಂಚಿಂಗ್ ಮಿಸ್' ಎನ್ನುವುದನ್ನು ಮೀರಿರಲಿಲ್ಲ.

ಇಂಥ ಬೇಡದ ಊರಿನಲ್ಲಿ, ತಿರಸ್ಕಾರದ ಮನಸ್ಥಿತಿಯಲ್ಲಿ ಇದ್ದ ನನಗೆ ಒಬ್ಬ ಗೆಳೆಯ ಸಿಕ್ಕ. ಆ ಕಾಲಘಟ್ಟದ ನನ್ನ ಆತ್ಮೀಯ ಗೆಳೆಯ ಎನ್ನಲು ಅಡ್ಡಿಯಿಲ್ಲ. ನಾರಾಯಣ ಅವನ ಹೆಸರು. ಬೇಡದ ಊರಲ್ಲಿ ಸಾಕು ಸಾಕೆನಿಸುವಷ್ಟೇ ಇದ್ದ ಗೆಳೆಯರಲ್ಲಿ ಇವನು ಆತ್ಮೀಯ. ಆ ಊರಿನಲ್ಲಿ ಶಾಲೆಗೆ ಹೋದ ಮೊದಲ ದಿನವೇ ನಾನು ಈ ನಾರಾಯಣನನ್ನು ಕಂಡಿದ್ದೆ. ಶಾಲೆಯ ಬೆಳಗಿನ ಬೆಲ್ ಹೊಡೆದಾಗ ಪ್ರಾರ್ಥನೆಗೆಂದು ಶಾಲಾ ಮೈದಾನದಲ್ಲಿ ನೆರೆದಿದ್ದ ಹುಡುಗರ ಸಾಲನ್ನು ಈತ ಸರಿ ಮಾಡುತ್ತಿದ್ದ. ಸಾಲು ಡೊಂಕಾಗದಂತೆ ಮುತುವಜರ್ಿವಹಿಸಿ, ವಿದ್ಯಾಥರ್ಿಗಳ ನಡುವೆ ಸಮಾನ ಅಂತರ ಇರುವಂತೆ ಭುಜದ ಮೇಲೆ ಕೈ ಇರಿಸಿ ಅಳತೆ ತೆಗೆದುಕೊಳ್ಳಲು ಹೇಳಿ ನಿಲ್ಲಿಸುತ್ತಿದ್ದ. ವಯಸ್ಸು, ದೇಹ ಎರಡರಲ್ಲೂ ದೊಡ್ಡವನಾಗಿದ್ದ ಅವನನ್ನು ಮೊದಲಿಗೆ ನೋಡಿ ನಾನು ಯಾರೋ ಏಳನೇ ಕ್ಲಾಸಿನ ಹುಡುಗನೋ ಅಥವಾ ಶಾಲೆಯಲ್ಲಿ ಕೆಲಸಕ್ಕೆಂದು ಇಟ್ಟುಕೊಂಡಿರುವ ಅಟೆಂಡರ್ ಕೆಲಸದ ಹುಡುಗನೋ ಇರಬೇಕು ಅಂದುಕೊಂಡಿದ್ದೆ.

ಪ್ರಾರ್ಥನೆ ಅಂದಿದ್ದಕ್ಕೆ ನೆನಪಾಯಿತು ನೊಡಿ, ಅಂದು ಮೊದಲ ದಿನವೇ ಪ್ರಾರ್ಥನೆ ನಡೆವಾಗ ಬೇರೆ ಬೇರೆ ಸಾಲಿನಲ್ಲಿ ನಿಂತಿದ್ದ ಮೂರ್ನಾಲ್ಕು ಹುಡುಗ ಹುಡುಗಿಯರು ಧಬಾರ್, ಧಭಾರ್ ಎಂದು ಬಿದ್ದಿ ದ್ದರು. ಅದೊಂದು ನಿತ್ಯ ಕರ್ಮವಾಗಿದ್ದ ಕಾರಣವೇ ಇರಬೇಕು, ಮೇಷ್ಟ್ರುಗಳು ಸಹ ತಲೆ ಕೆಡೆಸಿಕೊಳ್ಳದೆ ಸುಮ್ಮನೆ ಇದ್ದರು. "ಜಯ ಭಾರತ ಜನನಿಯ ತನುಜಾತೆ'ಯನ್ನು ರಾಗವಾಗಿ ಹಾಡಿ, "ಯಾಕುಂದೇಂದು ತುಷಾರಹಾರಧವಳಾ' ಹೇಳಿ ರಾಷ್ಟ್ರಗೀತೆ ಮುಗಿಸುವ ಹೊತ್ತಿಗೆ ಹುಡುಗ ಹುಡುಗಿಯರು ಹೀಗೆ ಅಲ್ಲಲ್ಲೇ ಧಬಾರನೇ ಬೀಳುವುದು ಸಾಮಾನ್ಯವಾಗಿತ್ತು. ಈ ದೃಶ್ಯ ನಾನು ಹೈಸ್ಕೂಲ್ ಮುಗಿಸುವವರೆಗೂ ಮುಂದುವರೆದೇ ಇತ್ತು ಬಿಡಿ. ಈಗಲೂ ಇರಬಹುದೇನೋ! ಹಳ್ಳಿ ಹೈಕಳು, ಮೆಟ್ರೋ ಮಕ್ಕಳು ಎನ್ನುವ ಭೇದವಿಲ್ಲದೆ ಹೀಗೆ ಬೆಳಗಿನ ಹೊತ್ತು ಶಾಲಾ ಮಕ್ಕಳು ಕುಸಿಯಲು ಕಾರಣ ಬರೋಬ್ಬರಿ 20 ನಿಮಿಷ ಮೀರಿ ಇರುತ್ತಿದ್ದ ಪ್ರಾರ್ಥನೆ... ಇರಲಿ ಈಗ ನಾರಾಯಣನ ಕಥೆಗೆ ಬರೋಣ.

ಅವತ್ತು ಮೊದಲ ದಿನ ಅವನನ್ನು ನೋಡಿದೆನಲ್ಲಾ, ಅನಂತರ ಒಂದು ಮಜಾ ವಿಷಯ ನಡೆಯಿತು. ನಾನು ಎಷ್ಟನೇ ಕ್ಲಾಸಿಗೆ ಸೇರಿದ್ದೇನೆ ಎನ್ನುವುದನ್ನು ಸರಿಯಾಗಿ ವಿಚಾರಿಸಿಕೊಳ್ಳದ ಮೇಷ್ಟ್ರೊಬ್ಬರು ನನ್ನನ್ನು ಮತ್ತಾವುದೋ ತರಗತಿಯ ಸಾಲಿನಲ್ಲಿ ನಿಲ್ಲಿಸಿಬಿಟ್ಟಿದ್ದರು. ಪ್ರಾರ್ಥನೆ ಮುಗಿದ ನಂತರ ಅದೇ ಸಾಲಿನಲ್ಲಿ ಸಾಗಿ ಕ್ಲಾಸ್ ರೂಮಿನಲ್ಲಿ ಕುಳಿತೆ. ಐದು ಹತ್ತು ನಿಮಿಷ ನಂತರ ಮೇಷ್ಟ್ರು ಸಹ ಬಂದರು. ಅಟೆನ್ಡೆನ್ಸ್ ಹಾಕಿದರು. ಅದರಲ್ಲಿ ನನ್ನ ಹೆಸರು ಇರಲಿಲ್ಲ. ನಾನು ಆಗಷ್ಟೇ ಶಾಲೆಗೆ ಸೇರಿದ್ದ ಕಾರಣ ನನ್ನ ಹೆಸರು ರೆಜಿಸ್ಟರ್ನಲ್ಲಿ ಇಲ್ಲ ಎಂದುಕೊಂಡೆ. ನಮ್ಮ ತಂದೆಯ "ಸಕರ್ಾರಿ ವಲಸೆಯ' ಫಲಾನುಭವಿಯಾಗಿದ್ದ ಕಾರಣ ಅಷ್ಟು ಹೊತ್ತಿಗಾಗಲೇ ನನಗೆ ಎರಡು ಶಾಲೆ ನೋಡಿದ್ದ ಅನುಭವ ಇತ್ತು.

ರೆಜಿಸ್ಟರ್ ಮುಗುಚಿ ಹಾಕಿದ ಮೇಷ್ಟ್ರು ಬೋಡರ್್ ಮೇಲೆ ಸೀಮೆಸುಣ್ಣವನ್ನು ಕುಟ್ಟುವಂತೆ ಮಾಡುತ್ತಾ ಪಟಪಟನೆ ಪಾಠದ ಹೆಸರು, ತರಗತಿ ಎಲ್ಲವೂ ಬರೆದರು. ಆಗ ತಿಳಿಯಿತು ನೋಡಿ ಅದು ನಾನು ಓದಬೇಕಿದ್ದ ತರಗತಿ ಅಲ್ಲ ಎಂದು. ಕೂಡಲೇ ಅಧ್ಯಾಪಕರಿಗೆ ತಡವರಿಸದೆ ನನ್ನ ಪುರಾಣವೆಲ್ಲಾ ಹೇಳಿಕೊಂಡೆ. ಜವಾನನನ್ನು ಕರೆದ ಅವರು ನಾನು ಹೋಗ ಬೇಕಿದ್ದ ತರಗತಿಯ ಕೊಠಡಿಗೆ ಬಿಡುವಂತೆ ಹೇಳಿದರು. ಆತ ನನ್ನನ್ನು ಕರೆದೊಯ್ದು ಮತ್ತೊಂದು ಕೊಠಡಿಗೆ ಬಿಟ್ಟ. ಅದರ ಒಳಗೆ ಯಾರೂ ಅಧ್ಯಾಪಕರು ಕಾಣಲಿಲ್ಲ. ಸ್ವಲ್ಪ ಮುಜುಗರದಿಂದಲೇ ಹಿಂದು ಮುಂದು ಮಾಡಿ ಒಳಗೆ ಹೆಜ್ಜೆ ಇಟ್ಟೆ, ಅಲ್ಲಿ ನೋಡಿದರೆ ಮತ್ತದೇ ದೊಡ್ಡ ಹುಡುಗ. ಅಲ್ಲಿದ್ದ ಹುಡುಗರೆಲ್ಲಾ ನನ್ನ ವಯಸ್ಸಿನವರೇ ಆದರೂ ಇವನೊಬ್ಬ ಮಾತ್ರ ಗಢವನ ಹಾಗೆ ಇದ್ದ. ಮಾನಿಟರ್ ಆಗಿದ್ದ ಕಾರಣ ಜಲಬಾಧೆ ತೀರಿಸಲು ಹೋಗಿದ್ದ ಮೇಷ್ಟ್ರ ಅನುಪಸ್ಥಿತಿ ತುಂಬಿದ್ದ ಎನ್ನುವುದು ಆಮೇಲೆ ಅರಿವಿಗೆ ಬಂತು ಬಿಡಿ. ಮೇಷ್ಟ್ರು ಬಂದ ಮೇಲೆ ಅವನೇ ಅವರಿಗೆ "ಸಾರ್, ಹೊಸ ಹುಡುಗ ಬಂದಿದ್ದಾನೆ' ಎಂದೂ ಹೇಳಿದ. ನನ್ನ ಪೂವರ್ಾಪರ ಕೇಳಿಕೊಂಡ ಮೇಷ್ಟ್ರು ಮುಂದಿನ ಸಾಲುಗಳು ತುಂಬಿದ್ದ ಕಾರಣ ಆ ದೊಡ್ಡ ಹುಡುಗನ ಪಕ್ಕವೇ ಹಿಂದೆ ಕೂರಲು ಹೇಳಿದರು. ಆಮೇಲೆ ಒಂದಷ್ಟು ಹೊತ್ತು ಪಾಠ ಮಾಡಿ, ಏನೋ ಬರೆಯಲು ಕೊಟ್ಟು ಹೊರಗೆ ಮೆಟ್ಟಿಲ ಮೇಲೆ ನಿಂತು ಯಾರೊಟ್ಟಿಗೋ ಹರಟ ತೊಡಗಿದರು.

ಆಗ ಸಮಯ ನೋಡಿ ಆ ದೊಡ್ಡ ಹುಡುಗ ಪಿಸುಗುಟ್ಟುತ್ತಾ ಕೇಳಿದ, 'ಅಪ್ಪಿ, ನಿನ್ನ ಹೆಸರೇನು?' ಅದುವರೆಗೆ ಗಡವನಂತೆ ಕಾಣುತ್ತಿದ್ದ ಹುಡುಗ ಅನಿರೀಕ್ಷಿತ ಪ್ರಶ್ನೆ ಮೂಲಕ ಸ್ನೇಹಕ್ಕೆ ಶುಭಾರಂಭ ಮಾಡಿದ್ದ. ಅಲ್ಲಿಂದಾಚೆಗೆ ಆ ಹಳ್ಳಿಯಲ್ಲಿ ಇದ್ದಷ್ಟೂ ದಿನ 'ಅಪ್ಪಿ, ಅಮ್ಮಿ' ನನ್ನ ಕಿವಿಗೆ ಒಗ್ಗಿ ಹೋಯಿತು. ಹೀಗೆ ಹೆಸರು ಕೇಳಿದವನು ಮುಂದುವರೆದು ನನ್ನ ಹುಟ್ಟೂರು, ಅಪ್ಪನ ಕೆಲಸ ಎಲ್ಲವೂ ವಿಚಾರಿಸಿಕೊಂಡ. ಆದರೆ ತನ್ನ ಬಗ್ಗೆ ಮಾತ್ರ ಹೆಚ್ಚು ಹೇಳದೆ ಕೇವಲ ಹೆಸರು ಮಾತ್ರ ಹೇಳಿದ. ಅವನ ತಂದೆ, ತಾಯಿ ಬಗ್ಗೆ ಏನೂ ಹೇಳಲಿಲ್ಲ. ವಯಸ್ಸಿನಲ್ಲಿ ಬರೋಬ್ಬರಿ ನಾಲ್ಕು ವರ್ಷ ದೊಡ್ಡವನಿದ್ದ. ನನ್ನ ಅಣ್ಣನ ವಾರಿಗೆಯವನು. ನಾರಾಯಣನ ತಂದೆ, ತಾಯಿ ತೀರಿಕೊಂಡಿದ್ದರು. ಹಾಗಾಗಿ ಅಣ್ಣನ ಮನೆಯಲ್ಲಿದ್ದ. ತಂದೆ ತಾಯಿ ಹೋದ ನಂತರ ಅಣ್ಣಂದಿರು, ಅಕ್ಕಂದಿರು, ಸಂಬಂಧಿಕರ ಮನೆಹೀಗೆ ಬೇರೆ ಬೇರೆ ಊರಿನಲ್ಲಿ ಮೂರ್ನಾಲ್ಕು ವರ್ಷ ಇದ್ದನಂತೆ. ಹಾಗಾಗಿಯೇ ನಾಲ್ಕು ವರ್ಷ ಶಾಲೆಯಿಂದಲೂ ದೂರವಿದ್ದ ಎಂದು ಮುಂದೆ ಕೆಲ ದಿನದಲ್ಲಿ ಹೇಳಿಕೊಂಡ. ಅವನ ಅಣ್ಣಂದಿರಲ್ಲಿ ಒಬ್ಬರು ಮುತುವಜರ್ಿ ವಹಿಸಿದ ಕಾರಣ ಮತ್ತೆ ಶಾಲೆಯತ್ತ ಮುಖ ಮಾಡಿದ್ದ.

ಅರ್ಧದಲ್ಲಿಯೇ ಶಾಲೆ ಬಿಟ್ಟಿದ್ದ ಪರಿಣಾಮ ಮತ್ತದೇ ತರಗತಿಗೆ ಸೇರಿದ್ದ. ಪರಿಣಾಮ ನನ್ನ ಅಣ್ಣನ ಜೊತೆ ಇರಬೇಕಾದವನು ನನ್ನ ಜೊತೆಗಿದ್ದ. ನನ್ನ ಅಣ್ಣನ ಗೆಳೆಯರನೇಕರು ಇವನನ್ನು ನೋಡಿ ನಿನ್ನ ತಮ್ಮನ ಫ್ರೆಂಡು ನಂ ಜೊತೆ ಇರಬೇಕಿತ್ತು, ಆದ್ರೆ ಸ್ಕೂಲ್ ಬಿಟ್ಟ ಕಾರಣ ಈಗಲೂ ಅದೇ ತರಗತಿಯಲ್ಲೇ ಇದ್ದಾನೆ ಎಂದು ಆಡಿಕೊಳ್ಳುತ್ತಿದ್ದರಂತೆ. ಅದನ್ನು ಅಣನ್ಣೇ ಹೇಳಿದ್ದ. ಆದರೆ ನನಗಂತೂ ನಾರಾಯಣ ಸಿಕ್ಕಿದ್ದು ಖುಷಿಯೇ ಆಗಿತ್ತು. ನನ್ನ ವಯಸ್ಸಿನ ಹುಡುಗರು ನನಗೆ ಯಾವತ್ತೂ ಕಿರಿಕಿರಿ ಅನಿಸುತ್ತಿದ್ದರು. ವರ್ತನೆಯಲ್ಲಿ ಅವರು ನನಗಿಂತ ತುಂಬಾ ಚಿಕ್ಕವರಂತೆ ಭಾಸವಾಗುತ್ತಿತ್ತು. ಬಹುಶಃ ನಾನು ನನ್ನ ವಯಸ್ಸು ಮೀರಿ ಆಲೋಚಿಸುತ್ತಿದ್ದುದು, ಓದಿಕೊಂಡಿದ್ದುದು ಇದಕ್ಕೆ ಕಾರಣವಿರಬಹುದು. ಹಾಗಾಗಿ ನಾರಾಯಣ ನನಗೆ ಹತ್ತಿರವಾದ, ಅವನಿಗೂ ಅವನ ವಯಸ್ಸಿಗೆ ತಕ್ಕಂತೆ ಯೋಚಿಸುವ ಮನಸ್ಸೊಂದು ಬೇಕಿತ್ತು. ಪ್ರಪಂಚದ ಬಗ್ಗೆ ಅವನಿಗಿದ್ದ ವಿಪರೀತ ಕುತೂಹಲವನ್ನು ತಣಿಸುವ ಜೊತೆಗಾರರು ಬೇಕಿತ್ತು. ಅವನ ವಯಸ್ಸಿಗಿಂತ ಹಿಂದಿನ ತರಗತಿಯಲ್ಲಿ ಇದ್ದುದರಿಂದ ಸಹಜವಾಗಿಯೇ ಅವನಿಗೆ ತರಗತಿಯ ಪಾಠ, ಲೆಕ್ಕ ಬೇಸರ ಹುಟ್ಟಿಸುತ್ತಿತ್ತು. ತರಗತಿಯಲ್ಲಿ ಓದು, ಬರಹವನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತಿದ್ದ. ಆದರೂ ಅವನಿಗೆ ಶಹಭಾಷ್ಗಿರಿ ಏನೂ ಸಿಗುತ್ತಿರಲಿಲ್ಲ. ಕಾರಣ ಮತ್ತದೇ - ವಯಸ್ಸು. ನಾನು ಅವನಿಗಿಂತಲೂ ಬೇಗ ಓದು ಬರಹ ಮುಗಿಸುತ್ತಿದ್ದೆ. ಅವನಿಗಿಂತ ಸ್ಪಷ್ಟವಾಗಿ ಓದುತ್ತಿದ್ದೆ. ಹಾಗಾಗಿ ಅವನಿಗೆ ನಾನು ಕುತೂಹಲಕಾರಿಯಾಗಿಯೂ, ಸವಾಲಾಗಿಯೂ ಕಾಣತೊಡಗಿದ್ದೆ. ಅಡೊಲೊಸೆನ್ಸ್ ಸಮೀಪವಿದ್ದ ಅವನ ತವಕ ತಲ್ಲಣಗಳನ್ನು ಹೊರತು ಪಡಿಸಿದರೆ ಉಳಿದಂತೆ ಪಠ್ಯ, ಪಠ್ಯೇತರ ವಿಷಯಗಳಲ್ಲಿ ನನ್ನ ಬುದ್ಧಿಮತ್ತೆ ಅವನಿಗೆ ಹಿಡಿಸಿತ್ತು.

ಸಮಯ ಸರಿಯಿತು, ಪರೀಕ್ಷೆಗಳು ಮುಗಿದು ಮೈದಾನಕ್ಕೆ ಬೇಸಿಗೆ ಇಳಿಯಿತು. ತಾತ, ಅಜ್ಜಿ ಊರು, ಕಸಿನ್ಸ್ಗಳೊಡನೆ ಕಾರುಬಾರು ಎಲ್ಲವೂ ಸರಸರನೆ ಕಳೆಯಿತು. ಕಡೆಗೆ ಬೇಡ ಬೇಡವೆನಿಸಿದರೂ ಶಾಲೆಯ ಬಾಗಿಲು ತೆಗೆದೇ ತೆಗೆಯಿತು. ಆದರೆ ಈ ಬಾರಿ ನಾರಾಯಣ ಮತ್ತು ನಾನು ಒಂದೇ ಸೆಕ್ಷನ್ನಲ್ಲಿ ಇರಲಿಲ್ಲ. ಕಂಬೈಂಡ್ ಕ್ಲಾಸ್ ಆದಾಗ ಮಾತ್ರ ಒಟ್ಟಿಗೆ ಸೇರುತ್ತಿದ್ದೆವು. ಆಗೆಲ್ಲಾ ಅವನು ನನಗಾಗಿ ಜಾಗ ಹಿಡಿದಿಟ್ಟಿರುತ್ತಿದ್ದ. ಉಳಿದಂತೆ ಬೆಲ್ ಹೊಡೆಯುವುದಕ್ಕೂ ಮುನ್ನ ಮತ್ತು ಸಂಜೆ ಅಟ ಆಡಲು ಬಿಟ್ಟಾಗ ಮಾತ್ರ ಹರಟೆ ಹೊಡೆಯಲು ಸಮಯ ಸಿಗುತ್ತಿತ್ತು. ಹೀಗಿರುವಾಗ ನಾರಾಯಣನಿಗೆ ಒಂದು ದಿನ ಅವನ ಕ್ಲಾಸ್ ಟೀಚರ್, "ನಾರಾಯಣ ಇನ್ನು ಮೇಲೆ ನೀನು ಪ್ಯಾಂಟ್ ಹಾಕಿಕೊಂಡು ಬಾ' ಅಂದರಂತೆ. ಅದಾದ ಮೇಲೆ ಅವನು ಯಾವತ್ತೂ ನಿಕ್ಕರ್ ಹಾಕಿಕೊಂಡು ಶಾಲೆಗೆ ಬರಲೇ ಇಲ್ಲ. ವರ್ಷವಿಡೀ ತನ್ನ ಬಳಿ ಇದ್ದ ಎರಡೇ ಎರಡು ಪ್ಯಾಂಟ್ ಹಾಕಿದ್ದ. ಅದಾಗಲೇ ಅವನು ಎತ್ತರದಲ್ಲಿ ಮೇಷ್ಟ್ರುಗಳ ಸಮಕ್ಕೆ ಇದ್ದ. ಕೆಲವರಿಗಿನ್ನ ಉದ್ದವೇ ಇದ್ದ. ಗುಂಗರು ಕೂದಲು, ಚಿಗುರು ಮೀಸೆಯಿದ್ದ ಆಕರ್ಷಕ ಮುಖ.

ಈ ನಡುವೆ ಕೆಲ ಹುಡುಗರು ನನಗೆ ಅವನ ಬಗ್ಗೆ ವಿಪರೀತ ಕಂಪ್ಲೇಂಟ್ ಹೇಳಲು ಶುರು ಮಾಡಿದರು. ಮತ್ತೆ ಕೆಲವರು ಅವನನ್ನು ವಿಪರೀತವಾಗಿ ಹಚ್ಚಿಕೊಂಡರು. ನಾರಾಯಣ ಪೋಲಿ ಆಗಿದ್ದಾನೆ, ಕ್ಲಾಸ್ಗೆ ಚಕ್ಕರ್ ಹೊಡೆಯುತ್ತಾನೆ ಎನ್ನುವುದು ಅವನ ಬಗ್ಗೆ ಕಂಪ್ಲೇಂಟ್ ಹೇಳುತ್ತಿದ್ದವರ ಮಾತಾಗಿತ್ತು.. ಅವರ ಕಣ್ಣಿಗೆ ನಾರಾಯಣ ಪೋಲಿ ಆಗಲು ಕಾರಣ ವಿಪರೀತ ಎನಿಸುವಷ್ಟು ಸಿನಿಮಾ ನೋಡುತ್ತಿದ್ದುದು, ವಿಪರೀತ ಸ್ಟೈಲ್ ಮಾಡುತ್ತಿದ್ದುದು, ಊರೂರು ಸುತ್ತುತ್ತಿದ್ದುದು, ಎಲ್ಲಕ್ಕಿಂತ ಹೆಚ್ಚಾಗಿ ಹುಡುಗಿಯರ ಅಂದ ಚೆಂದದ ಬಗ್ಗೆ ರಸವತ್ತಾಗಿ ಮಾತನಾಡುತ್ತಿದ್ದುದು, ಆದರೆ ಇದೇ ಕಾರಣಕ್ಕೆ ಅವನು ಮತ್ತೆ ಅನೇಕರಿಗೆ ರೋಚಕವಾಗಿದ್ದ.. ನನಗಂತೂ ಎರಡೂ ವಿಶೇಷ ಎನಿಸಲಿಲ್ಲ. ಏಕೆಂದರೆ ನನಗೆ ಅವನ ತವಕಗಳು ಪೂರ್ಣವಾಗಿ ಅಲ್ಲದಿದ್ದರೂ ಅರೆಬರೆಯಾಗಿಯಾದರೂ ಅರ್ಥವಾಗಿತ್ತು...

ನಾರಾಯಣ ನನ್ನನ್ನು ಮಾತನಾಡಿಸಲೆಂದೇ ಕೆಲವೊಮ್ಮೆ ಹುಡುಕಿಕೊಂಡು ಬರುತ್ತಿದ್ದ. ವಿಪರೀತ ಸಿನಿಮಾ ಹುಚ್ಚು ಇದ್ದ ಅವನು ಶಿವಣ್ಣನ ಕಟ್ಟಾ ಅಭಿಮಾನಿ, ಆಗಿನ್ನೂ ಶಿವರಾಜ್ ಕುಮಾರ್ ಇನ್ನಿಂಗ್ಸ್ ಶುರು ಆಗಿ ನಾಲ್ಕೈದು ವರ್ಷ ಆಗಿತ್ತು ಅಷ್ಟೇ. ಶಿವಣ್ಣನಂತೆ ಹೇರ್ ಸ್ಟೈಲ್ ಬಿಡುತ್ತೇನೆ ಅಂತಾ ನಾರಾಯಣ ಗುಂಗುರು ಕೂದಲನ್ನು ಉದ್ದ ಬಿಟ್ಟ. ಪ್ರತಿ ವಾರವೂ ತಪ್ಪದೆ ಸಿನಿಮಾ ನೋಡಲೆಂದು ಸಿಟಿಗೆ ಹೋಗುತ್ತಿದ್ದ. ಹಿಂದಿ ಸಿನಿಮಾಗಳ ಬಗ್ಗೆ ಅವನಿಗೆ ಒಳ್ಳೆ ಹುಚ್ಚಿತ್ತು. ಆಗಂತೂ ಬಾಲಿವುಡ್ ನಲ್ಲಿ ಪ್ರೇಮಪರ್ವ. 'ಮೈನೆ ಪ್ಯಾರ್ ಕಿಯಾ', 'ದಿಲ್', 'ಕಯಾಮತ್ ಸೇ ಕಯಮಾತ್ ತಕ್', 'ಅಶಿಕಿ' ಹೀಗೆ ಬಿಸಿರಕ್ತದ ಪ್ರೇಮ ಕಾವ್ಯಗಳದ್ದೇ ಅಬ್ಬರ. ಹಾಗಾಗೇ ಆಗಿನ ದೊಡ್ಡವರ ಬಾಯಲ್ಲಿ ಅದು, "ಯುವ ಪೀಳಿಗೆ ಕುಲಗೆಟ್ಟು ಹೋಗಲು ಸಂಕ್ರಮಣ ಕಾಲ'. ಇದು ಸಾಲದೆಂಬಂತೆ ರವಿಚಂದ್ರನ್ನ ಸಾಲು ಸಾಲು ಸಿನಿಮಾಗಳು. ಹೀಗಿರುವಾಗ ಹದಿಹರೆಯಕ್ಕೆ ಬಿದ್ದಿದ್ದ ನಾರಾಯಣ ಹೇಗೆ ತಾನೆ ನಾಲ್ಕು ವರ್ಷದ ಹಿಂದಿನ ತರಗತಿಯಲ್ಲಿ ಕುಳಿತು ನೀರಸವೆನಿಸುವ ಪಾಠ ಕೇಳಿಯಾನು ಹೇಳಿ? ಊರೂರು ಅಲೆದು ಕಂಡಾಪಟ್ಟೆ ಹುಡುಗಿಯರ ಸೌಂದರ್ಯವನ್ನೆಲ್ಲಾ ಕಣ್ತುಂಬಿಕೊಂಡು ಬಂದು ವಣರ್ಿಸಲು ಸಾಧ್ಯವಾಗದೆ ತೊಳಲಾಡುತ್ತಿದ್ದ ಅವನಿಗೆ ಹದಿನೈದೊಂದಲ ಮಗ್ಗಿ ಎಷ್ಟೆಲ್ಲಾ ಬೇಸರ ಹುಟ್ಟಿಸಿರಬೇಡ!!

ಮೈನೆ ಪ್ಯಾರ್ ಕಿಯಾದಲ್ಲಿ ಸಲ್ಮಾನ್ ಖಾನ್ ಹೇಳುವ, "ಮಾ.. ವೋ ಮ್ಯಾಕ್ಸ್ಸಿ, ಮಿನಿ, ಮಿಡಿ, ಚೂಡಿ' ಎನ್ನುವ ಡೈಲಾಗಂತೂ ಅವನಿಗೆ ಯದ್ವಾತದ್ವ ಇಷ್ಟ ಆಗಿತ್ತು. ಅದೆಷ್ಟು ಸಾರಿ ಈ ಡೈಲಾಗ್ಅನ್ನು ಹೊಡೆಯುತ್ತಿದ್ದನೋ... "ಮೈನೆ ಪ್ಯಾರ್ ಕಿಯಾ' ಸಿನಿಮಾವನ್ನು ನಾನು ನೋಡಿದ್ದು ತಡವಾಗಿಯೇ ಆದರೂ ನಾರಾಯಣ ಈ ಡೈಲಾಗ್ ಮಾತ್ರ ಯಾವತ್ತೂ ನನ್ನೊಳಗೆ ಉಳಿದಿತ್ತು...

ಮುಂಚೆ ಎಲ್ಲಾ ನಾರಾಯಣ ನನ್ನನ್ನು ಇರಾನ್ - ಇರಾಕ್ ವಾರ್ ಬಗ್ಗೆ ಹೇಳು, ಅಮೆರಿಕ - ಇರಾಕ್ ವಾರ್ ಬಗ್ಗೆ ಹೇಳು, ಇಸ್ರೇಲ್ ಬಗ್ಗೆ ಹೇಳು, ಕುವೈತ್ ಬಗ್ಗೆ ಹೇಳು, ಸ್ಕಡ್ ಮಿಸಾಯಿಲ್, ಪೇಟ್ರಿಯಾಟ್ ಮಿಸಾಯಿಲ್ ಬಗ್ಗೆ ಹೇಳು ಅಂತೆಲ್ಲಾ ಸದಾ ಕಾಡುತ್ತಿದ್ದ. ವಿಪರೀತ ಮ್ಯಾಗ್ಜೈನ್ಗಳನ್ನು ಓದುತ್ತಿದ್ದ ನನ್ನ ಬಳಿ ನನ್ನ ವಯಸ್ಸಿಗೆ ನಿಲುಕುವಷ್ಟು ಮಾಹಿತಿ ಧಾರಳವಾಗಿಯೇ ಇರುತ್ತಿತ್ತು. ಇರಲಿ, ಹೀಗೆ ಗಲ್ಫ್ ವಾರ್ ಸುತ್ತಲೇ ಸುತ್ತುತ್ತಿದ್ದ ನಾರಾಯಣ ಅದ್ಯಾವಾಗ ಮ್ಯಾಕ್ಸಿ, ಮಿನಿ, ಮಿಡಿ, ಚೂಡಿಗೆ ಪಕ್ಷಾಂತರವಾದನೋ ಗೊತ್ತಾಗಲೇ ಇಲ್ಲ. ಈ ವಿಷಯಗಳಲ್ಲಿ ಅವನ ಜ್ಞಾನದಾಹ ತಣಿಸುವ ಯಾವುದೇ ಸಿದ್ಧತೆ ನನಗಿರಲಿಲ್ಲ. ಹಾಗಾಗೇ ಅವನು ಮುಂದೆ ಲವ್ಲೆಟರ್ಗಳ ಬರೆಯುವಾಗ ನನ್ನನ್ನು ಯಾವತ್ತೂ ಒಂದು ಮಾತು, ಸಣ್ಣದೊಂದು ಸಲಹೆ ಕೂಡಾ ಕೇಳಿರಲಿಲ್ಲ. ಮೊದಲೆಲ್ಲಾ ಕೇವಲ ಲವ್ ಲೆಟರ್ ಬರೆಯೋದು ಮಾತ್ರವೇ ಮಾಡುತ್ತಿದ್ದ ಅವನು ಆಮೇಲೆ ಅದನ್ನು ಕೊಡುವುದಕ್ಕೂ ಶುರುವಿಟ್ಟ.

ಕಡೆಗೆ ಈ ಚಟುವಟಿಕೆಗಳು ಮತ್ತೂ ಮುಂದುವರೆದು ಅವನು ಪ್ರಣ(ಳ)ಯಾಂತಕ ಕಾರ್ಯಕ್ರಮ ಹಮ್ಮಿಕೊಳ್ಳುವ ವೇಳೆಗೆ ಆ ಬೇಡದ ಊರಿಗೆ ಬೈ ಬೈ ಹೇಳುವ ಕಾಲ ನನಗೆ ಬಂದಿತ್ತು. ನಗರಕ್ಕೆ ಸ್ಥಳಾಂತರವಾಗುವ ಸಂಭ್ರಮದಲ್ಲಿ ಹಾಗೂ ಊರು ಬಿಡುವ ಕಾತರದಲ್ಲಿದ್ದ ನನಗೆ ಅವನನ್ನು ಭೇಟಿ ಮಾಡುವ ಅವಕಾಶ ಆಗಲಿಲ್ಲ. ಆ ಸಂಭ್ರಮದಲ್ಲಿ ಅವನಿಗೆ ಸಿಗುವುದು ಮುಖ್ಯ ಎಂದೂ ಅನಿಸಲಿಲ್ಲ. ಸಿಟಿ ಸೇರಿದ ಮೇಲಂತೂ ಹೊಸ ಸ್ಕೂಲು, ಹೊಸ ಫ್ರೆಂಡ್ಸ್ ಅದಕ್ಕಿಂತ ಮುಖ್ಯವಾಗಿ ನಾನು ಯಾವತ್ತೂ ಬಯಸಿದ್ದ "ಸೊಫೆಸ್ಟಿಕೇಟೆಡ್ ಲೈಫ್ ಸ್ಟೈಲ್' ನಡುವೆ ನಾರಾಯಣ ಅರೆಕ್ಷಣವೂ ಕಾಡಲಿಲ್ಲ. ಆಗ ಬಂದಿದ್ದೇ, "ನಾರಾಯಣನಿಗೆ ಇಲೆಕ್ಟಾನಿಕ್ ಅಂಗಡಿವರು ಮೀಸೆ ಕತ್ತರಿಸಿದ್ದಾರೆ. ಅವನು ಈಗ ಸ್ಕೂಲ್ಗೆ ಬರುತಾ ಇಲ್ಲ. ಮೇಷ್ಟ್ರು ಬೈದರು' ಅನ್ನೋ ಕಾಗದ. ಬೆಳೆದು ನಿಂತಿದ್ದ ನಾರಾಯಣನಿಗೆ ಆ ಊರಿನಲ್ಲಿದ್ದ ಇಲೆಕ್ಟ್ರಾನಿಕ್ ಅಂಗಡಿಯಲ್ಲಿನ ಕೆಲ ಪಡ್ಡೆಗಳು ಪುಸಲಾಯಿಸಿ, ಒಪ್ಪದಿದ್ದಾಗ ಒತ್ತಾಯದಿಂದಲೇ ಶೇವ್ ಮಾಡಿದ್ದರು. ಮೀಸೆ, ಗಡ್ಡ ಶೇವ್ ಮಾಡಿಕೊಂಡು ನಾರಾಯಣ ಮಿಡಲ್ಸ್ಕೂಲ್ನ ತನ್ನ ತರಗತಿಗೆ ಹೋಗಿದ್ದ. ಉರಿದು ಬಿದ್ದ ಮೇಷ್ಟ್ರು ಉಗಿದಿದ್ದರು. ಮೊದಲೇ ಮುಜುಗರ ಅನುಭವಿಸುತ್ತಿದ್ದ ನಾರಾಯಣನಿಗೆ ಮತ್ತೂ ಮುಜುಗರ ಹೆಚ್ಚಿ ಅಲ್ಲಿಂದಾಚೆಗೆ ಅವನು ಶಾಲೆಗೆ ಹೋಗುವುದನ್ನೇ ಬಿಟ್ಟ.

ನನ್ನನ್ನು ನೋಡಲೆಂದೇ ಒಂದೆರಡು ಬಾರಿ ಸಿಟಿಗೂ ಬಂದಿದ್ದ ನಾರಾಯಣ ಆಗ ಈ ಎಲ್ಲ ವಿಷಯವನ್ನು ವಿವರಿಸಿದ್ದ.. ಪ್ರೈವೇಟ್ ಆಗಿ ಎಸ್ಎಸ್ಎಲ್ಸಿ ಎಕ್ಸಾಮ್ ತಗೋತೀನಿ ಅಂತಾನೂ ಹೇಳಿದ್ದ. ಮತ್ತೊಂದು ಸಾರಿ ಬಂದವನು ಹೋಟೆಲೊಂದರಲ್ಲಿ ರವಾ ಇಡ್ಲಿ ಕೊಡಿಸಿ, ಕೋಕ್ ಕುಡಿಸಿ ಏಳನೇ ಕ್ಲಾಸಿನಲ್ಲಿ ಓದುತ್ತಿದ್ದ ನನ್ನನ್ನು, "ನೀನು ಬೇಗ ಒಳ್ಳೇ ಹುಡುಗಿ ನೋಡಿ ಲವ್ ಮಾಡ್ಬಿಡು' ಎಂದು ಹೇಳಿ ಹೋಗಿದ್ದ. ನಾನು ಸಹ ಆಗ ಪ್ರಾಮಾಣಿಕವಾಗಿಯೇ ಅಂದುಕೊಂಡಿದ್ದೆ ನಾನು ಲವ್ ಮಾಡೋವಾಗ ನಾರಾಯಣನಿಗೆ ಖಂಡಿತ ಹೇಳೇ ಹೇಳುತ್ತೇನೆ ಅಂಥಾ..! ಆದರೆ, ಅದೇಕೋ ಅವನ ಆಸೆ ಅಷ್ಟು ಬೇಗ ಈಡೇರಲಿಲ್ಲ...!!

ಮುಂದೆ ಯಾವತ್ತೋ ಒಂದು ದಿನ ನಾನು ಆಯ್ದ ಕೆಲ ಆತ್ಮೀಯ ಗೆಳೆಯರಿಗೆ ಕಾಫೀ ಡೇ ಒಂದರಲ್ಲಿ ಪಾಟರ್ಿ ಕೊಟು,್ಟ "ಆಮ್ ಇನ್ ಲವ್' ಅಂತ ಉದ್ವೇಗದಿಂದ ಹೇಳೋ ಸಂದರ್ಭದಲ್ಲಿ ನಾರಾಯಣ ಅಪ್ಪಿತಪ್ಪಿಯೂ ಜ್ಞಾಪಕ ಬರಲಿಲ್ಲ.

ತಲೆತುಂಬಾ ಹುಡುಗಿಯರ ಕನಸು ಕಾಣುತ್ತಿದ್ದ ನಾರಾಯಣ, ಕೆರೆ ಬಳಿ ಮುಸ್ಸಂಜೆ ಮಬ್ಬಲ್ಲಿ 'ಕೇಳಿ' ನಡೆಸಿದ್ದುದನ್ನು ಮುಚ್ಚು ಮರೆ ಇಲ್ಲದೆ ಹೇಳಿಕೊಂಡಿದ್ದ. ಹಾಲು ತರಲೆಂದು ನೆರೆ ಮನೆಗೆ ಹೋಗಿ ಅಲ್ಲಿ ಇವನ ಮೇಲೆ ಯಾವತ್ತೂ ಕಣ್ಣಿಟ್ಟಿದ್ದ ಹುಡುಗಿಯೊಬ್ಬಳನ್ನು ಚುಂಬಿಸಿ ಬಂದಿದ್ದನ್ನೂ ವಿವರಿಸಿದ್ದ.. ಬುದ್ಧಿವಂತನಾದರೂ ಮುಜುಗರದಿಂದ ಓದಲಾಗದೆ, ಅಪ್ಪ ಅಮ್ಮನನ್ನು ಬಾಲ್ಯದಲ್ಲೇ ಕಳೆದುಕೊಂಡ ನಾರಾಯಣ, ಈಗಲೂ 'ಮಾ... ವೋ ಮ್ಯಾಕ್ಸಿ, ಮಿಡಿ, ಮಿನಿ' ಅನ್ನೋ ಡೈಲಾಗ್ ನೆನಪಿಸ್ಕೋತಾನಾ?.....

No comments:

Post a Comment